ಗರ್ಭಿಣಿ ಸಾವು ಪ್ರಕರಣ: ಆರೋಗ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

2 years ago

#Dineshgundurao #healthministry #Gangavathi #Pregnant #death #case #Demand #action #against #healthofficer

ಗಂಗಾವತಿ: ಗಂಗಾವತಿ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಈಶ್ವರ ಸವಡಿ ಇವರ ನಿರ್ಲಕ್ಷ್ಯ, ಹಣದ ದಾಹ, ನಿರಂತರ ಭ್ರಷ್ಟಾಚಾರದಿಂದ ಗಂಗಾವತಿ ತಾಲೂಕಿನ ಅರಳಹಳ್ಳಿ ಗ್ರಾಮದ ತಾಯಿ ಹಾಗೂ ಮಗುವಿನ ಪ್ರಾಣ ಹೋಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್ ಆರೋಪಿಸಿದ್ದಾರೆ.

ತುಂಬು ಗರ್ಭಿಣಿ ಅಂಬಿಕಾ ಗಂ.ಯಮನಪ್ಪ ಹರಿಜನ ಎನ್ನುವ ಮಹಿಳೆಯನ್ನು ಅವರ ಕುಟುಂಬದವರು ದಿನಾಂಕ 02-11-2013 ರಂದು ಗುರುವಾರ ಬೆಳಿಗ್ಗೆ 11 30 ರ ಸುಮಾರಿಗೆ ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸರ್ಕಾರಿ ಆಸ್ಪತ್ರೆಯ ಪರಂಪರೆ ಅಥವ ಅಲಿಖಿತ ಕಾಯ್ದೆ ಎನ್ನುವಂತೆ ಕೇಳಿದಷ್ಟು ಹಣ ಕೊಟ್ಟರೆ ಮಾತ್ರ ಚಿಕಿತ್ಸೆ ದೊರೆಯುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಅಂಬಿಕಾಳ ಕುಟುಂಬಕ್ಕೆ ಹಣ ಕೊಡಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಖಾಸಗಿ ಕ್ಲಿನಿಕ್ ನಲ್ಲಿ ಸ್ಕ್ಯಾನಿಂಗ್ ಮಾಡಿಸಲು ಚೀಟಿ ಬರೆದುಕೊಟ್ಟಿದ್ದಾರೆ. ಖಾಸಗೀ ಕ್ಲಿನಿಕ್ ನಲ್ಲಿ 900 ರೂ. ಖರ್ಚು ಮಾಡಿ ಸ್ಕ್ಯಾನಿಂಗ್ ರಿಪೋರ್ಟ್ ಮಾಡಿಸಿದ್ದಾರೆ. ಅಂಬಿಕಳನ್ನು ಸಂಜೆಯವರಿಗೆ ಆಸ್ಪತ್ರೆಯಲಿಟ್ಟುಕೊಂಡು ಸಂಜೆ 6 ಗಂಟೆ ಸುಮಾರಿಗೆ ಕೊಪ್ಪಳ ಜಾಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.

