ಎರಡು ಪ್ರಶ್ನೆಗಳಿಗೆ ಮಿತಭಾಷಿ ಮನಮೋಹನ್ ಸಿಂಗ್ ಕೊಟ್ಟ ಉತ್ತರಗಳು ಹೇಗಿದ್ದವು ಗೊತ್ತಾ?

1 year ago

ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಲು ಇನ್ನು ಕೆಲವೇ ತಿಂಗಳುಗಳಿದ್ದವು. 2014ರ ಲೋಕಸಭಾ ಚುನಾವಣೆಯ ಕಾವು ಜೋರಾಗಿತ್ತು. ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿದ್ದ ಯುಪಿಎ ಮೈತ್ರಿಕೂಟ ಪ್ರಚಾರದಲ್ಲಿ ಕೊಂಚ ಮಂಕಾಗಿದ್ದರೆ, ಅಡ್ವಾಣಿಯನ್ನು ಹಿಂದಿಕ್ಕಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದ ಮೋದಿಯವರ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವಿನ ಹುಮ್ಮಸ್ಸಿನಲ್ಲಿತ್ತು. ಮನಮೋಹನ್ ಸಿಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ನೂರಾರು ಪತ್ರಕರ್ತರ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ಉತ್ತರಿಸುತ್ತಿದ್ದರು.

2ಜಿ ಸ್ಕ್ಯಾಮ್, ಕೋಲ್ಗೇಟ್ ಹಗರಣ, ಕಾಮನ್ವೆಲ್ತ್ ಸ್ಕ್ಯಾಮ್ ಮೊದಲಾದ ಹಗರಣಗಳ ಸುತ್ತ ಪತ್ರಕರ್ತರು ಕೇಳುತ್ತಿದ್ದ ಪ್ರಶ್ನೆಗಳಿಗೆ ಮನಮೋಹನ್ ಸಾವಧಾನವಾಗಿ, ವಿವರವಾಗಿ ಉತ್ತರಿಸುತ್ತಿದ್ದರು. ವಿರೋಧ ಪಕ್ಷ ಮತ್ತು ಮೀಡಿಯಾಗಳ ಜಂಟಿ ಸಂಚಿನಿಂದಾಗಿ ಆ ಹಗರಣಗಳನ್ನು ಹೇಗೆ larger than image ರೀತಿ project ಮಾಡಿ ಜನರ ದಿಕ್ಕುತಪ್ಪಿಸಲಾಗುತ್ತಿದೆ ಎಂಬುದನ್ನು ವಿವರಿಸುತ್ತಿದ್ದರು. ಸಹಜವಾಗಿಯೇ ಮೀಡಿಯಾ ಮಿತ್ರರಿಗೆ ಆ ಫ್ಯಾಕ್ಟ್ ಫುಲ್ ಸ್ಪಷ್ಟನೆ ಬೇಕಿರಲಿಲ್ಲ. ಪ್ರಶ್ನೆಗಳ ರಾಶಿ ಒಟ್ಟಿ, ಅವುಗಳ ನಡುವೆ ಮನಮೋಹನ್ ಸಿಂಗ್ ಅವರನ್ನು ಅಸಹಾಯಕರನ್ನಾಗಿಸುವುದು ಅವರ ತುಡಿತ. ಆಗ ಪತ್ರಕರ್ತರೊಬ್ಬರು ಒಂದು ಪ್ರಶ್ನೆ ಎಸೆದರು, “ಸರ್ ಎನ್ಡಿಎ ಪ್ರಧಾನಿ ಅಭ್ಯರ್ಥಿಯಾದ ಮೋದಿಯವರು ನಿಮ್ಮನ್ನು ಅತ್ಯಂತ Weak Prime Minister ಎಂದು ಲೇವಡಿ ಮಾಡಿದ್ದಾರೆ. ಅದಕ್ಕೆ ನೀವೇನಂತೀರಿ?”.

