ಮಾರ್ಚ್ ಒಂಬತ್ತರಂದು ‘ನಡು ಬಗ್ಗಿಸದ ಎದೆಯ ದನಿ’ ಪುಸ್ತಕ ಬಿಡುಗಡೆಗೆ ಹೋಗಿ ಬಂದು ಗಂಟೆಯೊಳಗೆ ಓದಿ ಮುಗಿಸಿದೆ. ನವೀನ್ ಸೂರಿಂಜೆಯವರು ನಿರೂಪಿಸಿದ ಮಹೇಂದ್ರ ಕುಮಾರ್ ಆತ್ಮಕತೆಯನ್ನು ಓದುವ ಕುತೂಹಲ ಅಷ್ಟರ ಮಟ್ಟಿಗಿತ್ತು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಪುಸ್ತಕ ಓದಿ ನಿಡುಸುಯ್ದೆ. ಮಲೆನಾಡಿನ ತಣ್ಣಗಿನ ಪ್ರದೇಶ ಕೊಪ್ಪದ ಯುವಕನಿಗೆ ಹಿಂದುತ್ವದ ಸನ್ನಿ ಹಿಡಿಸಿ, ಬಳಸಿ, ಬಿಸಾಕಿದ ನಿಜ ಕತೆ ಇದು. ಹೀಗೆ ಬದುಕನ್ನು ನಾಶ ಮಾಡಿಕೊಂಡ ಅಮಾಯಕರೆಷ್ಟು ಸಾವಿರ ಎಷ್ಟು ಮಂದಿಯೋ? ಎಚ್ ಜಿ ಗೋವಿಂದೇ ಗೌಡರಂತ ಸಜ್ಜನರ ಒಡನಾಟವಿದ್ದಾಗಲೂ ‘ಹಿಂದೂ ಸಮಾಜೋತ್ಸವ’ದ ಮೂಲಕ ಮಹೇಂದ್ರ ಕುಮಾರ್ ಅಂತವರು ಮುಸ್ಲಿಂ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆಂದರೆ ಸಂಘ ಪರಿವಾರದ ಕಾರ್ಯ ಸಾಧನೆಯ ವಿಧಾನವನ್ನು ಅರ್ಥ ಮಾಡಿಕೊಳ್ಳಬಹುದು.
ಮಹೇಂದ್ರ ಕುಮಾರ್ ಮುಸ್ಲಿಂ ವಿರೋಧಿಯಲ್ಲ. ಅವರ ಸ್ನೇಹಿತರಲ್ಲಿ ಮುಸ್ಲಿಮರಿದ್ದರು; ಮಹೇಂದ್ರ ಕರೆದಾಗ ಬಂದು ಅವರು ಹೇಳಿದವರಿಗೆ ರಕ್ತದಾನ ಮಾಡುವ ಹುಡುಗರಿದ್ದರು. ದತ್ತಪೀಠದ ನೆವದಲ್ಲಿ ಮಹೇಂದ್ರರಂತವರು ಉಗ್ರ ಹಿಂದುತ್ವವಾದಿಗಳಾಗುತ್ತಾರೆ. ಆಶ್ಚರ್ಯವೆಂದರೆ ಅಲ್ಲಿಯವರೆಗೆ ಅವರು ದತ್ತ ಪೀಠವನ್ನು ಸರಿಯಾಗಿ ನೋಡಿಯೇ ಇರುವುದಿಲ್ಲ.
ಸಂಘ ಪರಿವಾರ ತಮ್ಮ ಅನುಕೂಲಕ್ಕಾಗಿ ಜನರನ್ನು ಹೇಗೆ ಮರುಳು ಮಾಡುತ್ತದೆ ಎನ್ನುವುದು ‘ದತ್ತ ಪಾದುಕೆ’ ಯನ್ನು ‘ಸೃಷ್ಟಿ’ ಮಾಡಿದ್ದರಲ್ಲಿ ತಿಳಿಯುತ್ತದೆ. ಅದೇ ರೀತಿ ನ್ಯೂ ಲೈಫ್ ಸೆಂಟರ್ ಮೇಲೆ ದಾಳಿ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ‘ಸತ್ಯ ದರ್ಶಿನಿ’ ಎನ್ನುವ ಇಲ್ಲದೇ ಇದ್ದ ಪುಸ್ತಕವನ್ನೂ ತೇಲಿ ಬಿಡುತ್ತಾರೆ. ಧ್ವಜ ಆರೋಹಣಗಳು, ದೇವರ ಮೂರ್ತಿಗಳು, ಉತ್ಖನನಗಳು ಇತ್ಯಾದಿಗಳ ಮೂಲಕ ಹಿಂದೆ ಇತ್ತು ಎನ್ನುವ ಹುಸಿಯನ್ನು ಯಾವ ರೀತಿಯಲ್ಲಿ ಹುಟ್ಟು ಹಾಕಲಾಗುತ್ತದೆ ಎನ್ನುವುದಕ್ಕೆ ಇವು ನಿದರ್ಶನ ಒದಗಿಸುತ್ತದೆ.
