ಯಾರೊ ಟೈಮ್ ಪಾಸಿಗಾಗಿ ಅಂದು ಬರೆದ ಪುಸ್ತಕಗಳು ಇಂದು ಗ್ರಂಥಗಳಾಗಿವೆ. ಆ ಗ್ರಂಥಗಳೇ ಇಂದು ನಮ್ಮನ್ನು ಆಳುವಂತಾಗಿದೆ. ಅವರು ನಮ್ಮ ಕೈ, ಕಾಲಿಗೆ ಬೇಡಿ ಹಾಕಿಲ್ಲ, ಮೆದುಳಿಗೆ ಬೇಡಿ ಹಾಕಿದ್ದಾರೆ. ನಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ. ಆದಕ್ಕಾಗಿ ಈ ಹೋರಾಟ ಪ್ರಾರಂಭ ಮಾಡಲಾಗಿದೆ.
ಮನುಷ್ಯರನ್ನು ಮನುಷ್ಯರಾಗಿ ನೋಡುವುದು ಬಹಳ ಮುಖ್ಯ. ಅವನು ಆ ಜಾತಿ, ಈ ಜಾತಿ ಅಂತಾ ಮುಟ್ಟಿಸಿಕೊಳ್ಳುವುದಿಲ್ಲ. ಅನಿಷ್ಟ ಪದ್ಧತಿಗಳು ಹೋಗಬೇಕು, ಅದಕ್ಕೆ ನಮ್ಮ ಹೋರಾಟ. ದಲಿತ ನೀರು ಮುಟ್ಟಿದರೆ ಅಶುದ್ಧ ಅಂತಾರೆ. ಅದೇ ಒಂದು ಎಮ್ಮೆ ಬೆಳಗ್ಗೆಯಿಂದ ಸಂಜೆವರೆಗೂ ನೀರಲ್ಲೇ ಇರುತ್ತದೆ. ಈ ತಾರತಮ್ಯದ ವಿರುದ್ಧ ನಮ್ಮ ಹೋರಾಟವಿದೆ. ಗುಡಿ ಕಟ್ಟುವವರೂ ನಾವು, ದೇಣಿಗೆ ಕೊಡುವವರೂ ನಾವು. ದೇಗುಲ ರೆಡಿಯಾದ ಮೇಲೆ ದಲಿತರಿಗೆ ಅಲ್ಲಿ ಪ್ರವೇಶ ಇಲ್ಲ. ದೇವಸ್ಥಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿ. ಶಿಕ್ಷಣ ಒಂದೇ ನಮ್ಮನ್ನ ಬದುಕಿಸಲು ಸಾಧ್ಯವಿಲ್ಲ. ಬದುಕಿನ ಅನುಭವದಿಂದ ಬರುವ ಜ್ಞಾನ ಬಹಳ ಮುಖ್ಯ.
ರಾಜಕೀಯ ಅಧಿಕಾರಕ್ಕಿಂತ ನಮಗೆ ಈ ಸಾಮಾಜಿಕ ಸಮಾನತಾ ಅಧಿಕಾರ ಬಹಳ ಮುಖ್ಯ. ಅಧಿಕಾರ ಬರುತ್ತೆ ಅಧಿಕಾರ ಹೋಗುತ್ತದೆ. ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯ ಕೆಲಸದಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ಪೇಂಟಿಂಗ್ ಇರುವುದು. ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್ ಮದಾರಿ ಎನ್ನುವ ಚಿತ್ರಕಾರ ಆ ಪೇಂಟಿಂಗ್ ತಯಾರಿಸಿದ್ದರು.
ಹಿಂದೂ ಎನ್ನುವುದು ಭಾರತೀಯ ಪದವೇ ಅಲ್ಲ. ಅದು ಪರ್ಷಿಯನ್ ಭಾಷೆಯಿಂದ ಬಂದಿದೆ. ಮತ್ತು ಅದು ತುಂಬಾ ಕೀಳು ಅರ್ಥವನ್ನು ಹೊಂದಿದೆ. ಭಾರತಕ್ಕೂ ಪರ್ಷಿಯನ್ ಗೂ ಏನು ಸಂಬಂಧ ? ಅದು ಹಿಂದೂ ಹೇಗೆ ಆಯಿತು ? ಎಂಬುದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ. ಅದರ ಅರ್ಥ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಈ ಪದದ ಬಗ್ಗೆ ಚರ್ಚೆ ಆಗಬೇಕು. ಎಲ್ಲಿಂದಲೋ ಬಂದ ಧರ್ಮವನ್ನು ತಂದು ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲಾಗುತ್ತಿದೆ. ಜಾತಿ, ಧರ್ಮದ ಹೆಸರಲ್ಲಿ ನಮ್ಮನ್ನು ಹೊಡೆದಾಡಿಸುತ್ತಿದ್ದಾರೆ. ಈ ಬಗ್ಗೆ ಜಾಗೃತರಾಗಬೇಕು.
ಪ್ರತಾಪಗಡ್ ಕೋಟೆಯಲ್ಲಿ ಶಿವಾಜಿಯು ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಅವರ ಕಾಲದಲ್ಲಿ ಸಮಾನತೆಯಿತ್ತು. ಆದರೆ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ನೈಜ ಇತಿಹಾಸ ಬೇರೆ ಇದೆ. ಈಗ ನಮಗೆ ಬೇರೆ ಇತಿಹಾಸ ತೋರಿಸಲಾಗುತ್ತಿದೆ. ಬಸವಣ್ಣ, ಶಿವಾಜಿ, ಸಂತ ತುಕಾರಾಮ ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ತಿರುಚಿ ಬೇರೆ ರೀತಿ ತೋರಿಸಲಾಗುತ್ತಿದೆ. ಬಸವಣ್ಣನವರ ಕಾಲದಲ್ಲಿ ಸಾಕಷ್ಟು ಹತ್ಯೆಗಳು ನಡೆದವು, ಅದನ್ನು ಮುಸ್ಲಿಮರು ಮಾಡಿದರಾ? ಒಂದು ಲಕ್ಷ ಜೈನರ ಹತ್ಯೆಗಳಾಗಿವೆ ಎಂದು ಜೈನರ ಸ್ವಾಮೀಜಿ ಹೇಳಿದ್ದಾರೆ. ಜೈನರ ಹತ್ಯೆಯನ್ನು ಆದೀಲ್ ಶಾ ಮಾಡಿದರೆ? ಈ ಎಲ್ಲದರ ಕುರಿತು ಚರ್ಚೆ ಆಗಬೇಕಿದೆ.
ಸ್ಥಳೀಯರಿಗೆ ಆದ್ಯತೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ. ಮುಂದಿನ ದಿನಗಳಲ್ಲಿ ನಿಪ್ಪಾಣಿಯಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಿ, ಜನ ಜಾಗೃತಿ ಮೂಡಿಸಲಾಗುತ್ತದೆ. ಇದು ಟ್ರೇಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ !
-ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
(ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ “ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು)



