ಗಾಂಧಿಗೂ ಸರ್ದಾರ್ ಪಟೇಲರಿಗೂ ಆಗಿ ಬರ್‍ತಾ ಇರಲಿಲ್ಲ; ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿಗೆ ದೋಖಗೈದರು; ಸೋನಿಯಾ ಪಿವಿಎನ್‌ಗೆ ಅವಮಾನ ಮಾಡಿದರು; ಪ್ರಣಬ್ ಮುಖರ್ಜಿಯನ್ನು ಕೆಟ್ಟದಾಗಿ ನಡೆಸಿಕೊಂಡರು..…
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಎದುರಾಳಿಗಳನ್ನು `ಖಳ’ರಾಗಿಸಲು ಬಿಜೆಪಿ ಮತ್ತು ಆರೆಸ್ಸೆಸ್ ಅನುಸರಿಸಿಕೊಂಡು ಬಂದಿರುವ ವೆರಿಓಲ್ಡ್ ತಂತ್ರಗಾರಿಕೆ ಇದು. ಕಾಂಗ್ರೆಸ್ ಪಕ್ಷವೇ ಬೆಳೆಸಿದ ನಾಯಕರನ್ನು, ಕಾಂಗ್ರೆಸ್ ಪಕ್ಷದಿಂದ ವಂಚನೆಗೆ ಒಳಗಾದವರಂತೆ ಬಿಂಬಿಸಿ, ಆ ಅನುಕಂಪದ ಮೇಲೆ ತಾನು ರಾಜಕಾರಣ ಮಾಡಿಕೊಂಡು ಬರೋದು ಬಿಜೆಪಿಯ ದುಷ್ಟ ಖಯಾಲಿ.
ಈಗ ಧೀಮಂತ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ನಮ್ಮನ್ನು ಅಗಲಿದ್ದಾರೆ. ಈಗಾಗಲೇ `ದಿ ಆಕ್ಸಿಡೆಂಟಲ್ ಪ್ರೈಮ್‌ಮಿನಿಸ್ಟರ್’ ಎಂಬ ನೆರೇಟಿವಿಟಿಯ ಮೂಲಕ ಕಾಂಗ್ರೆಸಿನ ಗಾಂಧಿ ಫ್ಯಾಮಿಲಿಯು ಮನಮೋಹನ್ ಸಿಂಗರ ಕೈಕಟ್ಟಿಹಾಕಿ ಕೂರಿಸಿತ್ತು, ಬಾಯಿ ಬಂದ್ ಮಾಡಿಸಿತ್ತು , ಅವರಿಗೆ ಇನ್ನಿಲ್ಲದ ಹಿಂಸೆ ನೀಡಿತ್ತು ಅಂತೆಲ್ಲ ಬೊಗಳೆ ಶುರು ಮಾಡಿಕೊಂಡಿದ್ದ ಸ್ಯಾಫ್ರನ್ ಪರಿವಾರಿಗಳು ಈಗ ಅವರ ಸಾವಿನ ನಂತರ ಅದನ್ನು ಇನ್ನಷ್ಟು ಜೋರು ಮಾಡಿ, ಮನಮೋಹನರ ಸಾವಿನ ಸಿಂಪಥಿಯನ್ನು ಕಾಂಗ್ರೆಸ್ ವಿರುದ್ಧದ ಪಬ್ಲಿಕ್ ಒಪಿನೀಯನ್ ಆಗಿ ಪರಿವರ್ತಿಸಲು ಮುಂದಾದರೂ ಅಚ್ಚರಿಪಡಬೇಕಿಲ್ಲ.
