ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ತಾತ್ಕಾಲಿಕ ತೆರೆ

5 months ago

ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರವಾಗಿ ಕಳೆದೊಂದು ವಾರದಿಂದ ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಇದೀಗ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಅಧಿಕಾರ ಹಸ್ತಾಂತರಕ್ಕಾಗಿ ಪಟ್ಟು ಹೊಡೆದಿರುವ ಡಿಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ತಮ್ಮ ನಿಲುವಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ನಾನು ಆತ್ಮಸಾಕ್ಷಿಯನ್ನು ನಂಬಿದ್ದೇನೆ. ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು. ಪಕ್ಷಕ್ಕೆ ಮುಜುಗರ ತರಲು, ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ಇದ್ದರೆ ನಾವು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಳೆದ ವಾರ ದೆಹಲಿಯಲ್ಲಿ ತಮ್ಮ ಸಹೋದರ ಹಾಗೂ ಮಾಜಿ ಸಂಸದ ಡಿ ಕೆ ಸುರೇಶ್ ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಬಂದಿದ್ದ ಡಿ.ಕೆ. ಶಿವಕುಮಾರ್, ತಮ್ಮ ಬೆಂಬಲಿಗ ಶಾಸಕರ ಜೊತೆ ಸತತ ಮಾತುಕತೆ ನಡೆಸುವ ಮೂಲಕ ಅಧಿಕಾರ ಹಸ್ತಾಂತರದ ಅಸ್ತ್ರ ಪ್ರಯೋಗಿಸಿದ್ದರು.

ಶಿವಕುಮಾರ್ ಅವರ ಬೆಂಬಲಿಗ ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿರುವ ಮೂಲಕ ವಿದ್ಯಮಾನಗಳು ರೋಚಕ ತಿರುವು ಪಡೆಯುವಂತಾಯಿತು. ಇದಾದ ನಂತರ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಿದ್ದು ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ನಡೆಸಿದರೆ, ಹಲವು ಸಚಿವರು ಮತ್ತು ಶಾಸಕರು ಕೂಡ ಅವರನ್ನು ಭೇಟಿ ಮಾಡಿದ್ದರು. ಆದರೆ ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಡಿ ಕೆ ಸುರೇಶ್, ಖರ್ಗೆ ಅವರನ್ನು ಭೇಟಿ ಮಾಡಲು ಹೋಗಿರಲಿಲ್ಲ. ಇದೀಗ ಖರ್ಗೆ ಅವರು ದೆಹಲಿಗೆ ತೆರಳುವ ಮುನ್ನ ಅವರನ್ನು ಭೇಟಿ ಮಾಡಿದಾಗ ಡಿ ಕೆ ಶಿವಕುಮಾರ್ ಅವರೊಂದಿಗೆ ವಿಮಾನ ನಿಲ್ದಾಣದವರೆಗೂ ಒಂದೇ ಕಾರಿನಲ್ಲಿ ಪ್ರಯಾಣಿಸಿ ವಿಮಾನ ನಿಲ್ದಾಣದಲ್ಲಿಯೇ ಸುದೀರ್ಘ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸುವ ಮೂಲಕ ಕುತೂಹಲ ಮೂಡಿಸಿದರು.

