ಕೆಂಭಾವಿ: ಶಿಕ್ಷಿತ ಮಹಿಳೆಯಿಂದ ಸಮುದಾಯ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಗ್ರಾ.ಪಂ. ಸದಸ್ಯ ಆರ್.ಎಸ್. ಮಾಲಗತ್ತಿ ಹೇಳಿದರು.
ಪಟ್ಟಣ ಸಮೀಪದ ಮಾಲಗತ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಹಯೋಗ ಸ್ವಯಂ ಸೇವಾ ಸಂಸ್ಥೆ ಮತ್ತು ಅಜೀಂ ಪ್ರೇಮ್ ಜಿ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ, ಸ್ವಸಹಾಯ ಗುಂಪು ಸದಸ್ಯರಿಗೆ ಎರಡು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಅನುಕಂಪ ತೋರಿಸದೆ, ಅವಕಾಶ ಕಲ್ಪಿಸಿಕೊಡುವ ದೊಡ್ಡತನ ನಾವು ತೋರಿಸಬೇಕಾಗಿದೆ. ಹೆಣ್ಣು ಕೇವಲ ಮನೆಕೆಲಸಕ್ಕೆ ಸೀಮಿತಗೊಳ್ಳದೇ ಆರ್ಥಿಕ, ಸಾಮಾಜಿಕವಾಗಿ ಸಬಲರಾಗುತ್ತಿದ್ದಾರೆ. ಪರಾವಲಂಬಿಯಾಗದೆ ಸ್ವಾವಲಂಬಿ ಜೀವನ ನಡೆಸಲು ಸ್ವಸಹಾಯ ಗುಂಪುಗಳು ಸಹಕಾರಿಯಾಗಿದ್ದು, ಸಾಮಾಜಿಕವಾಗಿ ಮಹಿಳೆಯರು ಹೆಚ್ಚು ಸಬಲೀಕರಣಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಸ್ವಯಂ ಸೇವಾ ಸಂಸ್ಥೆಗಳು ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣದ ಬಗ್ಗೆ ಅರಿವು ಮೂಡಿಸುವುದು ಉತ್ತಮ ಬೆಳವಣಿಗೆ, ಸರಕಾರ ಮಹಿಳೆಯರ ಸಬಲೀಕರಣಕ್ಕೆ ಹಲವು ಕಾರ್ಯಕ್ರಮ ಜಾರಿಗೊಳಿಸಿದ್ದು, ಅವುಗಳ ಉಪಯೋಗಪಡೆದು ಸ್ವಾಭಿಮಾನದ ಬದುಕು ನಡೆಸಬೇಕೆಂದು ಸಲಹೆ ನೀಡಿದರು.
ಗ್ರಾ.ಪಂ.ಸದಸ್ಯರಾದ ಯಲ್ಲಪ್ಪ ಬಟಿಗೆರಿ, ಯಂಕೋಬ ದೊರೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ತಾಲೂಕು ಸಂಯೋಜಕ ದೇವೆಂದ್ರಕುಮಾರ, ವಲಯ ಸಂಘಟಕಿ ದೇವಮ್ಮ , ಡಿಎಸ್.ಎಸ್ ಮುಖಂಡ ಮಾನಿಂಗಪ್ಪ ಮಳ್ಳಿ , ಭೀಮಬಾಯಿ ಬೋನಾಳ, ಶಾಂತಾ ಪಾಟೀಲ್ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.