ಒಂದು ರಾಜಕೀಯ ಪಕ್ಷ ಎಂದಮೇಲೆ ಅಲ್ಲಿ ಭಿನ್ನ ದನಿಗಳು, ಸಣ್ಣಪುಟ್ಟ ಮನಸ್ತಾಪಗಳು ಇದ್ದೇ ಇರುತ್ತವೆ. ನಾವು ಅಪಾರವಾಗಿ ಗೌರವಿಸುವ `ಡೆಮಾಕ್ರೆಸಿ’ಗೆ ಇಂತಹ ಭಿನ್ನತೆಯೇ ಜೀವಾಳ. ಆದರೆ ಒಂದು ದನಿ, ಒಂದು ಧರ್ಮ, ಒಬ್ಬ ನಾಯಕನಂತಹ ಅಥಾರಿಟೇರಿಯನ್ ಸಿದ್ದಾಂತದ ಬಿಜೆಪಿಯೊಳಗೆ ನಾಯಕತ್ವಕ್ಕಾಗಿ ನಡೆದ ಶೀತಲ ಸಮರಗಳ ಕ್ಯಾನ್ಸರ್ ಗಡ್ಡೆಯೇ ಕೊಳೆತು ನಾರುತ್ತಿದ್ದರೂ ಅದನ್ನು ಅವರು ಮರೆಮಾಚಿ, ಕಾಂಗ್ರೆಸಿನೊಳಗಿನ ಸಣ್ಣಪುಟ್ಟ ಕೆಮ್ಮು-ನೆಗಡಿ-ಶೀತಜ್ವರಕ್ಕೆ ಟಾರ್ಚು ಹಿಡಿಯಲಾಗುತ್ತೆ. ಅಟಲ್ ಬಿಹಾರಿ ವಾಜಪೇಯಿ ಮುಂಚೂಣಿಗೆ ಬರುವ ವೇಳೆಯಲ್ಲೇ ದೀನ್‌ದಯಾಳ್ ಉಪಾಧ್ಯಾಯ ನಿಗೂಢವಾಗಿ ಹೆಣವಾಗಿದ್ದು ಯಾರಿಂದ? ರಥಯಾತ್ರಿ ಅಡ್ವಾಣಿಗೆ, ಅವರ ಶಿಷ್ಯ ಮೋದಿ ಕಾಣಿಸಿದ `ಮಾರ್ಗದರ್ಶಿ ಮಂಡಳಿ’ಯ ದಾರಿ ಎಂತದ್ದು? ಕರ್ನಾಟಕದಲ್ಲಿ ಅಧಿಕಾರಕ್ಕೇರಲು ಆಸರೆಯಾದ ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ್ದು ಯಾರು? ಎಂಬ ಪ್ರಶ್ನೆಗಳು ಮಾರ್ದನಿಸುವುದೇ ಇಲ್ಲ. ಯಾಕೆಂದರೆ ನಮ್ಮ ಗೌರವಾನ್ವಿತ ಮೀಡಿಯಾಗಳು ಖಾಕಿ ಚೆಡ್ಡಿಯೊಳಗೆ ಕಾಲು ತೂರಿಸಿ ಯಾವುದೋ ಕಾಲವಾಗಿ ಹೋಗಿದೆ.
ತಾತ್ಪರ್ಯ ಇಷ್ಟೆ…. ಯಾವ ಕಾಂಗ್ರೆಸ್ ಪಕ್ಷ ಸತತ ಹತ್ತು ವರ್ಷಗಳ ಕಾಲ ನಿರಾತಂಕವಾಗಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿಸಿತ್ತೋ ಅದೇ ಕಾಂಗ್ರೆಸ್ ಪಕ್ಷವು ಸಿಂಗ್ ಅವರಿಗೆ ದ್ರೋಹಗೈದಿತು, ಅವರ ಕಣ್ಣೀರಿಗೆ ಕಾರಣವಾಗಿತ್ತು ಎಂಬ ನೆರೇಟಿವಿಟಿಯನ್ನು ನಾಳೆಯಿಂದ… ಬಹುಶಃ ಇವತ್ತಿನಿಂದಲೇ ಹುಟ್ಟುಹಾಕಲಾಗುತ್ತೆ. ಅಂತಹ ಸಂತ್ರಸ್ತ ಮನಮೋಹನ್ ಸಿಂಗ್ ಅವರಿಗೆ ಘನತೆ ದಕ್ಕಿಸಿಕೊಡಲು ಸಾಕ್ಷಾತ್ ಪರಮಾತ್ಮನೆ ಕಳಿಸಿಕೊಟ್ಟ ನಾನ್-ಬಯೋಲಾಜಿಕಲ್ ಸಂತನಂತೆ ನಮ್ಮ ಮೋದಿ ಮಹಾತ್ಮರು ಕಣ್ಣೀರು ಹಾಕಿ, ಪ್ರತಿಮೆ ನಿರ್ಮಾಣದ ಶಪಥಗೈದರೂ ಅಚ್ಚರಿಯಿಲ್ಲ.