ಅದಕ್ಕೆ ಹೇಗೆ ಬೇಕಾದರೂ ಉತ್ತರಿಸಬಹುದಿತ್ತು ಅಥವಾ ನಿರ್ಲಕ್ಷಿಸಬಹುದಿತ್ತು ಅಥವಾ ಸಿಟ್ಟಿಗೇಳಬಹುದಿತ್ತು. ಅಬ್ಬಾ! ಆದರೆ, ಆ ಪ್ರಶ್ನೆಗೆ ಮನಮೋಹನ್ ಕೊಟ್ಟ ಉತ್ತರವಿದೆಯಲ್ಲ ಅದು ಮೋದಿಗಷ್ಟೇ ಅಲ್ಲ, ಗೋದಿ ಮೀಡಿಯಾದ ಮಿತ್ರರೂ ಮುಟ್ಟಿನೋಡಿಕೊಳ್ಳುವಂತಿತ್ತು. “ನಾನು ವೀಕ್ ಪ್ರಧಾನಿ ಹೌದೋ, ಅಲ್ಲವೋ ಅನ್ನೋದನ್ನು ಇತಿಹಾಸ ನಿರ್ಧರಿಸುತ್ತೆ. ಆದರೆ ನನ್ನ ದೃಷ್ಟಿಯಲ್ಲಿ, ನಾನು ದುರ್ಬಲ ಪ್ರಧಾನಿಯಲ್ಲ. ಬಿಜೆಪಿಯವರು, ಅವರಿಗೆ ಬೇಕಾದಂತೆ ಕರೆಯಬಹುದು. ಆ ಸ್ವಾತಂತ್ಯ್ರ ಅವರಿಗಿದೆ. ಡಿಯರ್ ಫ್ರೆಂಡ್ (ಪ್ರಶ್ನೆ ಕೇಳಿದ ಪತ್ರಕರ್ತನನ್ನು ಉದ್ದೇಶಿಸಿ) ನಿಮ್ಮ ಪ್ರಕಾರ strong prime minister ಅಂದ್ರೆ ಏನು? ಅಹಮದಾಬಾದ್ನ ರಸ್ತೆಯ ಮೇಲೆ ಅಮಾಯಕ ಜನರ ಮಾರಣಹೋಮ ನಡೆಯುತ್ತಿದ್ದರೂ ಕಣ್ಮುಚ್ಚಿ ಕೂರುವುದೇ? ಅಥವಾ ಅಂತಹ ಮಾರಣಹೋಮದ ನೇತೃತ್ವ ವಹಿಸುವುದೇ? ಒಂದುವೇಳೆ, ನಾಯಕನೊಬ್ಬನ ಬಲವನ್ನು ಅಳೆಯಲು ಅಂತಹ ಮಾರಣಹೋಮವೇ ನಿಮ್ಮ ಮಾನದಂಡವಾಗಿದ್ದರೆ…. ಇಗೋ ಕೇಳಿ, ಸೌಹಾರ್ದತೆಯ ಈ ದೇಶಕ್ಕೆ ಅಂತಹ ಬಲಶಾಲಿ ಪ್ರಧಾನಿ ಯಾವತ್ತಿಗೂ ಬೇಡ!”