ಹಾಗೆಂದು ಅವರ ಹಿಂದುತ್ವವೂ ಪ್ರಾಮಾಣಿಕವಲ್ಲ. ನಕಲಿ. ಅಧಿಕಾರ ಪಡೆಯುವ ಅಸ್ತ್ರ ಮಾತ್ರಾ. ಅಗತ್ಯ ಬಿದ್ದಾಗ ಏಸುವನ್ನು ವಿಷ್ಣುವಿನ ಹನ್ನೊಂದನೇ ಅವತಾರ ಎಂದು ಹೇಳಲೂ ಹೇಸುವುದಿಲ್ಲ. ಮಹೇಂದ್ರ ಕುಮಾರ್ ಹಿಂದುತ್ವದ ಹೆಸರಲ್ಲಿ ಎಲ್ಲವನ್ನೂ ಪಡೆದುಕೊಂಡವರನ್ನು ನೆನಪಿಸಿಕೊಳ್ಳುತ್ತಾರೆ; ಪ್ರಾಣ, ಬದುಕು, ನೆಲೆ ಕಳೆದುಕೊಂಡ ಹಿಂದುಳಿದ ಜಾತಿಯ ಯುವಕರ ಬಗ್ಗೆ ಅತೀವ ವೇದನೆಯನ್ನೂ ತೋರುತ್ತಾರೆ.
ಭಜರಂಗ ದಳದ ರಾಜ್ಯಾಧ್ಯಕ್ಷನಾಗಿದ್ದ ಮಹೇಂದ್ರರೂ ಜೈಲು ವಾಸ ಅನುಭವಿಸಬೇಕಾಗುತ್ತದೆ. ಎರಡು ದಿನಗಳ ಕಾಲ ಇರು ಎಂದವರು 42 ದಿನ ಬಿಡಿಸುವ ಗೋಜಿಗೆ ಹೋಗುವುದಿಲ್ಲ. ಅವರ ತಿಳಿವಿಗೆ ಬಾರದೆ ಕಾರ್ಯಾಚರಣೆ ಮಾಡಿದ ಮೇಲ್ವರ್ಗದ ಮಂದಿ ಆರಾಮವಾಗಿರುತ್ತಾರೆ. ಬಹಳ ತಡವಾಗಿ ಮಹೇಂದ್ರ ಕುಮಾರ್ ಗೆ ನಿಜ ಸ್ಥಿತಿ ಅರಿವಾಗುತ್ತದೆ. ಹಿಂದುಳಿದ, ದಲಿತ ಯುವಕ, ಯುವತಿಯರು ತನ್ನಂತೆ ಬಲಿಯಾಗಬಾರದು ಎಂದವರು ‘ನಮ್ಮ ಧ್ವನಿ’ ಯಾಗಿ ತಂಡ ಕಟ್ಟುವ ಪ್ರಯತ್ನ ಮಾಡುತ್ತಾರೆ.
