ರೈತರ ಪ್ರತಿಭಟನೆ ಬೆಂಬಲಿಸದ ಸಚಿನ್ ತೆಂಡುಲ್ಕರ್ ಆಸ್ತಿಯೆಷ್ಟು?

5 years ago

ಪಾಪ್ ಗಾಯಕಿ ರಿಹಾನ ಮತ್ತು ಹೋರಾಟಗಾರ್ತಿ ಗ್ರೆಟಾ ಭಾರತದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮಾಡಿದ ಟ್ವೀಟ್ ಗೆ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕೆರಳಿದ್ದರು.

ಭಾರತದ ಸಾರ್ವಭೌಮತೆಯಲ್ಲಿ ರಾಜಿಯಾಗಬಾರದು. ಬಾಹ್ಯ ಶಕ್ತಿಗಳು ಕೇವಲ ಪ್ರೇಕ್ಷಕರು ಮಾತ್ರ. ಆದರೆ, ಅವರು ಪಾಲುದಾರರಲ್ಲ. ಭಾರತೀಯರಿಗೆ ಮಾತ್ರ ಭಾರತವನ್ನು ಅರಿಯಲು ಸಾಧ್ಯ ಮತ್ತು ಭಾರತದ ಕುರಿತು ನಿರ್ಧರಿಸಬೇಕು. ನಾವೆಲ್ಲ ದೇಶವಾಗಿ ಒಗ್ಗಾಟ್ಟಾಗಿರಬೇಕು ಎಂದು ಟ್ವೀಟರ್ ಮೂಲಕ ಸಚಿನ್ ತೆಂಡುಲ್ಕರ್ ಕರೆ ನೀಡಿದ್ದರು.

ಇವರದೇ ಹಾದಿಯನ್ನು ಅನುಸರಿಸಿದ್ದ ಕೆಲವು ಬಾಲಿವುಡ್ ತಾರೆಯರು ಅನ್ನದಾತರ ಪರ ನಿಲ್ಲುವ ಬದಲು ಕೇಂದ್ರ ಸರ್ಕಾರದ ಪರ ಬ್ಯಾಟ್ ಬೀಸಿದ್ದರು. ಕೆಲವು ವಿಚಾರಗಳ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಸಚಿನ್ ತೆಂಡುಲ್ಕರ್ ಅವರ ಈ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬೆಂಬಲಿಸಿದರೆ, ಇನ್ನು ಕೆಲವರು ಅವರ ಕ್ರಿಕೆಟ್ ಆಟ ಮತ್ತು ಅವರ ನಡೆಯನ್ನು ವಿರೋಧಿಸಿದ್ದರು. ಅವರ ಚಿತ್ರಗಳನ್ನು ಚಿತ್ರವಿಚಿತ್ರವಾಗಿ ರಚಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಅದಕ್ಕಿಂತ ಕುತೂಹಲಕಾರಿ ಸಂಗತಿಯೆಂದರೆ, ಇಂತಹ ಮಾಜಿ ಕ್ರಿಕೆಟಿಗರು, ಬಾಲಿವುಡ್ ತಾರೆಯರು ಅನ್ನಹಾಕುತ್ತಿರುವ ರೈತರ ಬೆಂಬಲಕ್ಕೆ ನಿಲ್ಲದೆ, ಕೇಂದ್ರದ ಪರ ನಿಂತಿದ್ದು ಏಕೆ? ಎಂಬ ಪ್ರಶ್ನೆ. ವಿಶೇಷ ಸಂಗತಿಯೆಂದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಇವರು ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶಿತರಾಗುತ್ತಾರೆ. ಜೊತೆಗೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿಯನ್ನು ಕೂಡ ಇದೇ ಅವಧಿಯಲ್ಲಿ ಪಡೆಯುತ್ತಾರೆ. ಆದರೆ, ರಾಜ್ಯಸಭೆ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸದೇ ಇರುವ ಆರೋಪ ಕೂಡ ಇವರ ಹೆಗಲಮೇಲಿದೆ. ಆದರೆ, ರಾಜ್ಯಸಭೆ ಸದಸ್ಯರಿಗೆ ನೀಡುವ ಸ್ಥಳೀಯ ಅಭಿವೃದ್ಧಿ ನಿಧಿಯಡಿಯಲ್ಲಿ ಇವರು ಕೆಲವು ನಾಗರಿಕರಿಗೆ ನೆರವು ನೀಡಿದ್ದೂ ಹೌದು.

