ಕಾಂಗ್ರೆಸ್ಸಿನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ವಿದ್ಯಮಾನಗಳಿಗೆ ತೆರೆ

5 months ago

ಬೆಂಗಳೂರು: ಅಧಿಕಾರ ಹಸ್ತಾಂತರ ಕುರಿತಂತೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ವಿದ್ಯಮಾನಗಳಿಗೆ ತೆರೆ ಬಿದ್ದಂತಾಗಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಜೊತೆಯಾಗಿ ಉಪಹಾರ ಸೇವಿಸಿ ಒಗ್ಗಟ್ಟು ಪ್ರದರ್ಶಿಸಿದರು.

ತಮ್ಮ ಮನೆಗೆ ಭೋಜನಕ್ಕೆ ಬರುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು  ಡಿಸಿಎಂ ಡಿ ಕೆ ಶಿವಕುಮಾರ್ ಆಹ್ವಾನಿಸಿದ್ದು ಸಿಎಂ ಬರುವ ಮಂಗಳವಾರ ಡಿಸಿಎಂ ನಿವಾಸಕ್ಕೆ ತೆರಳಲಿದ್ದಾರೆ.

ಹೈಕಮಾಂಡ್ ಸೂಚನೆ: ಅಧಿಕಾರ ಹಸ್ತಾಂತರ ವಿಚಾರವಾಗಿ ಕಳೆದ ಎರಡು ವಾರಗಳಿಂದ ಸಿಎಂ ಮತ್ತು ಡಿಸಿಎಂ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದವು. ಸಿಎಂ ಮತ್ತು ಡಿಸಿಎಂ ಆಪ್ತರು ದೆಹಲಿ ಪ್ರವಾಸ ಮತ್ತು ಭೋಜನ ಕೂಟಗಳ ಮೂಲಕ ಸಕ್ರಿಯರಾಗಿದ್ದರೆ, ಇಬ್ಬರು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾಲೆಳೆಯುವ ಹೇಳಿಕೆಗಳನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದು ಕಾರ್ಯಕರ್ತರಲ್ಲಿ ದೊಡ್ಡ ಮಟ್ಟದ ಗೊಂದಲಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಹೈಕಮಾಂಡ್ ಅಧಿಕಾರ ಹಸ್ತಾಂತರ ಕುರಿತಾಗಿ ನೀವಿಬ್ಬರೂ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ನೀವೇ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು. ಇಬ್ಬರಲ್ಲೂ ಯಾವುದೇ ಗೊಂದಲ ಇಲ್ಲ ಎಂಬ ಸಂದೇಶವನ್ನು ಕಾರ್ಯಕರ್ತರು ಮತ್ತು ರಾಜ್ಯದ ಜನತೆಗೆ ರವಾನಿಸಬೇಕು ಎಂದು ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ಉಪಹಾರಕ್ಕಾಗಿ ಬರುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಿದ್ದರು. ಅದರಂತೆ ಸಿಎಂ ಅವರೊಂದಿಗೆ ಪ್ರತ್ಯೇಕವಾಗಿ ಉಪಹಾರ ಸೇವಿಸಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ನಾವಿಬ್ಬರೂ ಒಂದೇ: ನಂತರ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಭಯ ನಾಯಕರು, ನಮ್ಮಿಬ್ಬರಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ಲ. ಸಣ್ಣಪುಟ್ಟ ಅಭಿಪ್ರಾಯ ಬೇಧಗಳಿದ್ದು ಅವುಗಳನ್ನು ಬಗೆಹರಿಸಿಕೊಂಡಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು.

ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದೆವೋ, ಅದೇ ಮಾದರಿಯಲ್ಲಿ ಮುಂದೆಯೂ ಒಟ್ಟಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡುತ್ತೇವೆ. ನಮ್ಮಲ್ಲಿ ಗೊಂದಲ ಮೂಡಿಸಲು ಪ್ರತಿಪಕ್ಷಗಳು ಪ್ರಯತ್ನ ನಡೆಸಿದ್ದು ಅದನ್ನು ದೂರ ಮಾಡುವ ಉದ್ದೇಶದಿಂದ ಈ ಸಭೆ ನಡೆಸಿದ್ದೇವೆ ಎಂದು ಘೋಷಿಸಿದರು.