ಮಗು ಹೊಟ್ಟೆಯಲ್ಲಿ ತೀರಿಕೊಂಡಿದ್ದರಿಂದ ಗರ್ಭಿಣೆ ಮಹಿಳೆ ಅಂಬಿಕಾ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸಾವಿನ ಘಟನೆಯನ್ನು ಕರ್ನಾಟಕ ರೈತ ಸಂಘ (KRS-AIKKS) ತೀವ್ರವಾಗಿ ಖಂಡಿಸುತ್ತದೆ. ತಾಯಿ ಮಗುವಿನ ಸಾವಿಗೆ ಕಾರಣವಾಗಿರುವ ಗಂಗಾವತಿ ತಾಲ್ಲೂಕ ಆರೋಗ್ಯ ಅಧಿಕಾರಿ ಈಶ್ವರ ಸವಡಿ ಇವರ ಮೇಲೆ ಕ್ರಿಮಿನ್ ಕೇಸ್ ದಾಖಲಿಸಿ ಬಂಧಿಸಿ, ಸೇವೆಯಿಂದ ವಜಾಗೊಳಿಸಬೇಕು ಮತ್ತು ಪ್ರಾಣ ಕಳೆದುಕೊಂಡಿರುವ ಕುಟುಂಬಕ್ಕೆ 20 ಲಕ್ಷ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಈ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರ ಮತ್ತು ಬಡ ರೋಗಿಗಳ ಸಾವಿನ ಕುರಿತು ನಮ್ಮ ಸಂಘಟನೆ ಒಂದು ವರ್ಷಗಳಿಂದ ಸರ್ಕಾರಕ್ಕೆ, ಲೋಕಾಯುಕ್ತರಿಗೆ ಮತ್ತು ಆರೋಗ್ಯ ಸಚಿವರಿಗೆ ಅನೇಕ ದೂರುಗಳನ್ನು ಸಲ್ಲಿಸಿದೆ. ಈಶ್ವರ ಸವಡಿ ರಾಜಕೀಯ ಪ್ರಭಾವವೋ ಅಥವಾ ಮೇಲಧಿಕಾರಿಗಳಿಗೆ ತಿಂಗಳ ಮಾಮೂಲಿ ಮುಟ್ಟಿಸುತ್ತಿರುವ ಕಾರಣವೋ ಏನು ಇವರ ಮೇಲೆ ಕಾನೂನ ಕ್ರಮ ಜರುಗಿಸುತ್ತಿಲ್ಲ ಎಂದು ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇನ್ನೆಷ್ಟು ಜೀವಗಳು ಬಲಿಯಾಗುತ್ತವೋ ಗೊತ್ತಿಲ್ಲ. ಈ ಭ್ರಷ್ಟ ತಾಲ್ಲೂಕ ವೈದ್ಯಾಧಿಕಾರಿ ವಿರುದ್ಧ ನಮ್ಮ ಸಂಘಟನೆ ಅಷ್ಟೇ ಅಲ್ಲ; ಗಂಗಾವತಿಯ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸರ್ಕಾರಕ್ಕೆ ದೂರು ನೀಡಿದ್ದಾರೆ. ಅನ್ಯಾಯವಾಗಿ ಸಾವಿಗೀಡಾದ ಅಂಬಿಕಳ ಇಬ್ಬರ ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿವೆ. ಇಂತಹ ಹತ್ತಾರು ತಬ್ಬಲಿ ಮಕ್ಕಳಿಗೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ದಾರೆ.

ದಲಿತ, ರೈತ, ಪ್ರಗತಿಪರ ಇತರೆ ಸಂಘ ಸಂಸ್ಥೆಗಳು ಅಂಬಿಕಾ ಮತ್ತು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿರುವ ಇತರೆ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

ಗರ್ಭೀಣಿ ಸ್ತ್ರೀಯರು ಹಾಗೂ ಇತರರು ಯಾವುದೆ ಭಾಗದ ಸರ್ಕಾರಿ ಆಸ್ಪತ್ರೆಗೆ ಹೋದರೆ ಸಂಘಟನೆಗಳ ಗಮನಕ್ಕೆ ತರಬೇಕು. ಇದೆ ಗಂಗಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಸಾವಿನೊಂದಿಗೆ ಹೋರಾಡುತ್ತಿದ್ದ ತಾವರಗೇರಾ ಪಟ್ಟಣದ ರೇಣುಕಾ ಇತರೆ 3 ಜನ ಗರ್ಭಿಣಿ ಸ್ತ್ರೀಯರ ಮತ್ತು ಮಗುವಿನ ಜೀವ ಉಳಿಸಲಾಯಿತು. ನಮ್ಮ ಸಂಘಟನೆ ಅಷ್ಟೇ ಅಲ್ಲ ಸಹಾಯಕ್ಕೆ ಬರುವ ಬೇರೆ ಯಾರನ್ನಾದರು ಸಂಪರ್ಕಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Leave a Reply