ಭಯಂಕರ ಹಿಂಸೆ. ಅವಮಾನ. ಕಾಲೆಳೆತ. ಬೆನ್ನಿಗೆ ಚೂರಿ. ಮಾನಸಿಕ ಕ್ಷೋಭೆಯ ದಿನಗಳವು. ಅದು ರೆಸಿಡೆನ್ಸಿ ರಸ್ತೆಯ ತೀರಾ ಹಳೆಯದಾದ ‘ಸಂಯುಕ್ತಕರ್ಣಾಟಕ’ ದಿನ ಪತ್ರಿಕೆಯ ಕಚೇರಿ ಬಿಲ್ಡಿಂಗ್. ಬ್ರಿಟೀಷರ ಕಾಲದ ವಾಸ್ತು ಶೈಲಿಯ ಕಟ್ಟಡ. ಅದೇ ಮೆಂಟಾಲಿಟಿಯ ಒಬ್ಬ ಸರ್ವಾಧಿಕಾರಿ. ಅವರ ಹೆಸರು : ಕೆ.ಶಾಮರಾವ್. ಹತ್ತು ಸಲ ಸಸ್ಪೆನ್ಶನ್, ನಾಲ್ಕು ಸಲ ಡಿಸ್ಮಿಸ್, ಇಪ್ಪತ್ತು ಸಲ ವಾರ್ನಿಂಗ್ ಆದ ಮೇಲೆ ರಿಸೈನ್ ಮಾಡಿ ಹೊರಟು ಬಿಟ್ಟರು ರವಿಬೆಳಗೆರೆ!
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಮ್ಮನ್ನೆಲ್ಲ ಗುರಾಣಿ ಹಿಡಿದು ಕಾಪಾಡುತ್ತಿದ್ದ ವೆಂಕಟನಾರಾಯಣ ಸರ್ ಆ ಮೊದಲೇ ಜಾಗ ಖಾಲಿ ಮಾಡಿ ಹೊರಟು ಬಿಟ್ಟಿದ್ದರು. ನನ್ನದು ಅನಾಥ ಫೀಲಿಂಗ್. ಸಂಜೆಯಾದರೆ ಸಾಕು ಕೆಂಪು ಕವರ್ ಸಪ್ಲೈ ಆಗುವ ಭಯ. ಅದರೊಳಗೆ ಅಡಗಿರುತ್ತದೆ ಸಸ್ಪೆನ್ಶನ್ನೋ, ಡಿಸ್ಮಿಸ್ಸೋ ಆರ್ಡರ್. ಅಥವಾ ಮೆಮೋ! ಇದು ನನ್ನೊಬ್ಬನ ಅಸಹಾಯಕತೆಯಲ್ಲ. ಎಲ್ಲಾ ಸ್ಟಾಫ್’ಗಳದ್ದೂ ಒಂದೇ ಕಥೆ-ವ್ಯಥೆ. ಸಾಕೋ ಸಾಕಾಗಿತ್ತು.

ಬಸವಳಿದು ಬೆಂಡಾಗಿ ಕುಳಿತಿದ್ದಾಗ ಬಂತೊಂದು ಫೋನ್ ಕರೆ : ‘ಗಣೇಶ್ ಅವರೇ, ಅರ್ಜೆಂಟಾಗಿ ವಿಜಯಕರ್ನಾಟಕ ಆಫೀಸಿಗೆ ಬನ್ನಿ. ಏನೋ ಮಾತಾಡೋದಿದೆ…’ – ಕಾಲ್ ಕಟ್. ಹಾಗೆ ಫೋನ್ ಮಾಡಿದವರ ಹೆಸರು : ಜಯಕುಮಾರ್!
ಎದ್ದೆನೋ ಬಿದ್ದೆನೋ ಗೊತ್ತಿಲ್ಲ, ಒಂದೇ ಓಟ ಕಲಾಸಿಪಾಳ್ಯದ ‘ವಿಜಯಕರ್ನಾಟಕ’ ಆಫೀಸಿಗೆ. ಅಲ್ಲಿ ಕಾಯುತ್ತಿದ್ದರು ಜಯಕುಮಾರ್. ಇವರು ಕೂಡಾ ‘ಸಂಯುಕ್ತಕರ್ನಾಟಕ’ ಪ್ರಾಡಕ್ಟ್! ಬಿಟ್ಟು ಬಂದು ಆಗಲೇ ನಾಲ್ಕಾರು ತಿಂಗಳುಗಳಾಗಿತ್ತು. ನನ್ನನ್ನು ತನ್ನ ಜತೆ ಸೇರಿಸಿಕೊಳ್ಳುವ ಹಂಬಲ. ನೇರವಾಗಿ ಪ್ರಧಾನ ಸಂಪಾದಕರ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿದ್ದರು ಡಿ.ಮಹಾದೇವಪ್ಪ ಎಂಬ ಸಾಧು ಸಜ್ಜನರು!