ಮನಮೋಹನ್ ಸಿಂಗ್ ತುಂಬಾ ಕಡಿಮೆ ಮಾತಾಡುವ ಮಿತಭಾಷಿಯಾಗಿರಬಹುದು; ಆದರೆ, ಅವರ ಮಾತುಗಳಲ್ಲಿ ತೂಕವಿರುತ್ತಿತ್ತು. ಆ ತೂಕ ಬಂದದ್ದು ಅವರ ಓದು, ವಿದ್ವತ್ತು ಮತ್ತು ತಿಳಿವಳಿಕೆಯಿಂದ. ಹೀಗಾಗಿಯೇ ಅವರು ಅಳೆದುತೂಗಿ ಮಾತಾಡುತ್ತಿದ್ದರು. ಆ ಮಾತುಗಳು ಅರ್ಥಪೂರ್ಣವಾಗಿರುತ್ತಿದ್ದವು. ಅದಕ್ಕಾಗಿಯೇ, ತಾನು ಬಯಸದಿದ್ದರೂ ಪ್ರಧಾನಿಯಂತಹ ಹುದ್ದೆ ಎರಡು ಅವಧಿಗೆ ಅವರನ್ನು ಹುಡುಕಿಬಂದಿತ್ತು. ಹುದ್ದೆ ಮತ್ತು ಅಧಿಕಾರಕ್ಕಾಗಿ ಮಾಡಬಾರದ ಕಸರತ್ತುಗಳನ್ನು ಮಾಡಿ, ತಮ್ಮವರನ್ನೇ ತುಳಿದು, ಕಾರ್ಯಾಂಗದ ವಿಶ್ವಾಸಾರ್ಹತೆಯನ್ನೆ ಬಲಿಕೊಟ್ಟವರ ನಡುವೆ ಮನಮೋಹನ್ ನಿಜಕ್ಕೂ ಬುದ್ದನಷ್ಟೇ ತಣ್ಣಗೆ ಕಾಣುತ್ತಾರೆ. ಭಾರತೀಯರಾದ ನಾವದನ್ನು ಅರ್ಥ ಮಾಡಿಕೊಳ್ಳಲಿಲ್ಲವಷ್ಟೇ! ಹರಿಕಥೆ ದಾಸರ ಧಾಟಿಯಲ್ಲಿ ಪುಂಖಾನುಪುಂಖವಾಗಿ ನಿರರ್ಗಳವಾಗಿ ಮಾತಾಡುವುದೇ ದಿಟ್ಟ ನಾಯಕತ್ವ ಎಂದು ನಮ್ಮನ್ನು ವ್ಯವಸ್ಥಿತವಾಗಿ ನಂಬಿಸಲಾಯ್ತು. ಅದರಿಂದ ರಂಜನೆಯೇನೊ ಸಿಕ್ಕಿತು, ಆದರೆ ಮೈಮರೆತು ಅಮೂಲ್ಯ ಮುತ್ತುರತ್ನಗಳನ್ನೇ ಕಳೆದುಕೊಂಡೆವು. ಮನಮೋಹನ್ ಸಿಂಗ್ ಅಂತಹ ರತ್ನಗಳಲ್ಲಿ ಒಂದೆನ್ನಬಹುದು.

ಇರಲಿ… ಪತ್ರಕರ್ತರ ಪ್ರಶ್ನಾವಳಿ ಹಾಗೇ ಮುಂದುವರೆದಿತ್ತು, ಆಗ ಮತ್ತೋರ್ವ ಪತ್ರಕರ್ತ ಕೇಳಿದ, “ಮೂರನೇ ಅವಧಿಗೆ ಪ್ರಧಾನಿಯಾಗುವುದಿಲ್ಲ ಎಂದು ನೀವು ಈಗಾಗಲೇ ಘೋಷಿಸಿದ್ದೀರಿ. ಅದರರ್ಥ, ನಿಮ್ಮ ಯುಪಿಎ ಕೂಟದಿಂದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? ಮುಂಚೂಣಿಯಲ್ಲಿರುವ ಮೋದಿಯವರಿಗೆ ಅವರು ಸರಿಸಮಾನ ಹೋರಾಟ ಕೊಡಬಲ್ಲರೇ? ಮೋದಿಯವರ ಅಲೆಯನ್ನು ಹಿಂದಿಕ್ಕಿ ನಿಮ್ಮ ಮೈತ್ರಿಕೂಟ ಸರ್ಕಾರ ರಚಿಸುವ ವಿಶ್ವಾಸ ನಿಮಗಿದೆಯೇ?”

ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗುವ ಅವಕಾಶವಿದೆಯೋ, ಅಥವಾ ಯುಪಿಎ ಮೈತ್ರಿಕೂಟಕ್ಕೆ ಗೆಲುವಿನ ಭರವಸೆ ಇದೆಯೋ ಎಂಬುದನ್ನು ವಸ್ತುನಿಷ್ಠವಾಗಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ `ಮೋದಿ ಮುಂಚೂಣಿಯಲ್ಲಿದ್ದಾರೆ, ಅವರಿಗೆ ಸರಿಸಮನಾಗಲು ಯಾರೂ ಸಾಧ್ಯವಿಲ್ಲ’ ಎಂಬ ಅಭಿಪ್ರಾಯವನ್ನು ರೂಪಿಸುವುದು ಆ ಪತ್ರಕರ್ತನ ಉದ್ದೇಶವಾಗಿತ್ತು. ಅದನ್ನು ಸೂಕ್ಷ್ಮವಾಗಿ ಗ್ರಹಿಸಿದ ಮನಮೋಹನ್ ಸಿಂಗ್ ಅವರು ಕೊಟ್ಟಿದ್ದು ಚುಟುಕು ಉತ್ತರವಷ್ಟೆ…. “ಮೋದಿಯವರ ಬಲಾಬಲಗಳ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಆದ್ರೆ, ಒಂದಂತೂ ಸತ್ಯ. ಮೋದಿಯವರೇನಾದರೂ ಈ ದೇಶಕ್ಕೆ ಪ್ರಧಾನಿಯಾದ್ರೆ, ದೇಶ ದೊಡ್ಡ ದುರಂತಕ್ಕೆ ಈಡಾಗಬೇಕಾಗುತ್ತೆ!”

