ಶಿಕ್ಷಣ ಪಡೆದುಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ: ಜಯಲಕ್ಷ್ಮಿ

3 years ago

ಬೆಂಗಳೂರು: ಶಿಕ್ಷಣವನ್ನು ಪಡೆದುಕೊಳ್ಳುವ ಹಕ್ಕು ನಮಗೆ ಸಂವಿಧಾನ ನೀಡಿದೆ. ಉಚಿತ ಕಡ್ಡಾಯ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಸಂವಿಧಾನವೇ ನಮಗೆ ನೀಡಿರುವುದು. ಹೆಣ್ಣು ಮಕ್ಕಳು ಸಮಸ್ಯೆ ಬಂದಾಗ ಹೇಳಿಕೊಳ್ಳುವುದಿಲ್ಲ ಅದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಹೆಣ್ಣು ಮಕ್ಕಳು ಧೈರ್ಯವಾಗಿ ಸಮಸ್ಯೆಗಳನ್ನು ಪೋಷಕರ ಜೊತೆಯಲ್ಲಿ, ಶಿಕ್ಷಕರ ಜೊತೆಯಲ್ಲಿ ಹಂಚಿಕೊಳ್ಳಬೇಕು ಎಂದು ಆನೇಕಲ್ ಕ್ಷೇತ್ರ ಶಿಕ್ಷಣ ಅಧಿಕಾರಿ ಜಯಲಕ್ಷ್ಮಿ ಹೇಳಿದರು.

ಆನೇಕಲ್ ಹೆಣ್ಣು ಮಕ್ಕಳ ಸರ್ಕಾರಿ ಫ್ರೌಢಶಾಲೆಯಲ್ಲಿ ನಡೆದ ಸಂವಿಧಾನ ಮತ್ತು ಉಚಿತ ಕಾನೂನು ಅರಿವು ಟೆಲಿ ಲಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಕಾನೂನಿನ ಅರಿವು ಕಾರ್ಯಕ್ರಮ ಮಾಡುವುದು ಶ್ಲಾಘನೀಯ ಎಂದರು.

ವಕೀಲರಾದ ಪುರುಷೋತ್ತಮ ಮಾತನಾಡಿ, ಮಕ್ಕಳಿಗೆ ಉಚಿತ ಶಿಕ್ಷಣವನ್ನು ಸಂವಿಧಾನ ನೀಡಿದೆ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಮನೆಯಲ್ಲಿ ಸಮಸ್ಯೆ ಇದೆ ಎಂದು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ ಸರ್ಕಾರದಿಂದ ಶಿಕ್ಷಣಕ್ಕೆ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಂವಿಧಾನ, ಪೋಸ್ಕೊ ಕಾಯ್ದೆ, ಬಾಲಾಪರಾಧ ಕಾಯ್ದೆ, ಬಾಲಕಾರ್ಮಿಕರ ನಿಷೇಧ ಕಾಯ್ದೆ, ಮಾಹಿತಿಹಕ್ಕು ಕಾಯ್ದೆ ಮತ್ತು ಗ್ರಾಮ ಪಂಚಾಯಿತಿ ಮತ್ತು ಪುರಸಭೆಯಲ್ಲಿ ಮಕ್ಕಳಿಗೆ ಸಿಗುವ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಅಶೋಕೆ.ಕೆ.ಜೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮ ಕುಮಾರಿ, ಶಿಕ್ಷಕರಾದ ಸರೋಜ.ಡಿ.ಸಿ., ಧನರಾಜ್ ಮತ್ತು ಗಿರಿಜಮ್ಮ.ಎನ್.ಎಮ್ ಭಾಗಿಯಾಗಿದ್ದರು.

Leave a Reply