ಇಬ್ಬರಲ್ಲೂ ಈ ಮೊದಲೇ ಮಾತುಕತೆಯಾಗಿತ್ತೇನೋ, ‘ನೀವು ನಮ್ಮಲ್ಲಿಗೆ ಸಿನಿಮಾ ಸೆಕ್ಷನ್ ಇನ್ಚಾರ್ಜ್ ಆಗಿ ಬರ್ತೀರಾ?’ – ಮಹಾದೇವಪ್ಪ ಸರ್ ಕೇಳಿದ್ದು ಇಷ್ಟೇ.
ಒಪ್ಪದಿರುವುದಾದರೂ ಹೇಗೆ ಸಾಧ್ಯ? ಒಂದು ಗಂಟೆಯ ನಂತರ ಆಫೀಸಿನಿಂದ ಹೊರಬಂದಾಗ ಅಪಾಯಿಂಟ್ಮೆಂಟ್ ಆರ್ಡರ್ ಕೈಲಿತ್ತು. ಜತೆಗೆ ಜಯಕುಮಾರ್! ‘ಕಂಗ್ರಾಟ್ಸ್, ಬೆಸ್ಟ್ ವಿಶಸ್. ಸೋಮವಾರ ಬಂದು ಜಾಯಿನ್ ಆಗಿ’ – ಎಂದು ಹೇಳುತ್ತಾ ಬೆನ್ನು ತಟ್ಟಿ ಮನೆಗೆ ಕಳಿಸಿಕೊಟ್ಟರು ಜಯಕುಮಾರ್.
ಆಕಾಶದಲ್ಲಿ ತೇಲುತ್ತಾ ಮನೆಗೆ ಬಂದು ಗಾಯತ್ರಿ ಕೈಲಿ ಆರ್ಡರ್ ಕೊಟ್ಟು ಅದೆಷ್ಟು ಜೋರಾಗಿ ಅತ್ತಿದ್ದೇನೋ ಆ ಪರಮಾತ್ಮನಿಗೇ ಗೊತ್ತು!
ಸೋಮವಾರ ‘ವಿಜಯಕರ್ನಾಟಕ’ ಆಫೀಸಿಗೆ ಬರುವಷ್ಟರಲ್ಲಿ ‘ಸಂಯುಕ್ತಕರ್ನಾಟಕ’ ಪತ್ರಿಕೆಯ ಮುಖಪುಟದ ಬಾಟಮ್ ಕಾರ್ನರ್’ನಲ್ಲೊಂದು ಜಾಹೀರಾತು ಥರದ ಪ್ರಕಟಣೆ :
‘ಕೆಳಕಂಡ ಈ ವ್ಯಕ್ತಿ ಗಣೇಶ್ ಕಾಸರಗೋಡು ಎಲ್ಲೋ ತಪ್ಪಿಸಿಕೊಂಡಿದ್ದಾರೆ. ಜತೆಗೆ ನಮ್ಮ ಸಂಸ್ಥೆಗೆ ಸಂಬಂಧಿಸಿದ ಅಮೂಲ್ಯ ವಸ್ತುಗಳನ್ನೂ ತಮ್ಮ ಜತೆ ತೆಗೆದುಕೊಂಡು ಹೋಗಿದ್ದಾರೆ. ಪೆಟ್ಟಿಗೆಗಟ್ಟಲೆ ಸಿನಿಮಾ ಸ್ಟಿಲ್’ಗಳು ಆಫೀಸಿನಿಂದ ಕಾಣೆಯಾಗಿವೆ. ಈ ವ್ಯಕ್ತಿಯನ್ನು ಪತ್ತೆಹಚ್ಚಿದವರು ಕೆಳಕಂಡ ಫೋನ್ ನಂಬರನ್ನು ಸಂಪರ್ಕಿಸಬಹುದು…’
– ವ್ಯವಸ್ಥಾಪಕ ಸಂಪಾದಕ
ಎದೆ ಧಸಕ್ಕೆಂದಿತು. ಕೈಗೆ ಬಂದ ತುತ್ತನ್ನು ಅನ್ಯಾಯವಾಗಿ ಕಳೆದುಕೊಂಡೆನಲ್ಲಾ ಎನ್ನುವ ಬೇಸರದೊಂದಿಗೆ ದಿಕ್ಕು ಕಾಣದೇ ಕೂತಿದ್ದಾಗ ಮತ್ತೆ ಕೈ ಹಿಡಿದು ಮೇಲೆತ್ತಿದವರು ಇದೇ ಜಯಕುಮಾರ್ : ‘ಏನೂ ಆಗಲ್ಲ ಗಣೇಶ್, ಬನ್ನಿ ನನ್ ಜತೆ. ಎಡಿಟರ್ ನಿಮ್ಮನ್ನು ಕಾಯ್ತಿದ್ದಾರೆ…’ – ಎಂದು ಹೇಳುತ್ತಾ ಧರಧರನೆ ನನ್ನನ್ನು ಎಳೆದುಕೊಂಡು ಸಂಪಾದಕರ ಚೇಂಬರಿಗೆ ಕರೆದುಕೊಂಡು ಹೋದರು ಜಯಕುಮಾರ್.