ಎಂಥಾ ಸತ್ಯದ ಮಾತಲ್ಲವೇ! ಮೋದಿ ಆಳ್ವಿಕೆಯ ಈ ಹತ್ತು ವರ್ಷದಲ್ಲಿ ದೇಶ, ದುರಂತವಲ್ಲದೆ ಇನ್ನೇನು ಅನುಭವಿಸಿದೆ? ಹಸಿವಿನ ಸೂಚ್ಯಂಕದಲ್ಲಿ ಕುಸಿತ, ಆರ್ಥಿಕತೆಯ ಅಧಃಪತನ, ನಿರುದ್ಯೋಗದಲ್ಲಿ ಐತಿಹಾಸಿಕ ಹೆಚ್ಚಳ, ಡಾಲರ್ ಮುಂದೆ ರೂಪಾಯಿಯ ಚಾರಿತ್ರಿಕ ಕುಸಿತ, ದೇಶದ ಭೂಭಾಗಗಳ ಮೇಲೆ ಚೀನಾ ಅತಿಕ್ರಮಣ, ಸೇನಾ ನೆಲೆಗಳ ಮೇಲೆ ಭಯೋತ್ಪಾದಕರ ದಾಳಿ, ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬಿಸಿ, ಕೃಷಿ ಬಿಕ್ಕಟ್ಟು, ಹೆಚ್ಚಳವಾದ ರೈತರ ಆತ್ಮಹತ್ಯೆ, ಸಾರ್ವಜನಿಕ ಆಸ್ತಿಪಾಸ್ತಿಗಳ ಖಾಸಗೀಕರಣ, ಕೊರೊನಾ ಕಾಲದಲ್ಲಿ ಆಮ್ಲಜನಕ ಸಿಗದೆ ಜನರ ಮಾರಣಹೋಮ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ, ನೆರೆಹೊರೆ ರಾಷ್ಟ್ರಗಳೊಂದಿಗೆ ಸ್ನೇಹಕ್ಕೆ ಹಿನ್ನಡೆ… ಒಂದಾ, ಎರಡಾ… ಸಾಲುಸಾಲು ದುರಂತಗಳು. ಇದನ್ನೆಲ್ಲ ಹತ್ತು ವರ್ಷಗಳ ಹಿಂದೆಯೇ ಮುಂಗಂಡು ಮಾತನಾಡಿದ್ದರು ಮನಮೋಹನ್ ಸಿಂಗ್! ಮೋದಿಯನ್ನು ಒಂದು ಭರವಸೆಯಾಗಿ ಕಾಣಲು ಹಂಬಲಿಸುತ್ತಿದ್ದ ಸಮಾಜಕ್ಕೆ, ಆತನೊಬ್ಬ ದೊಡ್ಡ ದುರಂತ ಎಂಬ ಕಹಿಸತ್ಯವನ್ನು ಹೇಳಿದ್ದರು.

ಹೌದು, ಮನಮೋಹನ್ ಸಿಂಗ್ ಮಾತನಾಡಿದ್ದು ಕಡಿಮೆಯೇ ಇರಬಹುದು; ಆದರೆ ಅವರ ಮಾತುಗಳು ಎಷ್ಟು ತೂಕವಾಗಿರುತ್ತಿದ್ದವು ಎನ್ನುವುದಕ್ಕೆ ಈ ಎರಡು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದೇ ಸಾಕ್ಷಿ. ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಗಾದೆಯ ಗೂಡಾರ್ಥವನ್ನು ಅಜ್ಜ-ಮುತ್ತಜ್ಜನ ಕಾಲದಿಂದ ಮನಗಂಡೂ, ಮಾತಿನ ಮೋಡಿಗೆ ಒಳಗಾಗಿ ಅಧಿಕಾರ ಒಪ್ಪಿಸ್ತೀವಿ ಅಂದ್ರೆ ನಮ್ಮ ಬುದ್ದಿವಂತಿಕೆಗೆ ಏನೆನ್ನಬೇಕು!

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply