ಬಿಜೆಪಿ – ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚನೆಗೆ ತೀರ್ಮಾನ

6 months ago

ಬೆಂಗಳೂರು: ಜಿಲ್ಲಾ, ತಾಲೂಕು ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಉಭಯ ಪಕ್ಷಗಳ ನಡುವೆ ಸಮನ್ವಯ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ.

ಬಿಜೆಪಿ- ಜೆಡಿಎಸ್ ಪಕ್ಷಗಳ ಎರಡು ಸಮನ್ವಯ ಸಮಿತಿ ರಚಿಸಲು ಯೋಜಿಸಿದ್ದು, ಪಕ್ಷದ ಮುಖಂಡರ ಜೊತೆ ಚರ್ಚಿಸಿ ಸಮಿತಿಯನ್ನು ಪ್ರಕಟಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಈ ಬೇಟಿಯಲ್ಲಿ ನಾವುಗಳು ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ಮಾಡಿದ್ದೇನೆ ಎಂದರು. 

ಬಿಜೆಪಿ- ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆ ಕುರಿತು ಸಲಹೆಗಳನ್ನು ಕೇಳಿದ್ದೇನೆ. ಅದಕ್ಕೆ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ನ ಸದಸ್ಯರು ಯಾರು ಎಂಬುದನ್ನು ಚರ್ಚಿಸಿ ಒಂದು ವಾರದಲ್ಲಿ ಪಟ್ಟಿ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಗ್ರೇಟರ್ ಬೆಂಗಳೂರು ಚುನಾವಣೆಗಳು ನಡೆಯಲಿದ್ದು, ಬೆಂಗಳೂರಿಗೆ ಸೀಮಿತವಾಗಿ ಒಂದು ಸಮನ್ವಯ ಸಮಿತಿ ಮಾಡೋಣ ಹಾಗೂ ರಾಜ್ಯಕ್ಕೆ ಸಂಬಂಧಿಸಿ ಮತ್ತೊಂದು ಸಮನ್ವಯ ಸಮಿತಿ ಮಾಡುವ ಸಲಹೆಯನ್ನು ಹೆಚ್.ಡಿ ಕುಮಾರಸ್ವಾಮಿ ಅವರು ನೀಡಿದ್ದಾರೆ ಎಂದರು.

ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಹದಗೆಟ್ಟಿದೆ. ಬೆಂಗಳೂರು, ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿ ಇಲ್ಲದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರು ಮಹಾನಗರದ ಅವ್ಯವಸ್ಥೆಯನ್ನು ತಾವೇ ನೋಡುತ್ತಿದ್ದೀರಿ ಎಂದರು.

ರಾಜ್ಯ ಸರಕಾರ, ಸಚಿವರು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಮೋಹನ್ದಾದಸ್ ಪೈ, ಕಿರಣ್ ಮಜುಂದಾರ್ ಷಾ ಅವರಂಥ ಹಿರಿಯರು ಬೆಂಗಳೂರಿನ ಬಗ್ಗೆ ಮತ್ತು ರಸ್ತೆಗಳ ಕುರಿತು ಸಲಹೆ ನೀಡಿದರೆ, ಆ ಸಲಹೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಂಥ ಹಿರಿಯರನ್ನು ಸ್ವತಃ ಸಚಿವರೇ ನಿಂದಿಸುತ್ತಿದ್ದಾರೆ. ಇದು ರಾಜ್ಯ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದರು.

ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಇದೇ ರೀತಿ ಟೀಕೆ, ಸಲಹೆಗಳು ಬಂದಿದ್ದವು. ಯಡಿಯೂರಪ್ಪ ಅವರು ಮೋಹನ್ದಾ ಸ್ ಪೈ ಅವರನ್ನು ಮನೆಗೆ ಕರೆಸಿಕೊಂಡು ಟೀ ಕುಡಿಸಿ ಅವರ ಸಲಹೆಗಳನ್ನು ಪಡೆದಿದ್ದರು. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದರು ಎಂದರು.

Leave a Reply