ಮೀನಾ ಹ್ಯಾರಿಸ್ ಸಾಮಾಜಿಕ ಹೋರಾಟಗಾರ್ತಿ ನೊದೀಪ್ ಕೌರ್ ಅವರಿಗಾಗುತ್ತಿರುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ನಮ್ಮ ದೇಶದ ಮುಠ್ಠಾಳ ಸೆಲೆಬ್ರಿಟಿಗಳು ಇಂಥ ವಿಷಯಗಳ ಬಗ್ಗೆ ಮಾತಾಡೋದೇ ಇಲ್ಲ. ಹೊರಗಿನವರು ಮಾತಾಡಿದರೆ, ಬಿಡ್ರೀ ಇದು ನಮ್ಮ ಒಳಗಿನ ವಿಷಯ ಎನ್ನುತ್ತಾರೆ, ಎಂಥ ದುಷ್ಟ ಮನಸ್ಥಿತಿ.
ನೊದೀಪ್ ಕೌರ್ ಕೇವಲ 24 ವರ್ಷ ವಯಸ್ಸಿನ ಪಂಜಾಬ್ ಮೂಲದ ದಲಿತ ಕಾರ್ಮಿಕ ಹೋರಾಟಗಾರ್ತಿ. ಹರಿಯಾಣಾದ ಕುಂಡ್ಲಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಮಿಕ ಚಳವಳಿಯಲ್ಲಿ ಸಕ್ರಿಯಳಾಗಿದ್ದಾಳೆ. ರೈತ ಆಂದೋಲನದಲ್ಲಿ ಪಾಲ್ಗೊಂಡಿರುವ ಮಜ್ದೂರ್ ಅಧಿಕಾರ್ ಸಂಘಟನ್ (MAS) ಎಂಬ ಸಂಘಟನೆಯ ಸದಸ್ಯೆ. 24 ದಿನಗಳಿಂದ ಈಕೆ ಜೈಲಿನಲ್ಲಿದ್ದಾಳೆ. ಜನವರಿ 12ರಂದು ಆಕೆಯನ್ನು ಸಿಂಘು ಗಡಿಯ ಹೋರಾಟದ ಟೆಂಟ್ ಒಂದರಿಂದ ಎಳೆದೊಯ್ಯಲಾಯಿತು.
ಆಕೆಯ ಸೋದರಿಯ ಪ್ರಕಾರ ನೊದೀಪ್ ಮೇಲೆ ಸುಳ್ಳು ಕೇಸುಗಳನ್ನು ಹೂಡಲಾಗಿದೆಯಲ್ಲದೆ ಹರಿಯಾಣ ಪೊಲೀಸರು ಆಕೆಯ ಖಾಸಗಿ ಅಂಗಗಳಿಗೆ ಗಾಯವಾಗುವಂತೆ ಥಳಿಸಿದ್ದಾರೆ. “ನಾನು ಆಕೆಯನ್ನು ಬಂಧನವಾದ ಮಾರನೇ ದಿನವೇ ಕರ್ನಲ್ ಜೈಲಿನಲ್ಲಿ ಭೇಟಿಯಾದೆ. ಆಕೆ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಹೇಳಿದಳು. ಪುರುಷ ಪೊಲೀಸರು ಭೀಕರವಾಗಿ ಥಳಿಸಿದ್ದರು. ಆಕೆಯ ಗುಪ್ತಾಂಗಗಳ ಮೇಲೂ ಗಾಯದ ಗುರುತುಗಳಿವೆ. ನಾವು ತಕ್ಷಣ ಮೆಡಿಕಲ್ ಟೆಸ್ಟ್ ಮಾಡಿಸಿ, ಕೋರ್ಟಿಗೆ ನೀಡಿದೆವು. ನಮಗಿನ್ನೂ ಗೊತ್ತಿಲ್ಲ, ಆ ವರದಿಯ ಗತಿ ಏನಾಯಿತೆಂಬುದು” ಎನ್ನುತ್ತಾಳೆ ರಾಜವೀರ್ ಕೌರ್. ರಾಜವೀರ್ ಕೌರ್ ನೊದೀಪಳ ಹಿರಿಯ ಸೋದರಿ. ಆದರೆ ಎಸ್ ಪಿ ಜಶಾಂದೀಪ್ ಯಥಾ ಪ್ರಕಾರ ಇದೆಲ್ಲ ಸುಳ್ಳು ಕಣ್ರೀ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಆಗೇ ಇಲ್ಲ ಎನ್ನುತ್ತಿದ್ದಾರೆ.
