ಮರಳುಕಳ್ಳರ ಹೆಡೆಮುರಿ ಕಟ್ಟಲು ಜಿಲ್ಲಾಡಳಿತ ಸಂಪೂರ್ಣ ವಿಫಲ: ಮುನೀರ್ ಕಾಟಿಪಳ್ಳ

1 year ago

ಮಂಗಳೂರು: ಕೊಟ್ಟಾರಿಕುದ್ರು ಗಟ್ಟಿಕುದ್ರು ದ್ವೀಪಗಳಲ್ಲಿ ಯಾವುದೇ ತರದ ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಬಲಾಢ್ಯ ಮರಳು ಮಾಫಿಯಾ ಅಕ್ರಮವಾಗಿ ಮರಳುಗಾರಿಕೆ ವ್ಯಾಪಕವಾಗಿ ನಡೆಸುತ್ತಿರುವುದರಿಂದ ಉಭಯ  ದ್ವೀಪಗಳು ಕೊಚ್ಚಿಹೋಗುವ ಭೀತಿಗೆ ಗುರಿಯಾಗಿವೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.

ನಗರದಲ್ಲಿಂದು ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಯೆದುರು ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.

ಸುಮಾರು 40ರಷ್ಟು ಕುಟುಂಬಗಳು ಹಲವು ತಲೆಮಾರುಗಳಿಂದ ವಾಸ ಇರುವ, ಕಾಂಡ್ಲಾ ಜಾತಿಯ ಸಸ್ಯವರ್ಗಗಳಿರುವ ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮವಾಗಿರುವ ಇಂತಹ ದ್ಚೀಪಗಳನ್ನು ರಕ್ಷಿಸಲು ತಕ್ಷಣದಿಂದಲೇ ಕ್ರಮ ವಹಿಸಬೇಕಾಗಿದೆ. ಆದರೆ ಇಲ್ಲಿನ ಬಲಾಢ್ಯ ಮರಳುಕಳ್ಳರು‌ ನದಿಯ ಜೊತೆಗೆ ಜನತೆಯ ಬದುಕನ್ನು ಕೂಡ ನಾಶ ಮಾಡಲು ಹೊರಟಿದ್ದಾರೆ.ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಂಪೂರ್ಣ ಮಾಹಿತಿಯಿದ್ದರೂ ಮರಳುಕಳ್ಳರ ಹೆಡೆಮುರಿ ಕಟ್ಟಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೊಟ್ಟಾರಿಕುದ್ರು ಗಟ್ಟಿಕುದ್ರು ದ್ವೀಪಗಳ ಉಳಿಸಿ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಆಗ್ನೆಸ್ ಜಂಕ್ಷನ್ ನಿಂದ ಮೆರವಣಿಗೆಯಲ್ಲಿ ಸಾಗಿದರು.

ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳೂ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ, ಕೊಟ್ಟಾರಿಕುದ್ರು ಗಟ್ಟಿಕುದ್ರು ದ್ವೀಪಗಳು ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಆದರೂ ಇಲ್ಲಿ  ಕಳೆದ ಹಲವು ವರ್ಷಗಳಿಂದ  ಪೊಲೀಸ್ ಹಾಗೂ ವಿವಿಧ ಇಲಾಖೆಗಳು, ರಾಜಕೀಯ ಹಿತಾಸಕ್ತಿಗಳ ಬೆಂಬಲದೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ  ನಡೆಯುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್, ದ್ವೀಪವಾಸಿಗಳ ಸಂಕಷ್ಟಗಳನ್ನು ಎಳೆಎಳೆಯಾಗಿ ವಿವರಿಸುತ್ತಾ, ಈ ಹಿಂದಿನ ಜಿಲ್ಲಾಧಿಕಾರಿಗಳು ಸ್ಕೌಟ್ಸ್ ಎಂಬ ನಾಮ ಫಲಕವನ್ನು ಕೂಡ ಕೊಟ್ಟಾರಿಕುದ್ರುನಲ್ಲಿ ಸ್ಥಾಪಿಸಿದ್ದಾರೆ. ಆದರೆ ಇಲ್ಲಿನ ಮರಳುಕಳ್ಳರು ಆ ನಾಮಫಲಕವನ್ನೇ ಕಿತ್ತೊಗೆದು ಅಕ್ರಮ ಮರಳುಗಾರಿಕೆಯನ್ನು ನಡೆಸುವುದಲ್ಲದೆ, ವಿರೋಧ ವ್ಯಕ್ತಪಡಿಸುವ ಸ್ಥಳೀಯರಿಗೆ ಜೀವ ಬೆದರಿಕೆ ಒಡ್ಡುವ ಮೂಲಕ ಕುದ್ರುವಿನಿಂದಲೇ ಒದ್ದೋಡಿಸುವ ಷಡ್ಯಂತ್ರವನ್ನು ನಡೆಸುತ್ತಿದ್ದಾರೆ ಎಂದರು.

ಹೋರಾಟವನ್ನು ಬೆಂಬಲಿಸಿ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್,ಹೋರಾಟ ಸಮಿತಿಯ ಅಧ್ಯಕ್ಷರಾದ ಓಸ್ವಾಲ್ಡ್ ಫುರ್ತಾಡೋ ಮಾತನಾಡಿದರು. ಪ್ರತಿಭಟನೆಯಲ್ಲಿ ಕ್ಯಾಥೊಲಿಕ್ ಸಭಾದ ಉಪಾಧ್ಯಕ್ಷ ಸ್ಟೀವನ್ ರೋಡ್ರಿಗಸ್, ಜಿಲ್ಲಾ ಕಾರ್ಮಿಕ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಯುವಜನ ನಾಯಕರಾದ ರಿಜ್ವಾನ್ ಹರೇಕಳ, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮೋದಿನಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ನಾಯಕ ಫ್ಲೇವಿ ಕ್ರಾಸ್ತಾ ಅತ್ತಾವರ, ಸ್ಟ್ಯಾನ್ಲಿ ಡಿಕುನ್ನಾ,ಸಾಮಾಜಿಕ ಚಿಂತಕ ನೆಲ್ಸನ್ ರೋಚ್ ಮುಂತಾದವರು ಭಾಗವಹಿಸಿದ್ದರು.

ಹೋರಾಟದ ನೇತ್ರತ್ವವನ್ನು ಹೋರಾಟ ಸಮಿತಿ ನಾಯಕರಾದ ಸುನೀತಾ ಡಿಸೋಜ,ಇತಾಲಿಸ್,ಡೇವಿಡ್ ಡಿಸೋಜ, ಮೇಜಿ ಡಿಸೋಜ, ಆಸ್ಕರ್ ಡಿಸೋಜ, ಕಿಶೋರ್ ಡಿಸೋಜ, ಬ್ರೂಸ್ಲಿ ಗ್ಲಾಡ್ಸನ್ ಮುಂತಾದವರು ವಹಿಸಿದ್ದರು.

ಬಳಿಕ ಹೋರಾಟ ಸಮಿತಿಯ ಉನ್ನತ ಮಟ್ಟದ ನಿಯೋಗವೊಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಪರಿಹಾರಕ್ಕಾಗಿ ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದರು.

Leave a Reply