ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ಕಾಲವಶ

2 years ago

ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ಅವರು ಎರಡು ದಿನಗಳ ಹೋರಾಟದ ನಂತರ ಮುಂಬೈ ಆಸ್ಪತ್ರೆಯಲ್ಲಿ ಕಾಲವಶರಾದರು.

ಮುಂಬೈ: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ಅವರು ಎರಡು ದಿನಗಳ ಹೋರಾಟದ ನಂತರ ಮುಂಬೈ ಆಸ್ಪತ್ರೆಯಲ್ಲಿಕಾಲವಶರಾದರು. ಅವರಿಗೆ 86 ವರ್ಷವಾಗಿತ್ತು. ಮೃತರ ಅಂತ್ಯಕ್ರಿಯೆ ಇಂದು ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಹೃದಯಾಘಾತಕ್ಕೆ ಒಳಗಾದ ಮನೋಹರ ಜೋಶಿ ಅವರನ್ನು ಬುಧವಾರ ಮುಂಬೈನ ಪಿ.ಡಿ.ಹಿಂದುಜಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುನಲ್ಲಿ ಇರಿಸಿ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಉತ್ತಮ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಬುಲೆಟಿನ್ ನಲ್ಲಿ ನಿನ್ನೆ ಹೇಳಲಾಗಿತ್ತು.

ಅವರು 1995 ರಿಂದ 1999 ರವರೆಗೆ ಮಹಾರಾಷ್ಟ್ರ ಸಿಎಂ ಆಗಿ ಸೇವೆ ಸಲ್ಲಿಸಿದರು ಮತ್ತು ಅವಿಭಜಿತ ಶಿವಸೇನೆಯಿಂದ ರಾಜ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಮೊದಲ ನಾಯಕರಾಗಿದ್ದರು. ಅಲ್ಲದೆ, ಜೋಶಿ ಅವರು ಸಂಸತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. 2002 ರಿಂದ 2004 ರವರೆಗೆ ಲೋಕಸಭಾ ಸ್ಪೀಕರ್ ಆಗಿ ಕೂಡ ಸೇವೆ ಸಲ್ಲಿಸಿದ್ದರು.

ಡಿಸೆಂಬರ್ 2, 1937 ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ನಂದಿವಿಯಲ್ಲಿ ಜನಿಸಿದ ಜೋಶಿಯವರು ಮುಂಬೈನಲ್ಲಿ ಶಿಕ್ಷಣ ಪಡೆದರು. ಅವರು ತಮ್ಮ 75ನೇ ವಯಸ್ಸಿನಲ್ಲಿ 2020ರಲ್ಲಿ ನಿಧನರಾದ ಅನಘಾ ಮನೋಹರ್ ಜೋಶಿ ಅವರನ್ನು ವಿವಾಹವಾದರು. ಅವರು ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಮನೋಹರ ಜೋಶಿಯವರ ರಾಜಕೀಯ ಜೀವನದ ಹಿನ್ನೋಟ:

  1. ಮನೋಹರ್ ಜೋಶಿ ಅವರು ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. 1967ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಅವರು 40 ವರ್ಷಗಳ ಕಾಲ ಶಿವಸೇನೆಯೊಂದಿಗೆ ಗುರುತಿಸಿಕೊಂಡಿದ್ದರು.
  2. ಜೋಶಿ ಅವರು 1968-70ರ ಅವಧಿಯಲ್ಲಿ ಮುಂಬೈನಲ್ಲಿ ಮುನ್ಸಿಪಲ್ ಕೌನ್ಸಿಲರ್ ಆಗಿದ್ದರು ಮತ್ತು 1970 ರಲ್ಲಿ ಸ್ಥಾಯಿ ಸಮಿತಿ (ಮುನ್ಸಿಪಲ್ ಕಾರ್ಪೊರೇಷನ್) ಅಧ್ಯಕ್ಷರಾಗಿದ್ದರು.
  3. 1976 ರಿಂದ 1977 ರವರೆಗೆ ಒಂದು ವರ್ಷ ಮುಂಬೈ ಮೇಯರ್ ಆಗಿ ಸೇವೆ ಸಲ್ಲಿಸಿದರು.
  4. 1972ರಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ವಿಧಾನ ಪರಿಷತ್ತಿನಲ್ಲಿ ಮೂರು ಅವಧಿಗೆ ಸೇವೆ ಸಲ್ಲಿಸಿದ ನಂತರ, ಜೋಶಿ ಅವರು 1990ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು.
  5. 1990-91ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.
  6. 1999 ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಂಬೈ ಉತ್ತರ-ಮಧ್ಯ ಲೋಕಸಭಾ ಕ್ಷೇತ್ರದಿಂದ ಶಿವಸೇನೆಯಿಂದ ಆಯ್ಕೆಯಾಗಿದ್ದರು.

Leave a Reply