ಚಾಮರಾಜನಗರ: ತೀರುವಳಿ ಮಾಡಲಾಗಿರುವ ಸಾಲವನ್ನು ಮರುಪಾವತಿ ಮಾಡುವಂತೆ ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಎಸ್.ಬಿ.ಐ ಅಧಿಕಾರಿಗಳ ಕ್ರಮ ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಎಸ್.ಬಿ.ಐ ಎದುರು ಜಮಾಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಬ್ಯಾಂಕ್ ಅಧಿಕಾರಿಗಳ ವಿರುದ್ದ ಧಿಕ್ಕಾರದ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದ ರೈತ ಗುರುಸಿದ್ದಪ್ಪ ಅವರಿಗೆ ಚಾಮರಾಜನಗರ ಎಸ್.ಬಿ.ಐ ಅಧಿಕಾರಿಗಳು ನಿಮ್ಮ ಸಾಲ ತೀರುವಳಿ ಮಾಡಲಾಗಿದೆ ಎಂದು ನೋಟೀಸ್ ನೀಡಿ, ನಂತರ ಸಾಲವನ್ನು ಕಟ್ಟಲು ಅದೇ ರೈತನಿಗೆ ನೋಟಿಸ್ ನೀಡಿರುವುದು ಖಂಡನೀಯ. ಸಾಲ ತೀರುವಳಿ ನೋಟೀಸ್ ನೀಡಿ ಮತ್ತೆ ಸಾಲ ಕಟ್ಟು ಎನ್ನುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಕೂಡಲೇ ಬ್ಯಾಂಕ್ ನ ಹಿರಿಯ ಅಧಿಕಾರಿಗಳು ಬೇಜಾವಾಬ್ದಾರಿ ಅಧಿಕಾರಿಗಳಿಗೆ ರೈತರ ಸಾಲದ ಬಗ್ಗೆ ಮತ್ತು ಸಾಲ ಮನ್ನಾದ ಬಗ್ಗೆ ಅರಿವು ನೀಡಬೇಕು. ಮತ್ತು ಸಾಲದ ಹೆಸರಿನಲ್ಲಿ ರೈತರಿಗೆ ಪದೇ ಪದೇ ಮಾನಸಿಕ ಹಿಂಸೆ ನೀಡುತ್ತಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.