ವರಿಷ್ಠರ ತೀರ್ಮಾನ ಹಾಗೂ ಸೂಚನೆಯಂತೆ ನಾವಿಬ್ಬರೂ ನಡೆದುಕೊಳ್ಳುತ್ತೇವೆ ಎಂದು ನಾನು ಹಾಗೂ ಡಿ.ಕೆ.ಶಿವಕುಮಾರ್ ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಿ ಸರ್ಕಾರದ ವಿರುದ್ಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲಗಳನ್ನು ತಿಳಿಗೊಳಿಸುವ ಕೆಲಸ ಮಾಡಲು ಸೂಚಿಸಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ. ಈಗಲೂ ಇಲ್ಲ. ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈ ಕಮಾಂಡಿಗೆ ಮಾಹಿತಿ ನೀಡಲಾಗುವುದು ಎಂದರು.

ಆದರೆ ಗೊಂದಲ ಸೃಷ್ಟಿಯಾಗಿದೆ. ಕೆಲವು ಮಾಧ್ಯಮಗಳು ಸೃಷ್ಟಿಸಿವೆ. ಕೆಲವು ಶಾಸಕರು ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿದರಬಹುದು. ಹಾಗೆಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕೆಲವರು ಇಂಥ ಕಾರಣಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ ಎಂದರು.

2028ರ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಕಾರ್ಪೋರೇಷನ್, ತಾಲ್ಲೂಕು , ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳು ಬಹಳ ಮುಖ್ಯವಾಗಿದ್ದು, ಈ ಬಗ್ಗೆ ಚರ್ಚೆ ಮಾಡಿದ್ದೇವೆ. 2028ರಲ್ಲಿ ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಚರ್ಚಿಸಲಾಗಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದಂತೆಯೇ ಮುಂದೆಯೂ ಒಟ್ಟಿಗೆ ಸಾಗುವ ತೀರ್ಮಾನ ಮಾಡಿದ್ದೇವೆ ಎಂದರು.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದೆ. ನಾವು  ವಿರೋಧ ಪಕ್ಷದವರನ್ನು ಸಮರ್ಥವಾಗಿ ಇವರಿಗೆ ಎದುರಿಸಿದ್ದೇವೆ ಮುಂದೆಯೂ ಎದುರಿಸುತ್ತೇವೆ. ಬಿಜೆಪಿ,  ಜೆಡಿಎಸ್ ಅಪಪ್ರಚಾರ, ಸುಳ್ಳು ಆರೋಪಗಳನ್ನು, ಅಪವಾದಗಳನ್ನು ಮಾಡುವುದು ಬಿಜೆಪಿ ಹಾಗೂ ಜೆಡಿಎಸ್ ಅವರ ಚಾಳಿ. ಇವರಿಬ್ಬರನ್ನೂ ಸಮರ್ಥವಾಗಿ ನಾನು ಮತ್ತು ಡಿಸಿಎಂಗಳು ಎದುರಿಸುತ್ತೇವೆ. ಅದಕ್ಕೆ ಅಗತ್ಯವಿರುವ ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದ್ದೇವೆ ಎಂದರು.

ಹೈಕಮಾಂಡ್ ನಿರ್ಧಾರ: ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ,
ನಾಯಕತ್ವ ವಿಚಾರದಲ್ಲಿ ನನ್ನದು ಹಾಗೂ ಸಿಎಂ ಸಿದ್ದರಾಮಯ್ಯ ಅವರದ್ದು ಒಂದೇ ರಾಜಕೀಯ ನಿಲುವಾಗಿದ್ದು, ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರು ನಡೆಯುತ್ತೇವೆ ಎಂದರು.

ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷ ಕಷ್ಟದ ಸಮಯದಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಹತ್ತರ ಪಾತ್ರ ನಿರ್ವಹಿಸಲಿದೆ. 2028ರ ಚುನಾವಣೆ ನಂತರ 2029ರ ಲೋಕಸಭೆ ಚುನಾವಣೆಯನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಎದುರಿಸುತ್ತೇವೆ. ರಾಜ್ಯದಲ್ಲಿ 2028ಕ್ಕೆ ಹಾಗೂ 2029ರಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಇಷ್ಟು ದಿನ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಮುಂದೆಯೂ ಅದೇ ರೀತಿ ಕೆಲಸ ಮಾಡಲು ಅಚಲ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ನಾನು ಹಾಗೂ ಸಿಎಂ ಅವರು ಉಪಹಾರ ಕೂಟದಲ್ಲಿ ಭಾಗವಹಿಸಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಭೋಜನಕೂಟಕ್ಕೆ ಬರಲಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದ, ನಿಮ್ಮೆಲ್ಲರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ಕೊಟ್ಟ ಮಾತಿನಂತೆ ಜನರ ಸೇವೆ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಸಹಕಾರ ನೀಡುತ್ತಿದ್ದಾರೆ. ಜನರ ನಿರೀಕ್ಷೆ, ಆಕಾಂಕ್ಷೆ, ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದು, ಹೈಕಮಾಂಡ್ ತೀರ್ಮಾನದಂತೆ ಕೆಲಸ ಮಾಡುತ್ತಿದ್ದೇವೆ ಎಂದರು.