ಟೇಬಲ್ ಮೇಲೆ ಅಂದಿನ ಅದೇ ‘ಸಂಯುಕ್ತಕರ್ನಾಟಕ’ ಸಂಚಿಕೆ. ನಾನು ಸತ್ತೇ ಹೋದೆ! ಮಹಾದೇವಪ್ಪ ನನ್ನ ಎರಡೂ ಕೈಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಹೇಳಿದರು: ‘ಭಯ ಪಡಬೇಡಿ ಗಣೇಶ್. ನೀವು ಏನು ಅಂತ ನನ್ಗೆ ಗೊತ್ತು. ಯಾವ ಸಂಸ್ಥೆಯವರಾದರೂ ಪ್ರತಿಭಾನ್ವಿತ ಸ್ಟಾಫನ್ನು ಕಳೆದುಕೊಂಡಾಗ ಆಗುವ ನಿರಾಸೆಯಿಂದ ಶಾಮರಾಯರು ಹಾಗೆ ಬರೆದಿದ್ದಾರೆ. ಇದನ್ನು ಮ್ಯಾನೇಜ್ಮೆಂಟಿಗೂ ಹೇಳಿ ಕನ್ವಿನ್ಸ್ ಮಾಡಿದ್ದೇನೆ. ಇವತ್ತೇ ಜಾಯಿನ್ ಆಗಿ ಕೆಲ್ಸ ಶುರು ಮಾಡಿ…’ – ಏನು ಹೇಳಲಿ ನಾನು? ಮಹಾದೇವಪ್ಪನವರ ಎರಡೂ ಕೈಗಳನ್ನು ನನ್ನ ಕೈಗೆ ತೆಗೆದುಕೊಂಡು ಅದೆಷ್ಟು ಹೊತ್ತು ಅಲ್ಲೇ ಅಳುತ್ತಾ ಕೂತಿದ್ದೇನೋ ಜಯಕುಮಾರ್ ಮಾತ್ರ ಬಲ್ಲರು!
ಇವೆಲ್ಲಾ ಘಟನೆಗಳು ನಡೆದು ಆಗಲೇ ಭರ್ತಿ 23 ವರ್ಷಗಳೇ ಕಳೆದಿವೆ. ಸಿಹಿ ಘಟನೆಗಳನ್ನು ಮರೆತು ಬಿಡುತ್ತೇವೆ, ಆದರೆ ಕಹಿ ಘಟನೆಗಳನ್ನು ಮರೆಯೋದು ಕಷ್ಟ ಕಷ್ಟ. ಇಲ್ಲಿ ಈ ವಿಚಾರ ಏಕೆ ಬಂತೆಂದರೆ : ಇಂಥಾ ಅನುಗಾಲದ ಗೆಳೆಯ ಜಯಕುಮಾರ್ ಎರಡು ಪುಸ್ತಕಗಳನ್ನು ಬರೆದಿದ್ದಾರೆ : ಗಾಂಧಿ ಮರೆತ ನಾಡಿನಲ್ಲಿ ಮತ್ತು ಕಾಡು ಹಾದಿಯ ಬೆಳಕಿನ ಜಾಡು. ಈ ಪುಸ್ತಕದ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಿತು. ಹಂಸಲೇಖ, ಪುರುಷೋತ್ತಮ ಬಿಳಿಮಲೆ, ಸತೀಶ್ ಜಾರಕಿಹೊಳಿ, ಬಿ.ಕೆ.ಶಿವರಾಂ, ಸಿದ್ದನಗೌಡ ಪಾಟೀಲ, ಎಸ್.ಜಿ.ಸಿದ್ದರಾಮಯ್ಯ ಮೊದಲಾದ ಗಣ್ಯರು ಭಾಗವಹಿಸಿದ್ದರು. ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಸ್ವಭಾವದ ಜಯಕುಮಾರ್ ಮತ್ತು ಅವರ ಪತ್ನಿ ಲೀಲಾ ಸಂಪಿಗೆಯವರದ್ದು ಅಪರೂಪದ ದಾಂಪತ್ಯ. ಈ ಆತ್ಮೀಯ ದಂಪತಿಗಳಿಗೆ ಶುಭ ಹಾರೈಸುತ್ತಾ.
– ಗಣೇಶ್ ಕಾಸರಗೋಡು, ಹಿರಿಯ ಪತ್ರಕರ್ತರು




