ಗುಂಡ್ಲುಪೇಟೆ: ಮತದಾನ ಎಂಬುದು ದೇಶದ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಹಾಗೂ ಮೂಲಭೂತ ಹಕ್ಕಾಗಿದ್ದು, ಯಾವುದೇ ಆಸೆ – ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ಮತದಾನ ಮಾಡಲು ಮುಂದಾಗಬೇಕು ಎಂದು ರಂಗ ವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಹೇಳಿದರು.
ಚಾಮರಾಜನಗರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಸ್ವೀಟ್ ಸಮಿತಿ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಜಾಕಿರ್ ಹುಸೇನ್ ನಗರದಲ್ಲಿ ಏರ್ಪಡಿಸಿದ್ದ ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಮತದಾನ ಮಾಡುವುದು ಕಡ್ಡಾಯವಾಗಿದ್ದು, ತಮ್ಮ ಸುತ್ತಮುತ್ತಲಿನವರಿಗೆ ಮತದಾನದ ಮಹತ್ವವನ್ನು ತಿಳಿಸಬೇಕು ಮತ್ತು ಪ್ರತಿಯೊಬ್ಬರು ಮತದಾನ ಮಾಡುವಂತೆ ಅವರಲ್ಲಿ ಮತದಾನ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ರಂಗವಾಹಿನಿ ಕಲಾವಿದರು ಅಭಿನಯಿಸಿದ ಮತದಾನ ಜಾಗೃತಿ ಬೀದಿ ನಾಟಕ ಸಾರ್ವಜನಿಕರ ಗಮನ ಸೆಳೆಯಿತು. ಮಿಮಿಕ್ರಿ ಮಲ್ಲಣ್ಣ ,ಕಾಳಿಂಗ ಸ್ವಾಮಿ, ಗೌರಿ ಮೊದಲಾದವರ ಅಭಿನಯ ಗಮನ ಸೆಳೆಯಿತು.
ಅಂಗನವಾಡಿ ಕಾರ್ಯಕರ್ತೆ ಬಿ ಕಲಾವತಿ, ಸುನಿತಾ, ಮಾದೇವಿ ,ನಿರ್ಮಲ, ಝಬೀನಾ ಮತ್ತು ಬಡಾವಣೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು. ಮತದಾನ ಕುರಿತ ಬಿತ್ತಿ ಫಲಕಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಿ ಜಾಗೃತಿ ಮೂಡಿಸಲಾಯಿತು.