ಅಧಿಕಾರ ಹಸ್ತಾಂತರ ಸಂಪುಟ ಪುನಾರಚನೆ  ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಡಿ ಕೆ ಶಿವಕುಮಾರ್ ಅವರು ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿ ಸ್ಪಷ್ಟನೆ ಪಡೆದುಕೊಂಡಿದ್ದಾರೆ. ಈ ಮಾತುಕತೆ ವೇಳೆ ಖರ್ಗೆ ಅವರು ತಮಗೆ ರಾಜ್ಯದ ಎಲ್ಲ ಬೆಳವಣಿಗೆಗಳ ಅರಿವಿದೆ. ಸರ್ಕಾರ ರಚನೆ ಸಮಯದಲ್ಲಿ ಆದ ಒಪ್ಪಂದದ ಬಗ್ಗೆಯೂ ಗೊತ್ತಿದೆ. ಈ ವಿಚಾರವಾಗಿ ತಾವು ತಾಳ್ಮೆಯಿಂದ ಇರಬೇಕು. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿರುವುದಾಗಿ ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ವಿದೇಶ ಪ್ರವಾಸದಲ್ಲಿ ಇದ್ದಾರೆ. ನವಂಬರ್ 29ರಂದು ಅವರು ದೆಹಲಿಗೆ ವಾಪಸ್ ಆಗುತ್ತಿದ್ದು, ಅವರ ಜೊತೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ಎಲ್ಲ ವಿಚಾರದ ಬಗ್ಗೆ ಮಾತುಕತೆ ನಡೆಸುತ್ತೇನೆ. ಆನಂತರ ಅವರ ಜೊತೆ ನಿಮ್ಮ ಭೇಟಿಗೆ ಏರ್ಪಾಟು ಮಾಡುತ್ತೇನೆ. ಬಳಿಕ ಒಂದು ಸ್ಪಷ್ಟ ನಿರ್ಧಾರ ಹೊರಬೀಳಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು. ದುಡುಕಿನಿಂದ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಗೆ ತೆರುಳುತ್ತಿರುವ ತಮ್ಮ ಬೆಂಬಲಿಗರನ್ನು ವಾಪಸ್ ಕರೆಸಿಕೊಳ್ಳಿ. ಇನ್ನು ಮುಂದೆ ಈ ವಿಚಾರವಾಗಿ ಯಾವುದೇ ಶಾಸಕರು ದೆಹಲಿಗೆ ಬರದಂತೆ ನೋಡಿಕೊಳ್ಳಿ ಎಂದು ಸೂಚಿಸಿರುವುದಾಗಿ ತಿಳಿದು ಬಂದಿದೆ.

ಇದಕ್ಕೆ ಸಮ್ಮತಿಸಿದ ಡಿ ಕೆ ಶಿವಕುಮಾರ್ ಅವರು ಹಿರಿಯರಾದ ನಿಮ್ಮ ಸಲಹೆಯಂತೆ ಮುಂದುವರೆಯುತ್ತೇನೆ ಎಂದು ಹೇಳಿ, ಕನಕಪುರ ಕೃಷಿ ಮಾರುಕಟ್ಟೆ ಚುನಾವಣೆಯಲ್ಲಿ ಮತದಾನ ಮಾಡಲು ತೆರಳಿದರೆ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರೊಂದಿಗೆ ದೆಹಲಿಗೆ ತೆರಳಿದರು.

ಇದಾದ ಬಳಿಕ ಕನಕಪುರದಲ್ಲಿ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಪಕ್ಷಕ್ಕೆ ಮುಜುಗರ ತರಲು, ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ಇದ್ದರೆ ನಾವು ಎಂದು ಹೇಳಿದರು.

ಅಧಿಕಾರ ಹಂಚಿಕೆ ಸೂತ್ರ ಎನ್ನುವುದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ನಾಯಕರು, ನಮ್ಮ ಪಕ್ಷದ ಆಸ್ತಿ. ಅವರು ಸಿಎಂ ಆಗಿ ಏಳೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಮುಂದಿನ ಬಜೆಟ್ ಅನ್ನು ಅವರೇ ಮಂಡಿಸುವುದಾಗಿ ಹೇಳಿದ್ದಾರೆ. ಇದು ಸಂತಸದ ವಿಚಾರವಾಗಿದೆ ಎಂದರು.

ಸಿದ್ದರಾಮಯ್ಯ ಅವರು ಹಿರಿಯ ನಾಯಕರು ಪಕ್ಷ ಕಟ್ಟಲು ಸಾಕಷ್ಟು ಸಮಾ ಹಾಕಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಶ್ರಮಿಸಿದ್ದಾರೆ. ಪಕ್ಷ ಕಟ್ಟಿದ್ದಾರೆ. ಈಗ ನಾವೆಲ್ಲರೂ ಸೇರಿ 2028 ಹಾಗೂ 2029ರ ಚುನಾವಣೆ ಗುರಿಯತ್ತ ಗಮನ ಹರಿಸಬೇಕು ಎಂದರು.