ಅದಿರಲಿ. ಇವರು ಒಂದು ಕಾಲದಲ್ಲಿ ದೇಶದ ಪರವಾಗಿ ಕ್ರಿಕೆಟ್ ಆಡಿದ್ದೆಲ್ಲ ಆಗಿದೆ. ಆದರೆ ಇವರು ದೇಶದ ಅನ್ನದಾತರ ಹೋರಾಟದ ಪರ ಏಕೆ ನಿಲ್ಲುತ್ತಿಲ್ಲ? ಎಂಬ ಪ್ರಶ‍್ನೆಗೆ ಉತ್ತರ ಸಿಗುತ್ತಿಲ್ಲ. ಆದರೆ, ಕೆಲವು ಅಂಕಿಅಂಶಗಳು ಇದರ ಹಿಂದಿನ ಕಾರಣಗಳನ್ನು ಬಯಲು ಮಾಡದೇ ಇರುವುದಿಲ್ಲ. 1990ರ ದಶಕದಿಂದ ಸಚಿನ್ ತೆಂಡುಲ್ಕರ್ ಅತ್ಯಂತ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜೀವನ

ಟೆಸ್ಟ್ ಪಾದಾರ್ಪಣೆ: 15 ನವೆಂಬರ್ 1989, ಪಾಕ್ ವಿರುದ್ಧ

ಕಡೆಯ ಟೆಸ್ಟ್: 14 ನವೆಂಬರ್ 2013, ವೆಸ್ಟ್ ಇಂಡೀಸ್ ವಿರುದ್ಧ

ಏಕದಿನ ಪಂದ್ಯ ಪಾದಾರ್ಪಣೆ: 18 ಡಿಸೆಂಬರ್ 1989, ಪಾಕ್ ವಿರುದ್ಧ

ಕಡೆಯ ಏಕದಿನ ಪಂದ್ಯ: 18 ಮಾರ್ಚ್ 2012, ಪಾಕ್ ವಿರುದ್ಧ

ಟ್ವೆಂಟಿ20 ಪಾದಾರ್ಪಣೆ: 01 ಡಿಸೆಂಬರ್ 2006, ದಕ್ಷಿಣ ಆಫ್ರಿಕಾ ವಿರುದ್ಧ

                                      ಟೆಸ್ಟ್            ಏಕದಿನ          ಪ್ರ.ದ             ಇತರೆ

ಪಂದ್ಯಗಳು                         200             463             310             551

ರನ್‍                                 15,921       18,426       25,396       21,999

ಬ್ಯಾಟಿಂಗ್ ಸರಾಸರಿ               53.78         44.83         57.84         45.54

100/50                          51/68                   49/96                   81/116       60/114

ಗರಿಷ್ಠ ಮೊತ್ತ                     248*            200*            248*            200*

ಬೌಲಿಂಗ್                          4,240                   8,054                   7,605                   10,230

ವಿಕೆಟ್‍ಗಳು                         46               154             71               201

ಬೌಲಿಂಗ್ ಸರಾಸರಿ                54.17                   44.48                   61.74                   42.17

ಒಂದು ಇನ್ನಿಂಗ್ಸ್ ನಲ್ಲಿ 5ವಿಕೆಟ್ 0              2                 0                 2

ಅತ್ಯುತ್ತಮ ಬೌಲಿಂಗ್            3/10            5/32            3/10            5/32

ಕ್ಯಾಚ್                              115             140             186             175