ಪಕ್ಷದ ವರಿಷ್ಠರು ನಮ್ಮನ್ನು ಕರೆದರೆ, ನಾವು ಖಂಡಿತವಾಗಿಯೂ ಹೋಗುತ್ತೇವೆ. ಅದರ ಹೊರತಾಗಿ ಮೆಕ್ಕೆಜೋಳ, ಕಬ್ಬು ದರ ನಿಗದಿ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಸತ್ ಅಧಿವೇಶನದಲ್ಲಿ ಸಂಸದರು ಧ್ವನಿ ಎತ್ತಬೇಕಿದೆ. ಈ ವಿಚಾರವಾಗಿ ಸಂಸದರ ಜೊತೆ ನಾವು ಚರ್ಚೆ ಮಾಡಬೇಕಿದೆ ಎಂದರು.

ಮೆಕ್ಕೆಜೋಳ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಸಹಕಾರ ನೀಡುತ್ತಿಲ್ಲ. ಈ ವಿಚಾರಗಳಲ್ಲಿ ಕೇಂದ್ರದ ನೆರವು ಪಡೆಯುವುದು ರಾಜ್ಯದ ಹಕ್ಕು. ಇತ್ತೀಚಿಗೆ ಸಿಎಂ ಅವರು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.  ಈ ವಿಚಾರವಾಗಿ ಸಂಸದರ ಜೊತೆ ಚರ್ಚೆ ಮಾಡಿ ಈ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ಹಾಕುವಂತೆ ತಿಳಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ರಾಜ್ಯದ ಹಿತ ಕಾಪಾಡಬೇಕಿದೆ. ಕೇಂದ್ರ ಸಚಿವರು ನಿಯೋಗದಲ್ಲಿ ನೀವು ಬನ್ನಿ ಎಂದು ತಿಳಿಸಿದ್ದು, ನಾವು ಹೋಗುತ್ತೇವೆ. ಮೇಕೆದಾಟು ಯೋಜನೆ ವಿಚಾರದಲ್ಲಿ ನ್ಯಾಯಾಲಯದಿಂದ ರಾಜ್ಯದ ಪರವಾದ ತೀರ್ಪು ಬಂದಿದೆ, ಈಗ ಚೆಂಡು ಕೇಂದ್ರ ಸರ್ಕಾರದ ಜಲ ಆಯೋಗದ ಅಂಗಳದಲ್ಲಿದೆ.  ನಾವು ಇದಕ್ಕೆ ಪರಿಷ್ಕೃತ ಡಿಪಿಆರ್ ಸಲ್ಲಿಸುತ್ತೇವೆ. ಇದರ ಜೊತೆಗೆ ಇತರೆ ನೀರಾವರಿ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡಬೇಕು ಎಂದರು.

ದೇಶದಲ್ಲಿ ಕರ್ನಾಟಕ ಪ್ರಮುಖ ರಾಜ್ಯವಾಗಿದ್ದು, ಇಡೀ ವಿಶ್ವ ಭಾರತವನ್ನು ಕರ್ನಾಟಕ ಹಾಗೂ ಬೆಂಗಳೂರು ಮೂಲಕ ನೋಡುತ್ತಿದೆ. ಇನ್ನು ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಅವರು ಏನಾದರೂ ಮಾಡಲಿ, ವಿರೋಧ ಪಕ್ಷವಾಗಿ ಅವರಿಗೆ ಆ ಹಕ್ಕಿದೆ. ಆಡಳಿತ ಪಕ್ಷವಾಗಿ ಅದನ್ನು ಎದುರಿಸಲು ನಾವು ಸಮರ್ಥರಿದ್ದೇವೆ ಎಂದರು.

Leave a Reply