ಎಲ್ಲರೂ ಸುಖವಾಗಿ ಇರಬಹುದಿತ್ತು! ಆದರೆ ಸುಖವಾಗಿ ಇರುವುದಾದರೂ ಹೇಗೆ?

2 years ago

ಆರ್‌ ಜಯಕುಮಾರ್‌ ಅವರ ಕಾಡು ಹಾದಿಯ ಬೆಳಕಿನ ಜಾಡು

ಆರ್‌ ಜಯಕುಮಾರ್‌ ಅವರ ಈ ಪುಸ್ತಕವನ್ನು ಓದಿ ಗಾಬರಿಗೊಂಡೆ. ಜಯಕುಮಾರ್‌ ಸ್ನೇಹಿತರೇ ಹೌದಾದರೂ, ಅವರ ಪತ್ನಿ ಲೀಲಾ ಸಂಪಿಗೆ ಚೆನ್ನಾಗಿ ಪರಿಚಯವಿದ್ದರೂ,  ಅವರ ಮನೆಯಲ್ಲಿ ಉಂಡದ್ದು ನಿಜವಾದರೂ, ಅವರ ಬಗ್ಗೆ ಗೊತ್ತಿರುವುದು ಬಹಳ ಕಡಿಮೆ ಅಂದುಕೊಂಡಾಗ ಸ್ವಲ್ಪ ನಾಚಿಕೆಯೂ ಆಯಿತು.

ನಾವೆಲ್ಲ ಜೊತೆಯಲ್ಲಿದ್ದರೂ ಪರಸ್ಪರ ಯಾಕೆ ತಿಳಿದುಕೊಂಡಿರುವುದಿಲ್ಲ? ಅವರು ಹೇಳುವುದಿಲ್ಲವೋ ಅಥವಾ ನಾವು ಕೇಳುವುದಿಲ್ಲವೋ? ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳುವುದು ಸುಸಂಸ್ಕೃತ  ನಡವಳಿಕೆ ಅಲ್ಲವೇ? ಅದು ಹೌದಾದರೆ ಮತ್ಯಾಕೆ ನಾವೆಲ್ಲ ಆತ್ಮಚರಿತ್ರೆ ಬರೆಯುತ್ತೇವೆ? ಆಸಕ್ತಿಯಿಂದ ಓದುತ್ತೇವೆ?

ಪುಸ್ತಕದ ಮೊದಲ ಭಾಗದಲ್ಲಿ ಕಾಣಿಸಿಕೊಳ್ಳುವ ಕೊಟ್ಯಾಡಿಯ ಕುಞ್ಞಮ್ಮ ಈ ಪುಸ್ತಕದ ಕೇಂದ್ರದಲ್ಲಿದ್ದು ಕೊನೆಯವರೆಗೆ ಓದುಗರನ್ನು ಹಿಡಿದಿಡುವ, ಕಾಡಿಸುವ, ಗಾಬರಿಗೊಳಿಸುವ, ಕಣ್ಣೀರಿಳಿಸುವ ಒಂದು ಪಾತ್ರ. ಅವರು ಜಯಕುಮಾರ್‌ ಅವರ ತಾಯಿ. ಕೇರಳದಲ್ಲಿ ಅತೀವ ಶೋಷಣೆಗೆ ಒಳಗಾಗಿರುವ ತಿಯಾ ಜಾತಿಗೆ ಸೇರಿದ ಅವರು ತೋಟದಲ್ಲಿ ಕೂಲಿ ಮಾಡುತ್ತಿದ್ದು ಬಡತನವನ್ನೇ ಹೊದ್ದು ಮಲಗಿದವರು.

ಆದರೆ ಆಕರ್ಷಕ ಮೈಕಟ್ಟು, ಒಳ್ಳೆಯ ಗುಣ ಮತ್ತು ಪ್ರಾಮಾಣಿಕತೆಗಳಿಂದಾಗಿ ಅವರು ತೋಟದ ಮೇನೇಜರ್‌ ಕೃಷ್ಣನ್‌ ನಾಯರ್‌ ಅವರ ಮನಸ್ಸನ್ನು ಗೆಲ್ಲುತ್ತಾರೆ. ನಾಯರ್‌ ತನ್ನ ಮನೆಯಲ್ಲಿ ಇದಿರಾದ ಎಲ್ಲ ವಿರೋಧಗಳನ್ನು ಇದಿರಿಸಿ ಕುಞ್ಞಮ್ಮನನ್ನು ಮದುವೆ ಅಗುತ್ತಾರೆ.