24 ವರ್ಷ ವಯಸ್ಸಿನ ಈ ಹುಡುಗಿಯ ಮೇಲೆ ಎಕ್ಟಾರ್ಷನ್ ಕೇಸು ಹೂಡಲಾಗಿದೆ. ಕೊಲೆಯತ್ನದ ಮೊಕದ್ದಮೆ ದಾಖಲಾಗಿದೆ. ರೈತ ಕಾಯ್ದೆಗಳು ಕೇವಲ ರೈತರನ್ನು ಬಾಧಿಸುವುದಿಲ್ಲ. ಬದಲಾಗಿ ರೈತಕೂಲಿಗಳಿಗೂ ಮಾರಕ ಎಂಬುದನ್ನು ಅರಿತು ನೊದೀಪ್ ಹೋರಾಟದಲ್ಲಿ ಪಾಲ್ಗೊಂಡಿದ್ದಳು.
ಡಿಸೆಂಬರ್ 28ರಂದು MAS ಸಂಘಟನೆ ಬಾಕಿ ಸಂಬಳ ನೀಡಲು ಒತ್ತಾಯಿಸಿ ಹಮ್ಮಿಕೊಂಡಿತ್ತು. ಆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇತ್ತ ಜ.12ರಂದು ನೊದೀಪ್ ಳನ್ನು ಬಂಧಿಸಲಾಯಿತು.
ನೊದೀಪ್ ಅಕ್ಕ ರಾಜವೀರ್ ಹೇಳುವುದನ್ನು ಕೇಳಿದರೆ ನಾವೆಲ್ಲರೂ ನಾಚಿಕೆಯಿಂದ ತಲೆ ತಗ್ಗಿಸುವಂತಾಗುತ್ತದೆ. “ಮುಖ್ಯವಾಹಿನಿಯ ಮಾಧ್ಯಮಗಳು ನೊದೀಪ್ ಕುರಿತು ಮಾತನಾಡುತ್ತಿಲ್ಲ. ನಾಗರಿಕ ಸಮಾಜವೂ ಮಾತನಾಡುತ್ತಿಲ್ಲ. ನೀವು ಮೇಲ್ಜಾತಿಯವರಾಗಿದ್ದರೆ ಸಮಾಜ ನಿಮಗಾದ ಅನ್ಯಾಯಕ್ಕೆ ಮಿಡಿಯುತ್ತದೆ. ನೀವು ಕಾರ್ಮಿಕರ, ಆದಿವಾಸಿಗಳ, ದಲಿತರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದ್ದರೆ ಯಾರ ಕರುಳೂ ಚುರ್ ಎನ್ನುವುದಿಲ್ಲ. ಇಷ್ಟೇ ವ್ಯತ್ಯಾಸ”
ನೊದೀಪ್ ಯಾಕೆ ಹರಿಯಾಣ ಪೊಲೀಸರಿಗೆ ಸಾಫ್ಟ್ ಟಾರ್ಗೆಟ್ ಆಗಿದ್ದಾಳೆ ಎಂಬುದು ಅರ್ಥವಾಯಿತಲ್ಲವೇ? ಇಂಥ ಸಂದರ್ಭದಲ್ಲಿ ಮೀನಾ ಹ್ಯಾರಿಸ್ ಈಕೆಯ ಪರವಾಗಿ ಧ್ವನಿ ಎತ್ತಿರುವುದು ಒಳ್ಳೆಯ ಬೆಳವಣಿಗೆ. ಮೀನಾ ಅಲ್ಲದೆ ಇನ್ನೇನು ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್ ಧ್ವನಿ ಎತ್ತಲು ಸಾಧ್ಯವೇ?
ಸಂಜೆ #ರೈತಹೋರಾಟದೊಂದಿಗೆಕರ್ನಾಟಕ #IndianFarmersHumanRights ಟ್ವಿಟರ್ ಅಭಿಯಾನದಲ್ಲಿ ಇಂಥ ನೂರಾರು ವಿಷಯಗಳ ಕುರಿತು ಮಾತನಾಡೋಣ. ಪೊಲೀಸರ ಕೈಯಲ್ಲಿ, ಜೈಲುಗಳಲ್ಲಿ, ಭೀಕರ ಕೊರೆವ ಚಳಿಯಲ್ಲಿ ನಲುಗುತ್ತಿರುವ ಜೀವಗಳ ಕುರಿತು ನಾವಲ್ಲದೆ ಇನ್ಯಾರು ಮಾತನಾಡಬೇಕು ಹೇಳಿ?
– ದಿನೇಶ್ ಕುಮಾರ್ ಎಸ್.ಸಿ., ಹಿರಿಯ ಪತ್ರಕರ್ತರು




