ಬೆಂಗಳೂರು: ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಕನ್ನಡ ಸಿನಿಮಾರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದಾರೆ. ಅವರು ಮತ್ತು ಇತರ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಕೂಡ ಸಲ್ಲಿಕೆಯಾಗಿದೆ. ಆದರೆ ಸಮಸ್ಯೆ ಇಲ್ಲಿಗೆ ಮುಗಿದಿಲ್ಲ. ದರ್ಶನ್ ಬಂಧನದ ನಂತರ ಅನೇಕ ಬೇರೆ ರೀತಿಯ ಸಮಸ್ಯೆಗಳು ಎದುರಾಗಿವೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ದರ್ಶನ್ ಜೈಲು ಪಾಲಾಗಿರುವುದು ಅವರ ಕುಟುಂಬದ ಸದಸ್ಯರಿಗೆ ಮಾತ್ರ ನೋವು ಬೇಸರ ತಂದಿಲ್ಲ. ಅವರ ಅಸಂಖ್ಯಾತ ಅಭಿಮಾನಿಗಳಿಗೂ ಬೇಸರ ಉಂಟು ಮಾಡಿದೆ. ಜೊತೆಗೆ ಹಲವರಿಗೆ ಹಲವು ರೀತಿಯ ಸಮಸ್ಯೆಗಳ ಮೂಲಕ ತಲೆನೋವಾಗಿ ಪರಿಣಮಿಸಿದೆ.
ಅದರಲ್ಲೂ ಪರಪ್ಪನ ಅಗ್ರಹಾರ ಪ್ರದೇಶದ ಜನತೆ ತಾವು ಯಾವುದೇ ತಪ್ಪು ಮಾಡದೆ ಹೋದರೂ ದರ್ಶನ್ ಕಾರಣಕ್ಕಾಗಿ ಶಿಕ್ಷೆ ಅನುಭವಿಸುವಂತಾಗಿದೆ. ಐಟಿ ಆಧಾರಿತ ಉದ್ಯೋಗಿಗಳು ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು ಅಂತರ್ಜಾಲ ಆಧಾರಿತ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ದೇಶದಾದ್ಯಂತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ.
ಮೊಬೈಲ್ ಫೋನುಗಳು ರಿಂಗಣಿಸುವುದಿಲ್ಲ. ಇದಕ್ಕೂ ದರ್ಶನ್ ಗೂ ಏನು ಸಂಬಂಧ ಎಂಬ ಪ್ರಶ್ನೆ ಬರುವುದು ಸಹಜ. ದರ್ಶನ್ ಜೈಲುವಾಸಿಯಾಗಿದ್ದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟೋರಿಯಸ್ ರೌಡಿಗಳು, ಮೋಸ್ಟ್ ವಾಂಟೆಡ್ ಉಗ್ರರು ಸೇರಿದಂತೆ ಅನೇಕ ಕುಖ್ಯಾತರನ್ನು ಇರಿಸಲಾಗಿದೆ. ಜೈಲಿನಲ್ಲಿದ್ದೆ ಈ ಕುಖ್ಯಾತರು ಅಂತರ್ಜಾಲ ತಂತ್ರಜ್ಞಾನದ ಮೂಲಕ ಹೊರ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದು, ಹಲವು ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಜೈಲಿಗೆ ಆತ್ಯಾಧುನಿಕ ಜಾಮರ್ ಗಳನ್ನು ಅಳವಡಿಸಲಾಗಿತ್ತು.
ಇದರಿಂದ ಈ ಪ್ರದೇಶದ ಜನತೆ ಸಂಕಷ್ಟಕ್ಕೆ ಸಿಲುಕಿ ಪ್ರತಿಭಟಿಸಿದ್ದರು. ಜನಸಾಮಾನ್ಯರ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಜಾಮರ್ ಗಳ ತಂತ್ರಜ್ಞಾನದ ಪ್ರಮಾಣವನ್ನು ಕಡಿಮೆ ಮಾಡಿತ್ತು. ಇದರಿಂದ ಜೈಲಿನ ಎರಡು ಕಿಲೋ ಮೀಟರ್ ಆಸುಪಾಸಿನಲ್ಲಿ ಮಾತ್ರ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿತ್ತು.
ಆದರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ತಮ್ಮ ಆಪ್ತರೊಂದಿಗೆ ಜೈಲು ಆವರಣದಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ ಹಾಗೂ ಮೊಬೈಲ್ ಫೋನ್ ಬಳಸಿ ವಿಡಿಯೋ ಕಾಲ್ ಮಾಡಿದ ದೃಶ್ಯಗಳು ಬಹಿರಂಗವಾಗಿದ್ದವು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅತ್ಯಾಧುನಿಕ ಜಾಮರ್ ಗಳು ಇರುವ ಈ ಜೈಲಿನಲ್ಲಿ ಮೊಬೈಲ್ ಫೋನ್ ಬಳಕೆ ಹೇಗೆ ಮಾಡಲಾಯಿತು ಎಂಬ ಬಗ್ಗೆ ತನಿಖೆ ನಡೆಸಿದ ಸರ್ಕಾರ ಇದೀಗ ಜೈಲಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಗಳಲ್ಲಿ ಟಿ-ಎಚ್ಸಿಬಿಎಸ್ ಎಂಬ ಅತ್ಯಾಧುನಿಕ ಜಾಮರ್ ಗಳನ್ನು ಅಳವಡಿಸಲಾಗಿದೆ. ಇದರಿಂದ ಕಾರಾಗೃಹದಲ್ಲಿ ಮೊಬೈಲ್ ಫೋನ್ ಮತ್ತು ಅಂತರ್ಜಾಲ ಬಳಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂವಹನಕ್ಕೆ ಸ್ಥಿರ ದೂರವಾಣಿ ಸೌಲಭ್ಯ, ಇ-ಮೇಲ್, ವಾಕಿಟಾಕಿ ಬಳಸುತ್ತಿದ್ದಾರೆ ಎಂದು ಕಾರಾಗೃಹದ ಅಧಿಕಾರಿ ತಿಳಿಸಿದ್ದಾರೆ.
ಜೈಲಿನಲ್ಲಿ ಇಂತಹ ಅತ್ಯಾಧುನಿಕ ಜಾಮರ್ ಅಳವಡಿಸ ಪರಿಣಾಮ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸುತ್ತಮುತ್ತಲಿನ ಎಂಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ. ಇದರಿಂದ ಈ ಪ್ರದೇಶದ ಜನ ಹೈರಾಣಾಗಿದ್ದಾರೆ.