ಕೂಲಿ ಮಾಡುತ್ತಿದ್ದ ಕುಞ್ಞಮ್ಮ ಇದ್ದಕ್ಕಿದ್ದಂತೆಯೇ ಪಾಲ್ಘಾಟಿನಲ್ಲಿದ್ದ ಆಗರ್ಭ ಶ್ರೀಮಂತನ ಮನೆ ಸೇರುತ್ತಾರೆ. ಅಲ್ಲಿಯೇ ಅವರಿಗೆ ಎರಡು ಮಕ್ಕಳೂ ಜನಿಸುತ್ತಾರೆ. ಆದರೆ ಕವಿ ಮುದ್ದಣ ಉದ್ಘರಿಸಿದಂತೆ ʼಕಾಲಕ್ಕೆ ಗುಣಂ ಅಣಂ ಇಲ್ಲಂ ಗಡಾ!ʼ. ಗುಣಪಡಿಸಲಾಗದ ಖಾಯಿಲೆಗೆ ತುತ್ತಾದ ಕೃಷ್ಣನ್‌ ನಾಯರ್‌ ಅಸುನೀಗುತ್ತಾರೆ.

ನಾಯರ್‌ ತೀರಿಕೊಂಡ ತಕ್ಷಣ ಅವರ ಮನೆಯಲ್ಲಿ ಕುಞ್ಞಮ್ಮನ ಬಗ್ಗೆ ಇರುವ ಅಸಮಾಧಾನಗಳೆಲ್ಲ ಸ್ಫೋಟಗೊಂಡು ಅದೊಂದು ಬಲಿಹಾಕುವ ಸಂಚಾಗಿ ಪರಿವರ್ತನೆಯಾಗುತ್ತದೆ.

ಕೃಷ್ಣನ್‌ ನಾಯರ್‌ ಗೆಳೆಯ ದಾಮೋದರ್‌ ಮೆನನ್‌ ಕುಞ್ಞಮ್ಮನನ್ನೂ ಅವಳೆರಡೂ ಮಕ್ಖಳನ್ನೂ ಕೊಲೆಯ ಸಂಚಿನಿಂದ ಪಾರು ಮಾಡುತ್ತಾರೆ. ನಾಲ್ಕು ವರ್ಷದ ಮಗು ಚಂದ್ರಶೇಖರ ಮತ್ತು ಒಂಬತ್ತು ತಿಂಗಳ ಕಂಕುಳ ಮಗುವಿನೊಂದಿಗೆ ರಾತೋ ರಾತ್ರಿ ಮನೆ ಬಿಟ್ಟ ಕುಞ್ಞಮ್ಮ ಸುಮಾರು ೨೮೦ ಕಿಮೀ ದೂರ ನಡೆದು ತಾನು ಹಿಂದೆ ಕೆಲಸ ಮಾಡುತ್ತಿದ್ದ ಬೋಯಿಕೇರಿಯ ಎಸ್ಟೇಟಿನಲ್ಲಿ ಮತ್ತೆ ಕೂಲಿಯಾಳಾಗಿ ಸೇರಿಕೊಳ್ಳುತ್ತಾರೆ.

ಅವರ ಸುದೀರ್ಘ ನಡಿಗೆಯಲ್ಲಿ ಸಹಾಯಕ್ಕೆ ಸಿಕ್ಕ ಜೇವಿಯರ್‌ ಮತ್ತು ವಡಿವೇಲು ಕುಟುಂಬವು ಮನುಕುಲದ ಮೇಲೆ ನಮ್ಮ ವಿಶ್ವಾಸ ಕಮರಿ ಹೋಗದಂತೆ ನೋಡಿಕೊಳ್ಳುತ್ತಾರೆ.

