ಚುನಾವಣೆಯಲ್ಲಿ ಕೇವಲ ಪ್ರಧಾನಿ ನರೇಂದ್ರಮೋದಿ ಹೆಸರು ಪ್ರಸ್ತಾಪಿಸಿದರೆ ಸಾಲದು: ಎಚ್.ಡಿ.ದೇವೇಗೌಡ

2 years ago

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾಡಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ಇವರಿಗೆಲ್ಲಾ ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುವ ಸಾಮರ್ಥ್ಯ ನಮಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಧಿಕಾರದ ಮದದಿಂದ ಜೆಡಿಎಸ್ ಎಲ್ಲಿದೆ ಎಂದು ಹೇಳುತ್ತಿದ್ದಾರೆ. ಅದಕ್ಕೂ ಸಾಮರ್ಥ್ಯವಿದೆ ಎಂದು ತೋರಿಸುವ ಕಾಲ ಬಂದಿದೆ. ಹೀಗಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಕಡೆಗಣಿಸದೆ ಚುನಾವಣೆಯಲ್ಲಿ ಹೋರಾಟ ಮಾಡೋಣ ಎಂದು ಕರೆನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸಬೇಕು. ಹಿಂದೆ ಆಗಿರುವ ಕಹಿ ವಿಚಾರಗಳನ್ನು ಮರೆತು ನಾವೆಲ್ಲಾ ಒಂದುಗೂಡಬೇಕು. ಚುನಾವಣೆಯಲ್ಲಿ ಕೇವಲ ಪ್ರಧಾನಿ ನರೇಂದ್ರಮೋದಿ ಹೆಸರು ಪ್ರಸ್ತಾಪಿಸಿದರೆ ಸಾಲದು, ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಬೇಕು ಎಂದರು.

ರಾಜ್ಯದ 28 ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕು. ಹಲವು ಕ್ಷೇತ್ರಗಳಲ್ಲಿ ನಮ್ಮ ಪರವಾದ ವಾತಾವರಣವಿದೆ. ಸಮಯ ಅವಕಾಶ ಕಡಿಮೆ ಇದೆ. ಕಾಂಗ್ರೆಸ್ ನಲ್ಲಿ ಸಂಪನ್ಮೂಲ ಹೆಚ್ಚಾಗಿದೆ. ಅಕ್ರಮವಾಗಿ ಸಂಪನ್ಮೂಲ ಸಂಗ್ರಹ ಮಾಡಿ ಬೇರೆ ರಾಜ್ಯಗಳಿಗೂ ಸಾಗಿಸಿದ್ದಾರೆ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಈ ಮೈತ್ರಿ ಕೂಟ ಯಶಸ್ವಿಯಾಗಿ ಮುನ್ನಡೆದರೆ ಆಡಳಿತಾರೂಢ ಕಾಂಗ್ರೆಸ್ ಸರ್ವನಾಶವಾಗಿ ಅಡ್ರೆಸ್ಗೆ ಇಲ್ಲದಂತಾಗುತ್ತದೆ ಎಂದರು.

ಯಾವ ಶಕ್ತಿಗಳು ಕೂಡ ಬಂದರೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವುದನ್ನು ತಡೆಯಲು ಸಾಧ್ಯವೇ ಇಲ್ಲ. ನಮ್ಮ ಮೈತ್ರಿ ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಕರ್ನಾಟಕದಲ್ಲಿ ಅಡ್ರೆಸ್ಗೆ ಇರುವುದಿಲ್ಲ ಎಂದರು.

ನಮ್ಮ ಮೈತ್ರಿಯನ್ನು ಜನ ಒಪ್ಪಿದ್ದಾರೆ. ನಾವು ಒಟ್ಟಾಗಿ ಹೋದರೆ ಐದು ವರ್ಷಗಳ ಕಾಲ ವಿಶ್ರಾಂತಿಯಲ್ಲಿ ಇರಬಹುದು. ಕಾಯ ವಾಚಾ ಮನಸಾ ಯಾರೇ ಅಭ್ಯರ್ಥಿ ಆದರೂ ನೀವು ಕೆಲಸ ಮಾಡಿದರೆ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲಬಹುದು ಎಂದರು.

ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರದ ಮದದಿಂದ ಮೈಮರೆತಿರುವ ಸರ್ಕಾರಕ್ಕೆ ಮುಂದೆ ಏನಾಗುತ್ತದೆ ಎಂಬುದನ್ನು ನಾನು ಈ ವೇಳೆ ಹೇಳುವುದಿಲ್ಲ ಎಂದರು.

ರಾಜ್ಯ ಬಿಜೆಪಿ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ದಾಸ್ ಅಗರ್ವಾಲ್ ಮಾತನಾಡಿ, ಕರ್ನಾಟಕ ರಾಜಕೀಯದಲ್ಲಿ ಪ್ರಾಮಾಣಿಕ ಬದಲಾವಣೆಗೆ ಈ ಮೈತ್ರಿ ನಾಂದಿ ಹಾಡಿದೆ. ರಾಜ್ಯದ ಎಲ್ಲ ಶಕ್ತಿಗಳೂ ಒಂದಾಗಿ ವಿನಾಶಕಾರಿ ಶಕ್ತಿಗಳ ನಾಶ ಮಾಡಲಿವೆ. ಎಲ್ಲ 28 ಕಡೆಯೂ ಬಿಜೆಪಿ ಜೆಡಿಎಸ್ ಗೆಲ್ಲಲಿವೆ ಎಂದರು.

ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಬೋಣಿ ಸಹ ಆಗೋದಿಲ್ಲ, ಮುನಿಸ್ವಾಮಿ ಕೋಲಾರದಲ್ಲಿ ಆಕಾಂಕ್ಷಿ ಆಗಿದ್ದರು. ಕ್ಷೇತ್ರ ಜೆಡಿಎಸ್ ಗೆ ಹೋಯ್ತು ಅಂತ ಅವರ ಆಕ್ಷೇಪಿಸಲಿಲ್ಲ. ಜೆಡಿಎಸ್ ಗೆ ಸಹಕಾರ ಕೊಡುವುದಾಗಿ ಮುನಿಸ್ವಾಮಿ ಹೇಳಿದ್ದರು. ಹಾಸನದಲ್ಲೂ ಬಿಜೆಪಿ ಕಾರ್ಯಕರ್ತರು ಜೆಡಿಎಸ್ಗೆ ಸಂಪೂರ್ಣ ಬೆಂಬಲ ಕೊಡಲಿದ್ದಾರೆ. ಇದೊಂದು ಐತಿಹಾಸಿಕ ಮೈತ್ರಿ ಶಕ್ತಿ. ಜೆಡಿಎಸ್ನವರು ನಮ್ಮ ಹೆಗಲಿಗೆ ಹೆಗಲು ಕೊಟ್ಟರೆ ದೇಶಾದ್ಯಂತ ಬದಲಾವಣೆ ತರಬಹುದು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ವಿಶ್ವಾಸದಿಂದ ಕೆಲಸ ಮಾಡಿದರೆ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲಿದೆ ಎಂದರು.

ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ಆನೆಬಲ ಬಂದಂತೆ ಆಗಿದೆ. ಮಂಡ್ಯ ಹಾಗೂ ಮೈಸೂರಲ್ಲಿ ನಾನು ಕುಮಾರಸ್ವಾಮಿ ಜಂಟಿ ಪ್ರವಾಸ ಮಾಡಿದ್ದೇವೆ. ಬಹಳಷ್ಟು ಸಲ ಹೊಂದಾಣಿಕೆ ರಾಜಕೀಯ ನಡೆದಿದೆ. ಬಿಜೆಪಿ-ಜೆಡಿಎಸ್ ಹಾಗೂ ಜೆಡಿಎಸ್ – ಕಾಂಗ್ರೆಸ್ ಸಾಕಷ್ಟು ಸಲ ಹೊಂದಾಣಿಕೆಯಾಗಿದೆ. ಈ ಸಮ್ಮಿಲನ ರಾಜ್ಯದ ಜನರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಸಮ್ಮಿಲನ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕೆಲಸ ಆಗುತ್ತದೆ. ಜೆಡಿಎಸ್-ಎನ್ಡಿಎ ಕೂಟಕ್ಕೆ ಬಂದಿರುವುದನ್ನು ನಮ್ಮ ನಾಯಕರು ಘೋಷಣೆ ಮಾಡಿ ಹಲವು ತಿಂಗಳು ಆಗಿವೆ. ರಾಜ್ಯದ ಮತದಾರರು ಮೈತ್ರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, 28 ಜಿಲ್ಲೆಗಳಲ್ಲೂ ಕೆಲಸ ನಾವು ಒಟ್ಟಾಗಿ ಕೆಲಸ ಮಾಡಬೇಕು. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಜೊತೆ ಸರ್ಕಾರ ಮಾಡಿದ್ದಾಗ ಒಳ್ಳೆಯ ಆಡಳಿತ ಕೊಟ್ಟಿದ್ದೆವು. ಕೆಲವು ಪರಿಸ್ಥಿತಿಗಳಲ್ಲಿ ಮೈತ್ರಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಆಗ ನಮ್ಮ ತಂದೆಯವರಿಗೆ ಕೆಲವರು ತಪ್ಪು ಮಾಹಿತಿ ನೀಡಿದರು ಎಂದರು.

ಕಳೆದ ಬಾರಿ ನಾವು ಮೈತ್ರಿ ಮಾಡಿಕೊಳ್ಳದೆ ಇದ್ದಲ್ಲಿ ರಾಜ್ಯದಲ್ಲಿ ಈಗ ಕಾಂಗ್ರೆಸ್ ಬರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮಲ್ಲಿದ್ದ ಒಡಕುಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಪ್ರತಿದಿನ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಮುಗಿದೆ ಹೋಯಿತು ಎಂದು ಮಾತನಾಡುತ್ತಿದ್ದಾರೆ. ಮೋದಿ ಅವರು ದೇಶದ ಭದ್ರತೆಗೆ ದುಡಿಮೆ ಸದಾಕಾಲ ನೋಡಿದ್ದೇವೆ ಎಂದರು.

ಅಮಿತ್ ಶಾ ಅವರ ಮಧ್ಯಸ್ಥಿಕೆಯಿಂದ ಈ ಮೈತ್ರಿಯಾಗಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಬಂದಿರಬಹುದು, ಅದರಿಂದಾಗಿ ತಾವು ನಿರಾಸೆ ಒಳಗಾದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಕೆಲವೊಂದು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯ ಇದ್ದಾವೆ. ಅದನ್ನು ಸರಿಪಡಿಸಿಕೊಳ್ಳಬೇಕಿದೆ ಎಂದರು.

Leave a Reply