ದೆಹಲಿ: ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ನಾಗರಿಕತೆಯನ್ನು ನಿರ್ಧರಿಸುವ ಪೌರತ್ವ ಕಾನೂನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2019ರ ಕೊರೊನಾ ಪೂರ್ವದಲ್ಲಿ ದೆಹಲಿಯಲ್ಲಿ ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ದೇಶ ಸಾಕ್ಷಿಯಾಗಿತ್ತು. ಬಿಜೆಪಿಯೇತರ ರಾಜ್ಯಗಳು ಮತ್ತು ಸಿಎಎ ವಿರೋಧಿಗಳ ಪ್ರತಿಭಟನೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ಜನ ಬಲಿಯಾಗಿದ್ದರು.
ಇದೀಗ ಕೇಂದ್ರ ಮತ್ತೆ ವಿವಾದಾಸ್ಪದ ಅಧಿಸೂಚನೆ ಹೊರಡಿಸಿದ್ದು, 2015ರ ಮೊದಲು ಭಾರತಕ್ಕೆ ಬಂದ ಬಾಂಗ್ಲಾ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಸರ್ಕಾರ ಪೌರತ್ವವನ್ನು ನೀಡಲು ಉದ್ದೇಶಿಸಿದೆ.
ಪೌರತ್ವ ಕಾಯ್ದೆ ಅನುಷ್ಠಾನ ವಿಷಯವನ್ನು 2019ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಮತ್ತು ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಪ್ರಮುಖ ಪ್ರಚಾರದ ವಿಷಯವನ್ನಾಗಿಸಿಕೊಂಡಿತ್ತು. ವಿಶೇಷವೆಂದರೆ 2024ರ ಲೋಕಸಭಾ ಚುನಾವಣೆಗೆ ಕೆಲವೇ ವಾರಗಳ ಮುನ್ನ ಮತ್ತೊಮ್ಮೆ ವಿವಾದಾಸ್ಪದ ವಿಷಯಕ್ಕೆ ಕೈಹಾಕಿದೆ.
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
ಸಿಎಎಯನ್ನು ಖಂಡಿತ ಜಾರಿಗೊಳಿಸುವುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಒತ್ತಿ ಹೇಳಿದ್ದರು. ಸಿಎಎ ದೇಶದ ಕಾಯ್ದೆ. ಅದನ್ನು ಖಂಡಿತ ಜಾರಿಗೊಳಿಸಲಾಗುವುದು. ಸಿಎಎ ಚುನಾವಣೆಗೂ ಮುನ್ನ ಜಾರಿಯಾಗಲಿದೆ. ಈ ಬಗ್ಗೆ ಯಾರೂ ಗೊಂದಲಕ್ಕೀಡಾಗಬಾರದು ಎಂದು ಅವರು ಹೇಳಿದ್ದರು.
ಸಿಎಎ ವಿರೋಧಿಗಳ ಪ್ರಕಾರ, ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ರೂಪಿಸಲಾಗಿದೆ.
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೀರ್ಘಕಾಲದಿಂದ ಸಿಎಎ ಕಡುವಿರೋಧಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ಸರ್ಕಾರ ಜನರ ವಿರುದ್ಧ ತಾರತಮ್ಯ ಮಾಡುವ ಯಾವುದನ್ನಾದರೂ ವಿರೋಧಿಸುತ್ತದೆ ಎಂದಿದ್ದಾರೆ. ಈ ಮೂಲಕ ಕೇಂದ್ರದ ಉದ್ದೇಶಿತ ಮಸೂದೆ ವಿರುದ್ಧ ತಕರಾರು ತೆಗೆದಿದ್ದಾರೆ.
ಸಿಎಎ ವಿರುದ್ಧದ ಹೋರಾಟದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೂಡ ಜೊತೆಯಾಗಿದ್ದು, ಬಿಜೆಪಿ ಸರ್ಕಾರ ಕೋಮು ಸೌಹಾರ್ದತೆಗೆ ವಿರುದ್ಧವಾಗಿದೆ.ಈ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದಿದ್ದಾರೆ.
ಕೇರಳ ಮತ್ತು ಪಂಜಾಬ್, ಕಾಂಗ್ರೆಸ್ ಮೈತ್ರಿಕೂಟದ ರಾಜ್ಯಗಳು ಸಹ ಸಿಎಎ ವಿರೋಧಿಸಿ ನಿರ್ಣಯಗಳನ್ನು ಅಂಗೀಕರಿಸಿವೆ. ತೆಲಂಗಾಣದ ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಕೂಡ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿತ್ತು. ಅಲ್ಲದೆ, ಲಕ್ಷಾಂತರ ಜನ ವ್ಯಕ್ತಪಡಿಸಿದ ಭಯದ ದೃಷ್ಟಿಯಿಂದ ಯಾವುದೇ ಧರ್ಮ ಅಥವಾ ಯಾವುದೇ ವಿದೇಶಕ್ಕೆ ಸಂಬಂಧಿಸಿದ ಎಲ್ಲಾ ಉಲ್ಲೇಖಗಳನ್ನು ತೆಗೆದುಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿತ್ತು.
ಆದರೆ, ಮುಸ್ಲಿಂ ಪ್ರಾಬಲ್ಯದ ದೇಶಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡಿದರೆ ಪೌರತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೂ ಸದರಿ ಕಾನೂನನ್ನು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಇದರ ಟೀಕಾಕಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.




