ದೆಹಲಿ: ಮಾರ್ಚ್ 12 ರಂದು ವ್ಯವಹಾರದ ಸಮಯದ ಒಳಗೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಎಸ್.ಬಿ.ಐ.ಗೆ ಭಾರೀ ಹಿನ್ನಡೆಯಾದಂತಾಗಿದೆ.
ಚುನಾವಣಾ ಬಾಂಡ್‌ಗಳ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ, ತನ್ನ ಆದೇಶವನ್ನು ಅನುಸರಿಸದ ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ದಾನಿಗಳ ವಿವರಗಳನ್ನು ಬಹಿರಂಗಪಡಿಸದೆ ಇದ್ದದ್ದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸದ SBI ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯ ಕೋರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಬಾಂಡ್ ವಿವರಗಳನ್ನು ಸಲ್ಲಿಸಲು ಮಾರ್ಚ್ 12 ರ ವ್ಯವಹಾರದ ಸಮಯದ ಒಳಗೆ ಸಮಯ ನೀಡಿದ್ದು, ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಕಳೆದ 26 ದಿನಗಳಲ್ಲಿ, ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯು ಅದರ ಬಗ್ಗೆ ಮೌನವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಖಾರವಾಗಿ ಪ್ರಶ್ನಿಸಿತು.
ವಿವರಗಳನ್ನು ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಸೂಚಿಸಿದೆ.
ಮೊದಲು ರಾಜಕೀಯ ಪಕ್ಷಗಳು ಸ್ವೀಕರಿಸಿದ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಣೆಯನ್ನು ಎಸ್‌ಬಿಐ ಕೋರಿತ್ತು. ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಯಿತು.
ಸುಪ್ರೀಂ ಕೋರ್ಟ್‌ನಲ್ಲಿ ಎಲೆಕ್ಟೋರಲ್ ಬಾಂಡ್‌ಗಳ ಪ್ರಕರಣ:
ಫೆಬ್ರವರಿ 15 ರಂದು, ಐದು ನ್ಯಾಯಾಧೀಶರ ಸಂವಿಧಾನ ಪೀಠ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು “ಅಸಂವಿಧಾನಿಕ” ಎಂದು ಪರಿಗಣಿಸಿ ಅಮಾನ್ಯಗೊಳಿಸಿತು ಮತ್ತು ಮಾರ್ಚ್ 6ರ ಒಳಗೆ ದಾನಿಗಳ ಮಾಹಿತಿ, ದೇಣಿಗೆ ಮೊತ್ತಗಳು ಮತ್ತು ಸ್ವೀಕರಿಸುವವರನ್ನು ಬಹಿರಂಗಪಡಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು.
ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಏಪ್ರಿಲ್ 12, 2019 ರಿಂದ ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಒದಗಿಸುವಂತೆ ಈ ಯೋಜನೆಗಾಗಿ ಗೊತ್ತುಪಡಿಸಿದ ಹಣಕಾಸು ಸಂಸ್ಥೆಯಾದ ಎಸ್ ಬಿ ಐಗೆ ನ್ಯಾಯಾಲಯ ನಿರ್ದೇಶನ ನೀಡಿತು.
ಮಾರ್ಚ್ 13 ರೊಳಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಪ್ರಕಟಿಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗಕ್ಕೆ ವಹಿಸಿತು.
ಮಾರ್ಚ್ 4 ರಂದು, ಎಸ್‌ಬಿಐ ವಿವಿಧ ಮೂಲಗಳಿಂದ ಡೇಟಾವನ್ನು ಮರುಪಡೆಯಲು ಮತ್ತು ಇತರ ದಾಖಲೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಉಲ್ಲೇಖಿಸಿ ಎನ್‌ಕ್ಯಾಶ್ ಮಾಡಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಕಾಮನ್ ಕಾಸ್ ಪ್ರತ್ಯೇಕ ಮನವಿ ಸಲ್ಲಿಸಿದವು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಧಿಕ್ಕರಿಸಿದ ಆರೋಪದ ಮೇಲೆ ಬ್ಯಾಂಕ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಮನವಿ ಮಾಡಿದವು.
ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಸಾರ್ವಜನಿಕರಿಂದ ದಾನಿ ಮತ್ತು ದೇಣಿಗೆ ಮೊತ್ತದ ವಿವರಗಳನ್ನು ತಡೆಹಿಡಿಯುವ ಉದ್ದೇಶದಿಂದ ಎಸ್‌ಬಿಐ ಅರ್ಜಿಯ ಸಮಯ ಕೋರಿರುವುದು ಉದ್ದೇಶಪೂರ್ವಕವಾಗಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿತ್ತು.
ಚುನಾವಣಾ ಬಾಂಡ್‌ಗಳನ್ನು “ಸಂಪೂರ್ಣವಾಗಿ ಪತ್ತೆಹಚ್ಚಬಹುದಾಗಿದೆ” ಎಂದು ಮನವಿಯಲ್ಲಿ ಹೇಳಲಾಗಿತ್ತು. ಇದು ಬಾಂಡ್‌ಗಳನ್ನು ಖರೀದಿಸುವ ದಾನಿಗಳ ಮತ್ತು ಅವರು ದೇಣಿಗೆ ನೀಡುವ ರಾಜಕೀಯ ಪಕ್ಷಗಳ ರಹಸ್ಯ ಸಂಖ್ಯೆ ಆಧಾರಿತ ದಾಖಲೆಯನ್ನು ಎಸ್‌ಬಿಐ ನಿರ್ವಹಿಸುತ್ತದೆ ಎಂಬ ಅಂಶದಿಂದ ಸ್ಪಷ್ಟವಾಗಿದೆ. ರಾಜಕೀಯ ಪಕ್ಷಗಳ ಹಣಕಾಸಿನಲ್ಲಿ ಯಾವುದೇ ರೀತಿಯ ಅನಾಮಧೇಯ ಸಹಭಾಗಿತ್ವದ ಪ್ರಜಾಪ್ರಭುತ್ವದ ಮೂಲತತ್ವ ಮತ್ತು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಪ್ರತಿಪಾದಿಸಲಾದ ಜನರ ತಿಳಿದುಕೊಳ್ಳುವ ಹಕ್ಕಿಗೆ ವಿರುದ್ಧವಾಗಿದೆ ಎಂದು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಹೇಳಲಾಗಿತ್ತು.
ಮತದಾರರು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಮಾಹಿತಿಯ ಲಭ್ಯತೆ ನಿರ್ಣಾಯಕವಾಗಿದೆ ಎಂದು ಅರ್ಜಿಯಲ್ಲಿ ಒತ್ತಿಹೇಳಲಾಗಿತ್ತು.