ನನಗೆ ಅಧಿಕಾರ ಸಿಗಲಿ ಎಂದು ಈಗ ಪೂಜೆ ಮಾಡುತ್ತಿರುವುದಕ್ಕಿಂತ, ನಾನು ಜೈಲಿಗೆ ಹೋದಾಗ ನನ್ನ ತಾಯಂದಿರು, ಯುವಕರು, ಹಿರಿಯರು ದೇವಾಲಯದ ಅರ್ಚಕರು ಮಾಡಿದ ಪ್ರಾರ್ಥನೆಯನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಅವಧಿಯಲ್ಲಿ ನಾನು ಜೈಲಿಂದ ಬಿಡುಗಡೆ ಆದಾಗ ಪೊಲೀಸರ ಬೆದರಿಕೆಗೂ ಹಿಂಜರಿಯದೇ ನನ್ನನ್ನು ಜನ ಸ್ವಾಗತಿಸಿದರು. ನಾನು ಜೈಲಲ್ಲಿ ಇದ್ದಾಗ ಕರವೇ ನಾರಾಯಣ ಗೌಡರಿಗೆ ಪ್ರತಿಭಟನೆ ನಡೆಸದಂತೆ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಬೆದರಿಕೆ ಹಾಕಿದ್ದರು ಎಂದರು.

ಕೆಲವು ಸ್ವಾಮೀಜಿಗಳು ಬಂದರು, ಕೆಲವರು ಬರಲಿಲ್ಲ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬೇರೆ ಹೇಳಿಕೆ ಕೊಟ್ಟರು. ಅನೇಕರು ನಮ್ಮ ಮನೆಗೆ ಬಂದು ನನ್ನ ಪತ್ನಿ ಹಾಗೂ ಮಕ್ಕಳ ಜೊತೆ ಮಾತನಾಡಿ ಧೈರ್ಯ ತುಂಬಿದ್ದರು. ಅಂದು ಜನ ಹರಕೆ ಹೊತ್ತು ಪ್ರಾರ್ಥಿಸಿದ್ದರು. ಆಗ ಕಟ್ಟಿಕೊಂಡ ಹರಕೆ ಮುಗಿಸಲು ಇನ್ನೂ ನನಗೆ ಆಗುತ್ತಿಲ್ಲ. ಅನೇಕರು ನಾನು ಬಿಡುಗಡೆಯಾಗುವವರೆಗೂ ಕಾಲಿಗೆ ಚಪ್ಪಲಿ ಹಾಕಿರಲಿಲ್ಲ ಎಂದರು.

ನಾನು ಇಂದು ಡಿಸಿಎಂ ಆಗಿದ್ದು, ಪಕ್ಷದ ಅಧ್ಯಕ್ಷನಾಗಿದ್ದೇನೆ. ಕಷ್ಟಕಾಲದಲ್ಲಿದ್ದಾಗ ಮಾಡಿದ ಪ್ರಾರ್ಥನೆ, ಆಗ ಅವರು ನನಗೆ ಆತ್ಮಸ್ಥೈರ್ಯ ತುಂಬಿದ್ದು ನನಗೆ ಬಹಳ ವಿಶೇಷ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿಸಜನ ನಮ್ಮ ಸಾಮೂಹಿಕ ನಾಯಕತ್ವಕ್ಕೆ ಮತ ಹಾಕಿದ್ದಾರೆ. ನನ್ನೊಬ್ಬನಿಗಾಗಿ ಮತ ಹಾಕಿದ್ದಾರೆ ಎಂದು ನಾನು ಹೇಳುವುದಿಲ್ಲ. 224 ಕ್ಷೇತ್ರಗಳಲ್ಲಿ ನಮಗಿಂತ ನಮ್ಮ ಕಾರ್ಯಕರ್ತರು ಹೆಚ್ಚು ಶ್ರಮ ಹಾಕಿದ್ದಾರೆ ಎಂದರು.

ಸಚಿವ ಸ್ಥಾನದ ಆಕಾಂಕ್ಷೆ ಇರುವವರು ದೆಹಲಿಗೆ ಹೋಗಿದ್ದಾರೆ, ನನ್ನನ್ನು ಸಿಎಂ ಮಾಡುವ ಪ್ರಯತ್ನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಗೆ ಕರೆ ಮಾಡಿಲ್ಲ, ಅವರನ್ನು ಕಳುಹಿಸಿಲ್ಲ. ಯಾಕೆ ಹೋದಿರಿ ಎಂದು ಪ್ರಶ್ನೆ ಮಾಡುವುದಿಲ್ಲ ಎಂದರು.

Leave a Reply