ಬೆಳಗಾವಿ: ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಮೋಡಬಿತ್ತನೆ ಮಾಡುವ ಬಗ್ಗೆ ನಾನು ಸಕಾರಾತ್ಮಕ ಭಾವನೆ ಹೊಂದಿದ್ದು, ಈ ವಿಚಾರವಾಗಿ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ್ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಮೋಡ ಬಿತ್ತನೆ ವಿಚಾರವಾಗಿ ಅನೇಕ ರಾಜ್ಯಗಳಲ್ಲಿ ಪ್ರಯೋಗ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಹೆಚ್.ಕೆ ಪಾಟೀಲ್ ಅವರು ಸಚಿವರಾಗಿದ್ದಾಗಲೂ ಈ ಪ್ರಯೋಗ ಮಾಡಲಾಗಿತ್ತು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಶಾಸಕ ಪ್ರಕಾಶ್ ಅವರು ತಮ್ಮ ಜಿಲ್ಲೆಯಲ್ಲಿ ಉಚಿತವಾಗಿ ಈ ಪ್ರಯತ್ನ ಮಾಡಿದ್ದು, ಉತ್ತಮ ಫಲಿತಾಂಶ ಬಂದಿರುವ ಬಗ್ಗೆ ವರದಿ ಇದೆ. ಈಗ ಬೇರೆ ಕಡೆಗಳಲ್ಲೂ ಇದಕ್ಕೆ ತಗುಲುವ ವೆಚ್ಚದಲ್ಲಿ (ಕಾಸ್ಟ್ ಪ್ರೈಸ್) ಈ ಮೋಡ ಬಿತ್ತನೆ ಮಾಡಲು ತಾವು ಸಿದ್ಧ ಎಂದರು.
ಈ ವಿಚಾರದಲ್ಲಿ ಟೆಂಡರ್ ಹಾಗೂ ಇತರೆ ಪ್ರಕ್ರಿಯೆಯ ತಾಂತ್ರಿಕ ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ. ಇಲ್ಲದಿದ್ದರೆ ವಿರೋಧ ಪಕ್ಷಗಳು ಇದನ್ನು ನಿಮ್ಮ ಶಾಸಕರಿಗೆ ನೀಡಿದ್ದೀರಿ ಎಂದು ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಇದಕ್ಕೆ 50 ಲಕ್ಷದಿಂದ 1 ಕೋಟಿವರೆಗೂ ವೆಚ್ಚ ತಗುಲಬಹುದು. ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚೆ ಮಾಡುತ್ತೇನೆ. ಈ ವಿಚಾರವಾಗಿ ಮತ್ತೊಮ್ಮೆ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ನಾನು ಸಕಾರಾತ್ಮಕ ಭಾವನೆ ಹೊಂದಿದ್ದೇನೆ ಎಂದು ಸದನಕ್ಕೆ ಮಾಹಿತಿ ನೀಡಿದರು.