ಆದರೆ ಅದಕ್ಕು ಮುನ್ನ ನಾವೊಂದಷ್ಟು ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ತಲೆಮಾರುಗಳಿಂದ ಕಾಂಗ್ರೆಸ್ ಪಕ್ಷದಲ್ಲೇ ಬದುಕು ಕಟ್ಟಿಕೊಂಡ ಬಹುಪಾಲು ರಾಜಕಾರಣಿಗಳಿಗೆ ಇಲ್ಲದ ಸೈದ್ಧಾಂತಿಕ ಸ್ಪಷ್ಟತೆ ಮನಮೋಹನರಿಗಿತ್ತು. ಒಬ್ಬ ಪರಿಪಕ್ವ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನರಿಗೆ ನಮ್ಮ ದೇಶದ ಪ್ರಗತಿಗೆ ಬಿಜೆಪಿಯ ವಿಭಜಕ ಕೋಮುವಾದಿ ರಾಜಕಾರಣ ಎಂಥಾ ಅಪಾಯಕಾರಿಯಾಗಬಲ್ಲದು ಎಂಬುದರ ಸ್ಪಷ್ಟ ಮುನ್ನೋಟವಿತ್ತು. ಹಾಗಾಗಿಯೇ ಅವರು ಎಸ್ ಎಂ ಕೃಷ್ಣ, ಗುಲಾಮ್ ನಬಿ ಆಜಾದ್ ಮೊದಲಾದವರ ರೀತಿ ಅವಕಾಶವಾದಿ ರಾಜಕಾರಣಕ್ಕೆ ಮಾರುಹೋಗದೆ ಒಬ್ಬ ಜಾತ್ಯತೀತ ವ್ಯಕ್ತಿಯಾಗಿ ಉಳಿದುಕೊಂಡರು. ತಮ್ಮ ಶಿಥಿಲ ಆರೋಗ್ಯದ ನಡುವೆಯೂ ಕೋವಿಡ್ ಸಮಯದಲ್ಲಿ, ತೀರಾ ಇತ್ತೀಚೆಗೆ ಲೋಕಸಭಾ ಚುನಾವಣಾ ಪ್ರಚಾರ ಸಮಯದಲ್ಲಿ ಪ್ರಧಾನಿ ಮೋದಿಯವರಿಗೆ ಅವರು ಬರೆದ ಬಹಿರಂಗ ಪತ್ರಗಳೇ ಇದಕ್ಕೆ ಸಾಕ್ಷಿ.
ಮೋದಿಯವರಾಗಲಿ ಅಥವಾ ಮತ್ತಾವುದೇ ಸಂಘಿಗಳಾಗಲಿ ಮನಮೋಹನ್ ಸಿಂಗ್ ಅವರನ್ನು ಅಪ್ರೋಪ್ರಿಯೇಟ್ ಮಾಡಿಕೊಳ್ಳಲು ಮುಂದಾದರೆ, ಕಟ್ಟಕಡೆಯದಾಗಿ ಅವರು ಮೋದಿಗೆ ಬರೆದ ಬಹಿರಂಗ ಪತ್ರದ ಈ ಒಂದು ಪ್ಯಾರಾವನ್ನು ಮುಖಕ್ಕೆ ಹಿಡಿದರೆ ಸಾಕು ಅನ್ನಿಸುತ್ತೆ. ಸೋಲಿನ ಹತಾಶೆಯಿಂದ 2024ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣಕ್ಕೆ ಮುಂದಾದ ಮೋದಿಗೆ ತಮ್ಮ ಶಿಕ್ಷಿತ ಮಾತುಗಳಲ್ಲಿ ಹೀಗೆ ತಿವಿದಿದ್ದರು….