ಎಸ್ಟೇಟ್‌ ಕೆಲಸ ಮಾಡುತ್ತಾ ಹೇಗೋ ಜೀವನ ಸಾಗುತ್ತಿದ್ದಾಗ  ಬೋಯಿಕೇರಿಯ ಕುಟೀರದಲ್ಲಿ ಕುಞ್ಞಮ್ಮನ ಎಳೆಯ ಮಗು ತೀರಿಕೊಳ್ಳುತ್ತದೆ. ದುರಂತ ಇನ್ನಷ್ಟು ಮಡುಗಟ್ಟುತ್ತದೆ.  ಈ ನಡುವೆ ಇನ್ನೊಂದು ಘಟನೆ ನಡೆದು ಕಥನವನ್ನು ಇನ್ನಷ್ಟು ದಾರುಣಗೊಳಿಸುತ್ತದೆ.

ಅದೆಂದರೆ ಕುಞ್ಞಮ್ಮನ ಬದುಕಿನಲ್ಲಾದ ರಾಘವನ ಪ್ರವೇಶ. ಕುಞ್ಞಮ್ಮ ಮತ್ತೆ ಗರ್ಭಿಣಿಯಾಗುತ್ತಾರೆ. ಆಗ ಹುಟ್ಟಿದ್ದೇ ಈ ಪುಸ್ತಕದ ಲೇಖಕರಾದ ಜಯಕುಮಾರ್. ಆದರೆ ಜಯಕುಮಾರ್‌ ಹುಟ್ಟಿದಾಗ ರಾಘವ ಇರಲೇ ಇಲ್ಲ. ಕುಞ್ಞಮ್ಮ ಇರಿಸಿದ್ದ ಸಂಕಷ್ಟ ನಿಧಿಯೊಂದಿಗೆ ಆತ ಪರಾರಿಯಾಗಿದ್ದ.

ಈ ಇಡೀ ಘಟನೆಯನ್ನು ಜಯಕುಮಾರ್‌ ಎರಡೇ ಸಾಲಿನಲ್ಲಿ ಮುಗಿಸಿಬಿಡುತ್ತಾರೆ- ʼಮನೆಯಲ್ಲಿ ಕುಮಾರ್‌ ಆಗಿದ್ದ ನಾನು ಶಾಲೆ ಸೇರಿದ ಬಳಿಕ ಆರ್‌ ಜಯಕುಮಾರ್‌ ಆದೆ. ಹೀಗೆ ನನ್ನ ಹೆಸರಿನ ಮುಂದೆ ʼಆರ್ʼ ಸೇರಿಸಲು ಮಾತ್ರ ಆ ಗಂಡಸು ರಾಘವ ಅಮ್ಮನ ಬದುಕಿನಲ್ಲಿ ಪ್ರವೇಶಸಬೇಕಿತ್ತೇ?ʼ

ಇಂಥ ಪ್ರಶ್ನೆಗಳಿಗೆ ಉತ್ತರವೇ ಸಿಗದ ಬದುಕೊಂದು ಅಣ್ಣನ ಸಹಾಯದಿಂದ ಮುಂದೆ ಪ್ರವರ್ಧಮಾನಕ್ಕೆ ಬರುತ್ತದೆ.

ಪುಸ್ತಕದ ಎರಡನೇ ಮುಖ್ಯ ಪಾತ್ರ ಜಯಕುಮಾರರ ಅಣ್ಣ ಪಿ ಕೆ ಚಂದ್ರಶೇಖರ್‌ ಮತ್ತು ಮೂರನೇ ಮುಖ್ಯ ಪಾತ್ರ ಲೇಖಕರಾದ ಆರ್‌ ಜಯಕುಮಾರ್.  ಅವರಿಬ್ಬರ ಪಾಲಿಗೆ ʼಎಲ್ಲವೂ ಇತ್ತು, ಆದರೆ ಯಾವುದೂ ಇರಲಿಲ್ಲ, ಎಲ್ಲರೂ ಇದ್ದರು, ಆದರೆ ಯಾರೂ ಇರಲಿಲ್ಲʼ. 
ಕುಞ್ಞಮ್ಮ ಹೇಳಿದಂತೆ -ʼ ಎಲ್ಲರೂ ಸುಖವಾಗಿ ಇರಬಹುದಿತ್ತುʼ! ಆದರೆ ಸುಖವಾಗಿ ಇರುವುದಾದರೂ ಹೇಗೆ?

– ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸರು

( ಪ್ರತಿಗಳಿಗೆ : ೭೬೧೯೪೬೧೭೮೯/ ೭೭೬೦೩೨೬೮೩೫)

Leave a Reply