2013ರಲ್ಲಿ ಸಚಿನ್ ತೆಂಡುಲ್ಕರ್ ‍ನಿವೃತ್ತಿ ಘೋಷಿಸಿದರು. ಆದರೆ ಇಂದಿಗೂ ಅವರ ತಾರಾ ಮೆರುಗು ಸ್ವಲ್ಪವೂ ಕುಂದಿಲ್ಲ. ಕಳೆದ ಏಪ್ರಿಲ್ ನಲ್ಲಿ ಅವರ 47ನೇ ಜನ್ಮದಿನಾಚರಣೆಯಂದು ಮಧ್ಯರಾತ್ರಿವರೆಗು ಸಾಮಾಜಿಕ ಜಾಲತಾಣಗಳಲ್ಲಿ ಅವರ ಜನ್ಮದಿನಾಚರಣೆಯ ವಿಷಯವೇ ವೈರಲ್ ಆಗಿತ್ತು. ಅಷ್ಟರ ಮಟ್ಟಿಗೆ ಅವರು ವೃತ್ತಿ ಜೀವನದಿಂದ ನಿವೃತ್ತರಾಗಿ 7 ವರ್ಷಗಳು ಗತಿಸಿದರೂ ಜನಮಾನಸದಿಂದ ಮರೆಯಾಗಿಲ್ಲ.

ಅವರು ತಾರಾಮೆರುಗು ಕಳೆದುಕೊಳ್ಳದೇ ಇರಲು ಒಂದು ಪ್ರಮುಖ ಕಾರಣವಿದೆ. ಅದೇ ಜಾಹೀರಾತು. 1995ರಿಂದ ಇವರು ವಿವಿಧ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಮೊಟ್ಟಮೊದಲು ಜಾಹೀರಾತಿಗಾಗಿಯೇ 100 ಕೋಟಿ ರೂ. ಬೃಹತ್ ಮೊತ್ತದ ಒಪ್ಪಂದವನ್ನು ಮಾಡಿಕೊಂಡ ಕ್ರೀಡಾಪಟು ಆಗಿ ಕೂಡ ಸಚಿನ್ ದಾಖಲೆ ಬರೆದಿದ್ದಾರೆ. ಅವರ ದಾಖಲೆಗಳು ಕೇವಲ ರನ್, ಶತಕ, ಅರ್ಧಶತಕಗಳಿಗೆ ಮಾತ್ರ ಸೀಮಿತವಾಗಿಲ್ಲ ಅಲ್ಲವೇ?

ಎಂಟ್ರಪ್ರಿನರ್.ಕಾಂ entrepreneur.com ವರದಿ ಮಾಡಿರುವ ಪ್ರಕಾರ, ಸಚಿನ್ ತೆಂಡುಲ್ಕರ್ ಅವರ ಒಟ್ಟು ಆಸ್ತಿಯ ಮೊತ್ತ ಬರೋಬ್ಬರಿ 1250 ಕೋಟಿ ರೂ. ಕ್ರಿಕೆಟ್ ಆಟಗಾರನಾಗಿ ವೃತ್ತಿಜೀವನಕ್ಕೆ ಕಾಲಿಟ್ಟ ಸಚಿನ್ ತೆಂಡುಲ್ಕರ್ 24 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ಅವರು ಗಳಿಸಿದ ಆಸ್ತಿಯ ಮೊತ್ತ ಯಾರಿಗಾದರೂ ಅಚ್ಚರಿ ಹುಟ್ಟಿಸುತ್ತದೆ.

ಇದರ ಪೈಕಿ ಬಿಸಿಸಿಐ ಜೊತೆಗಿನ ಅವರ ಒಪ್ಪಂದದಿಂದ ಆಗಿರುವ ಲಾಭವೇ ಬಹುಪಾಲು ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನು 2001ರಲ್ಲಿ ಎಂಆರ್‍ಎಫ್ ಜೊತೆಗೆ ಬರೋಬ್ಬರಿ 100 ಕೋಟಿ ರೂ. ಒಪ್ಪಂದವನ್ನು ಅವರು ಮಾಡಿಕೊಂಡಿದ್ದರು. 2019ರ ಅಂಕಿಅಂಶಗಳ ಪ್ರಕಾರ, ಸಚಿನ್ ತೆಂಡುಲ್ಕರ್ ಪ್ರತಿವರ್ಷ 18 ಮಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಬೃಹತ್ ಮೊತ್ತವನ್ನು ಗಳಿಸುತ್ತಿದ್ದಾರೆ.