“ಈ ಚುನಾವಣಾ ಪ್ರಚಾರದ ಭಾಷೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೋದಿಯವರು ಅತ್ಯಂತ ಕ್ರೌರ್ಯವೆನ್ನಬಹುದಾದ ದ್ವೇಷದ ಮಾತುಗಳನ್ನಾಡುತ್ತಿದ್ದಾರೆ. ಇದು ನಿಜಕ್ಕೂ ಸಮಾಜದ ಐಕ್ಯತೆಯನ್ನು ಒಡೆದುಹಾಕುವ ಯತ್ನ. ಸಾರ್ವಜನಿಕ ಚರ್ಚೆಗಳ ಘನತೆಯನ್ನು ಇಷ್ಟು ಕೀಳುಮಟ್ಟಕ್ಕೆ ಇಳಿಸಿದ ಮತ್ತು ಆ ಮೂಲಕ ಪ್ರಧಾನಮಂತ್ರಿ ಕಚೇರಿಯ ತೂಕವನ್ನೆ ಕುಂದಿಸಿದ ಮೊದಲ ಪ್ರಧಾನಿ ಈ ಮೋದಿಯವರು. ಇದಕ್ಕು ಹಿಂದಿನ ಯಾವ ಪ್ರಧಾನಿಯೂ, ಸಮಾಜದ ಒಂದು ನಿರ್ದಿಷ್ಟ ವರ್ಗವನ್ನು ಅಥವಾ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಈ ಬಗೆಯ ದ್ವೇಷದ, ಅಸಂಸದೀಯ ಮತ್ತು ಕ್ರೌರ್ಯದ ಮಾತುಳನ್ನಾಡಿಲ್ಲ. ನನ್ನ ಬಗ್ಗೆಯೂ ಅವರು ಸುಳ್ಳುಸುಳ್ಳೇ ಆರೋಪ ಮಾಡಿದ್ದಾರೆ (ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಬೇಕು ಎಂದಿದ್ದರು ಎಂದು). ನನ್ನ ಜೀವಮಾನದಲ್ಲಿ ಯಾವತ್ತೂ ನಾನು ಸಮುದಾಯಗಳನ್ನು ಪ್ರತ್ಯೇಕಿಸಿ ನೋಡಿಲ್ಲ. ಅದೇನಿದ್ದರೂ ಬಿಜೆಪಿಗಷ್ಟೇ ಸೀಮಿತವಾದ ಚಾಳಿ. ಭಾರತದ ಜನ ಇದನ್ನೆಲ್ಲ ನೋಡುತ್ತಿದ್ದಾರೆ. ಇಂತಹ ವಿಕೃತೀಕರಣ ಎಲ್ಲೆ ಮೀರುತ್ತಿದೆ…..”
ಈ ದೇಶದ ಆರ್ಥಿಕತೆಗೆ, ಸಾಮಾಜಿಕ ಸಾಮರಸ್ಯಕ್ಕೆ, ಜಾಗತಿಕ ಘನತೆಗೆ ಮನಮೋಹನ್ ಸಿಂಗ್ ಏನೆಲ್ಲಾ ಕೊಡುಗೆ ಕೊಟ್ಟರು ಎಂಬ ಉದ್ದನೆಯ ಪಟ್ಟಿಗು ಮುನ್ನ ಮೋದಿಯವರ ರಾಜಕೀಯ ವೈಖರಿಯ ಬಗ್ಗೆ, ಅವರ ಘನತೆಹೀನ ವರ್ತನೆಯ ಬಗ್ಗೆ, ಮುಖ್ಯವಾಗಿ ಕೋಮುವಾದಿ ರಾಜಕಾರಣದ ಅಪಾಯದ ಬಗ್ಗೆ ಮನಮೋಹನ್ ಸಿಂಗ್ ಎಂಥಾ ಸ್ಪಷ್ಟತೆ ಹೊಂದಿದ್ದರು ಅನ್ನೋದನ್ನು ನಾವು ತಿಳಿದುಕೊಂಡಿರುವುದು ಅತ್ಯಗತ್ಯ. ಯಾಕೆಂದರೆ ನಾಳೆಯಿಂದ ಮನಮೋಹನ್ ಸಿಂಗ್ ಅವರನ್ನು, ಅವರಿಗಿದ್ದ ಮುತ್ಸದ್ದಿತನವನ್ನು, ಆರ್ಥಿಕ ನಿಪುಣತೆಯನ್ನು `ಅಪ್ರಾಪ್ರಿಯೇಟ್’ ಮಾಡಿಕೊಳ್ಳುವ ಕೇಸರಿ ಯತ್ನಗಳು ಗರಿಬಿಚ್ಚಿದರೂ ಅಚ್ಚರಿಯಿಲ್ಲ. ಅಂತಹ ಹುನ್ನಾರಗಳನ್ನು ಮುಖಾಮುಖಿಯಾಗಲು ಇಂತಹ ಸರಕುಗಳು ಅತ್ಯುಪಯುಕ್ತ.
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