‘ನಾನು ಬಿದ್ದ ವಿಷದ ಬಲೆಗೆ ಮುಗ್ಧ ಪ್ರಾಮಾಣಿಕ ಹುಡುಗರು ಯಾರು ಕೂಡಾ ಬೀಳಬಾರದು. ಹಾಗಾಗಿ ಹಿಂದುತ್ವದ ಆಕರ್ಷಣೆಗೆ ಒಳಗಾಗಿ ಸುಟ್ಟು ಹೋಗುವ ನನ್ನುಡುಗರು ನನ್ನ ಕತೆಯನ್ನೊಮ್ಮೆ ಕೇಳಬೇಕು’ ಎಂದು ಮಹೇಂದ್ರ ಕುಮಾರ್ ಆಶಿಸಿದ್ದರಂತೆ. ಅವರ ಆಶಯವನ್ನು ಪೂರ್ತಿ ಮಾಡಲು ನವೀನ್ ಸೂರಿಂಜೆ ಶ್ರಮ ಪಟ್ಟಿದ್ದು ಈ ಪುಸ್ತಕದಲ್ಲಿ ವ್ಯಕ್ತವಾಗುತ್ತದೆ. ಅದಕ್ಕೆ ಅವರು ಸಾಕಷ್ಟು ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಸಂಘ ಪರಿವಾರ ಶೂದ್ರ, ದಲಿತ ಯುವಜನರನ್ನು ತಮ್ಮ ಅನುಕೂಲಕ್ಕೆ ಬಳಸುತ್ತಿರುವ ಬಗೆಗಿನ ಅಕ್ರೋಶವನ್ನು ಈ ಬರಹ ಹೊರಹಾಕಿದೆ. ಮಹೇಂದ್ರ ಕುಮಾರ್ ರವರ ಬದುಕಿನ ವಿವರಗಳಿಗೆ ಹೆಚ್ಚು ಅವಕಾಶಗಳಿಲ್ಲ. ಭಜರಂಗದಳ ತ್ಯಜಿಸುವ ಸಂದರ್ಭದ ಮಾಹಿತಿಗಳ ಅಗತ್ಯವಿತ್ತು. ಜೆಡಿಎಸ್ ಸೇರುವ, ತೊರೆಯುವ ವಿವರಗಳೂ ಅಪೂರ್ಣ. ಮಹೇಂದ್ರ ಕುಮಾರ್ ರವರ ಒಟ್ಟಾರೆ ವ್ಯಕ್ತಿತ್ವದ ಮೇಲೂ ಬೆಳಕು ಚೆಲ್ಲುವುದಿಲ್ಲ.
ಆದರೂ ಈ ಪುಸ್ತಕದ ಅಗತ್ಯವನ್ನು ಕಡೆಗಣಿಸಲಾಗದು. ಯುವ ಜನರು ಮಾತ್ರವಲ್ಲದೆ ಸಂಘ ಪರಿವಾರದ ಬಗ್ಗೆ ಮೆದುವಾಗಿರುವವರ ಕಣ್ಣು ತೆರೆಸುವ ಈ ಪುಸ್ತಕವನ್ನು ಎಲ್ಲರೂ ಓದಲೇಬೇಕು. ಈ ಕೆಚ್ಚಿನ ಕೆಲಸ ನಿರ್ವಹಿಸಿದ ನವೀನ್ ಸೂರಿಂಜೆಗೆ ಅಭಿನಂದನೆಗಳು.
ನನಗೆ ತಿಳಿದಂತೆ ಮೊದಲ ಆವೃತ್ತಿಯ ಪ್ರತಿಗಳು ಮುಗಿಯುತ್ತಲಿವೆ. ಎರಡನೇ ಅವೃತ್ತಿ ಪ್ರಕಟವಾಗುವಾಗ ತಪ್ಪುಗಳನ್ನು ಸರಿ ಪಡಿಸಬೇಕು. ಪರಿವಿಡಿಯಿಂದ ತೊಡಗಿ ಸಾಕಷ್ಟು ತಪ್ಪುಗಳಿವೆ. ಅದರೊಂದಿಗೆ ಮಹೇಂದ್ರ ಕುಮಾರರ ಬದುಕಿನ ವಿವರಗಳನ್ನು ಸೇರಿಸಿದರೆ ಒಳಿತು.
- ನಾಗರಾಜ ಶೆಟ್ಟಿ, ಬೆಂಗಳೂರು
*
ನೀವು ಓದಲೇಬೇಕಾದ ಮತ್ತು ನಿಮ್ಮ ಜತೆಗಿರುವ ಯುವಕರಿಗೆ ಕಾಣಿಕೆಯಾಗಿ ಕೊಡಲೇಬೇಕಾದ ಈ ಪುಸ್ತಕ ಗಮನಿಸಿ
ಪುಸ್ತಕಕ್ಕಾಗಿ
ಬೆಲೆ :200/-
20% ರಿಯಾಯಿತಿ
200-40=160+30(ಅಂಚೆವೆಚ್ಚ)=190
ಲಡಾಯಿ ಪ್ರಕಾಶನ
9480286844
(ಸಂಪರ್ಕ/ವ್ಯಾಟ್ಸಫ್/ಗೂಗಲ್& ಫೋನ್ ಫೇ ನಂಬರ್)
ಬೆಂಗಳೂರಿನ ನವ ಕರ್ನಾಟಕ, ಆಕೃತಿ ಪುಸ್ತಕ, ಕ್ರಿಯಾ ಮಾಧ್ಯಮ, ಅಂಕಿತ ಪುಸ್ತಕ, ಜೀರುಂಡೆ ಪುಸ್ತಕ, ಸಪ್ನ ಪುಸ್ತಕ ಮಳಿಗೆಗಳಲ್ಲಿ ಲಭ್ಯ ಇದೆ.




