ಅವಹೇಳನಕಾರಿ ಪೋಸ್ಟ್: ಮೈಸೂರಿನಲ್ಲಿ ಉದ್ವಿಗ್ನ ವಾತಾವರಣ

1 year ago

ಮೈಸೂರು: ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಮುದಾಯವೊಂದನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬ ವಿಷಯ ಮೈಸೂರಿನಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ.

ಪರಿಸ್ಥಿತಿಯನ್ನು ತಹಬಂದಿಗೆ ತರಲು ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಹಲವರು ಗಾಯಗೊಂಡರೆ, ಉದ್ರಿಕ್ತ ಗುಂಪು ನಡೆಸಿದ ಕಲ್ಲುತೂರಾಟದಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಅಂತಿಮವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸದ್ಯ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಬಿಗುವಿನ ವಾತಾವರಣ ಮುಂದುವರೆದಿದ್ದು, ಮುಂಜಾಗ್ರತೆ ಕ್ರಮವಾಗಿ ಮೈಸೂರು ನಗರದಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಘಟನೆಯ ಹಿನ್ನೆಲೆ: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟರ್ ಕುರಿತು ನಿನ್ನೆ ರಾತ್ರಿ ಮಾಹಿತಿ ತಿಳಿದ ಅನ್ಯಕೋಮಿನ ಸಮುದಾಯದ ಸಾವಿರಾರು ಮಂದಿ ಏಕಕಾಲದಲ್ಲಿ ಉದಯಗಿರಿ ಮುಖ್ಯ ರಸ್ತೆ ತಡೆದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಒಂದು ಗುಂಪು ಉದಯಗಿರಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿತಲ್ಲದೆ, ತಪ್ಪಿತಸ್ಥನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. 

ತಕ್ಷಣ ಪೊಲೀಸರು ಸ್ಪಂದಿಸಿ ಸ್ವಯಂ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿ ಪ್ರಕಟಣೆ ಹೊರಡಿಸಿದ್ದರು. ಆದರೂ ಕೆಲವರ ಆಕ್ರೋಶ ತಣ್ಣಗಾಗಲಿಲ್ಲ. ಯುವಕರು  ಆರೋಪಿಯನ್ನು ನಮಗೆ ಒಪ್ಪಿಸಬೇಕೆಂದು ಉದಯಗಿರಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದಾಗ ಕೆಲವು ಕಿಡಿಗೇಡಿಗಳು ದಾಂಧಲೆ ನಡೆಸಿದರು.

ಪರಿಸ್ಥಿತಿ ಕೈ ಮೀರಿ ಹೋದಾಗ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದರು. ಇದಕ್ಕೆ ಪ್ರತಿಯಾಗಿ ಕೆಲ ಕಿಡಿಗೇಡಿಗಳು ಕೆಲ ವಸ್ತುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಎಸಿಪಿ ಹಾಗೂ ಇನ್ಸ್ಪೆಕ್ಟರ್ ಸೇರಿದಂತೆ 14 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಪೊಲೀಸ್ ವಾಹನಗಳು ಸೇರಿ 10ಕ್ಕೂ ಹೆಚ್ಚು ವಾಹನಗಳು ಹಾನಿಗೊಳಗಾಗಿವೆ. ಗಾಯಗೊಂಡ ಎಸಿಪಿ ಶಾಂತಮಲ್ಲಪ್ಪ ಹಾಗೂ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಸೇರಿ 14 ಮಂದಿ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಯ ಬಂಧನ: ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಲ್ಯಾಣಗಿರಿಯ ಸುರೇಶ್ ಎಂಬಾತನನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಫೇಸ್ ಬುಕ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜಾಲತಾಣದಲ್ಲಿ ಅರೇಬಿಕ್ ಭಾಷೆಯಲ್ಲಿದ್ದ ಚಿತ್ರವನ್ನು ನೋಡಿ ಆರೋಪಿ ಟೀಕಿಸಿದ್ದ ಎನ್ನಲಾಗಿದೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.

ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ನಿಂದಿಸಿ, ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಈತನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದರು.

ಆಕ್ಷೇಪಾರ್ಹ ಪೋಸ್ಟ್ ಮಾಡಿದ ವ್ಯಕ್ತಿಯನ್ನು ತಮ್ಮ ವಶಕ್ಕೆ ನೀಡಿ ನಾವು ಆತನಿಗೆ ಬುದ್ಧಿ ಕಲಿಸುತ್ತೇವೆ ಎಂದು ಒಂದು ಸಮುದಾಯದ ಜನರು ಉದಯಗಿರಿ ಪೊಲೀಸ್ ಠಾಣೆ ಮುಂದೆ ಗಲಾಟೆ ನಡೆಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಲಾಟೆ ನಡೆಸಿ ಕಲ್ಲು ತೂರಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಘಟನಾ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ಎಡಿಜಿಪಿಯವರನ್ನು ಕಳುಹಿಸಿದ್ದೇನೆ. ಅವರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಹಾಗೆಯೇ ಟಿ. ನರಸೀಪುರದಲ್ಲಿ ನಡೆದಿರುವ ಕುಂಭಮೇಳದ ಭದ್ರತೆಯನ್ನು ಅವರು ಪರಿಶೀಲಿಸಲಿದ್ದಾರೆ ಎಂದರು.

Leave a Reply