ಮಹಾದೇವಪುರ: ಸಾಕಷ್ಟು ಪ್ರಮಾಣದಲ್ಲಿ ಐಟಿ ಕಂಪನಿಗಳು ಹೊರರಾಜ್ಯದಿಂದ ವಲಸೆ ಬಂದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ, ಕುಡಿಯುವ ನೀರು, ಒತ್ತುವರಿ ದೊಡ್ಡ ಸಮಸ್ಯೆ. ಇಂತಹ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಬೇರೆ ಲೆಕ್ಕಾಚಾರದಲ್ಲಿ ಅವರ ಪತ್ನಿ ಮಂಜುಳಾ ಲಿಂಬಾವಳಿ ಅವರಿಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಈ ಹಿಂದೆ ಮುಳಬಾಗಿಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ವೈಟ್ ಫೀಲ್ಡ್ ನ ನಿವಾಸಿ ಎಚ್.ನಾಗೇಶ್ ಅವರನ್ನು ಕಣಕ್ಕಿಳಿಸಿದೆ. ತಾವು ಸ್ಥಳೀಯ ಎಂದು ಪ್ರಚಾರ ಮಾಡುತ್ತಿದ್ದ ನಾಗೇಶ್ ಅವರಿಗೆ ತಿರುಗೇಟು ನೀಡಲು ಬಿಜೆಪಿ ಸ್ಥಳೀಯರಾದ ಅರವಿಂದ ಲಿಂಬಾವಳಿ ಅವರ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ಎದುರೇಟು ನೀಡಿದೆ.
ಕ್ಷೇತ್ರದಲ್ಲಿ ಹಾಲಿ ಶಾಸಕರು ಎದುರಿಸುತ್ತಿರುವ ಸ್ಥಳೀಯ ವಿರೋಧ ಮತ್ತು ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ನಾಗೇಶ್ ತಮ್ಮ ಪರವಾದ ಅಲೆಯನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಸಿದರೆ, ಮಂಜುಳಾ ಲಿಂಬಾವಳಿಯವರು ತಾವೇನು ಕಡಿಮೆ ಇಲ್ಲ ಎಂಬಂತೆ ನೀಡಿರುವ ಪೈಪೋಟಿ ಕುತೂಹಲ ಮೂಡಿಸದೆ. ಜೆಡಿಎಸ್ ಇಲ್ಲಿ ಆರ್ಪಿಐಗೆ ಬೆಂಬಲ ಘೋಷಿಸಿದೆ.