ಇವರ ಒಟ್ಟು ಗಳಿಕೆಯಲ್ಲಿ ಬೂಸ್ಟ್, ಪೆಪ್ಸಿ, ಸನ್‍ಫೀಸ್ಟ್ ಮತ್ತು ವೀಸಾ, ಬಿ.ಎಂ.ಡಬ್ಲೂ, ಎಸ್.ಬಿ.ಐ ಮೂಚುಯಲ್ ಫಂಡ್, ಐಡಿಬಿಐ ಲೈಫ್ ಇನ್ಶುರೆನ್ಸ್, ಲುಮಿನಸ್, ಅಪೊಲೋ ಟೈರ್ಸ್ ಜೊತೆಗೆ ಮಾಡಿಕೊಂಡ ಬ್ರಾಂಡ್ ಅಂಬಾಸಿಡರ್ ಒಪ್ಪಂದಗಳಿಂದ ಬಂದ ಮತ್ತು ಬರುತ್ತಿರುವ ಆದಾಯವೂ ಸೇರಿಕೊಂಡಿದೆ.

ಒಂದು ಆ್ಯಪ್ ನ ಮಾಲೀಕರಾಗಿರುವ ಸಚಿನ್ ತೆಂಡುಲ್ಕರ್, ಇದರಲ್ಲಿ ಬರುವ ಜಾಹೀರಾತು ಮತ್ತು ಇತರ ಮೂಲಗಳಿಂದ ಕೂಡ ಆದಾಯಗಳಿಸುತ್ತಾರೆ. ಜೊತೆಗೆ, 7-8 ಕೋಟಿ ಮೊತ್ತದ ಐಷಾರಾಮಿ ಫ್ಲಾಟ್ ಅನ್ನು ಇವರು ಮುಂಬೈನಲ್ಲಿ ಹೊಂದಿದ್ದಾರೆ.

ಇನ್ನು ದೇಣಿಗೆ ಕೊಡುವ ವಿಷಯದಲ್ಲಿ ಕೂಡ ಸಚಿನ್ ಹಿಂದೆ ಬಿದ್ದಿಲ್ಲ. ಕೊರೊನಾ ವೈರಸ್ ನಿಯಂತ್ರಣಕ್ಕೆ ಅವರು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದನ್ನು ಹೊರತುಪಡಿಸಿ, ಮಹಾರಾಷ್ಟ್ರ ಸಿಎಂ ಪರಿಹಾರ ದೇಣಿಗೆಗೆ 25 ಲಕ್ಷವನ್ನು ನೀಡಿದ್ದಾರೆ. ಇದರೊಂದಿಗೆ ವಿಪಕ್ಷಗಳಿಂದ ವ್ಯಾಪಕ ಟೀಕೆಗೆ ಒಳಗಾಗಿರುವ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ವಿವಾದಕ್ಕೆ ಒಳಗಾಗಿರುವ ಪಿಎಂ ಕೇರ್ಸ್ ನಿಧಿಗೆ 25 ಲಕ್ಷ ರೂ.ಗಳನ್ನು ನೀಡಿದ್ದಾರೆ. ಈ ಮೂಲಕ ಒಟ್ಟಾರೆ ಕೊರೊನಾ ನಿಯಂತ್ರಣಕ್ಕೆ ಅವರು 1 ಕೋಟಿ ರೂ. ನೀಡಿದಂತಾಗಿದೆ.

ಇವೆಲ್ಲ ಅಂಕಿಅಂಶಗಳು ಅವರು ಆಡಳಿತ ಪಕ್ಷವನ್ನು ಬೆಂಬಲಿಸಲು ಮತ್ತು ರೈತರ ಪ್ರತಿಭಟನೆಯ ಪರ ಸೊಲ್ಲತ್ತದೇ ಇರುವುದಕ್ಕೆ ಕಾರಣವೇನು ಎಂಬುದಕ್ಕೆ ಸ್ಪಷ್ಟ ಕಾರಣವನ್ನು ನೀಡಿವೆ ಎನಿಸುತ್ತದೆಯಲ್ಲವೇ?

Leave a Reply