ಭ್ರಷ್ಟಾಚಾರ ಆರೋಪ ಮುಚ್ಚಿ ಹಾಕಲು ಆರ್ ಎಸ್ ಎಸ್ ಹೆಸರು ಮುನ್ನೆಲೆಗೆ: ವಿ.ಸೋಮಣ್ಣ 

8 months ago

ಬೆಂಗಳೂರು: ತಮ್ಮ ಸರ್ಕಾರದ ಮೇಲೆ ಇರುವ ಗಂಭೀರ ಭ್ರಷ್ಟಾಚಾರದ ಆರೋಪವನ್ನು ಮುಚ್ಚಿ ಹಾಕಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರನ್ನು ಮುನ್ನೆಲೆಗೆ ತರಲು ಸಿದ್ದರಾಮಯ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಇದು, ಒಳ್ಳೆಯದಕ್ಕಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರ್ಕಾರಕ್ಕೆ ಏನು ಮಾಡುತ್ತಿದ್ದೇವೆ ಎನ್ನುವ ದಿಕ್ಕುದೆಶೆಯಿಲ್ಲ. ತಮ್ಮ ನೆಲೆಯನ್ನು ತಾನೇ ನಾಶ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದುಕೊಂಡಿದೆ. ಇದರಲ್ಲಿ ಚರ್ಚೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಎಲ್ಲರೂ ಸಂಜೆ ನಾಟಕವನ್ನು ಆಡಲು ಆರಂಭಿಸಿದರೆ, ಇವರು ಬೆಳಗ್ಗೆಯಿಂದಲೇ ಶುರು ಮಾಡಿಕೊಂಡಿದ್ದಾರೆ. ಖಜಾನೆ ಖಾಲಿ ಆಗಿದೆ, ಅಲ್ಲವೇ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸ, ಭಾರತದ ಸಾರ್ವಭೌಮತ್ವಕ್ಕೆ ಇನ್ನೊಂದು ಹೆಸರು. ಇದೊಂದು ಅತಿದೊಡ್ಡ ಸಂಸ್ಥೆ, ಇದು ಬೆಳೆಯುತ್ತಿರುವುದನ್ನು ನೋಡಲಾಗದೇ, ಸಿದ್ದರಾಮಯ್ಯ ಸರ್ಕಾರ ಹೊಸ ನಾಟಕ ಆರಂಭಿಸಿದೆ ಎಂದರು.

ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ, ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಪ್ರಯತ್ನ ಇದಾಗಿದೆ. ಸೂರ್ಯಚಂದ್ರರು ಇರುವವರೆಗೆ ಆರ್‌ಎಸ್‌ಎಸ್‌ ಕೂಡಾ ಇರುತ್ತದೆ. ಹಿಂದೂ ದೇಶ ಇರುವವರೆಗೆ ಆರ್‌ಎಸ್‌ಎಸ್‌ ಕೂಡಾ ಇರಲಿದೆ ಎನ್ನುವ ಸತ್ಯ ಅವರಿಗೂ ತಿಳಿದಿದೆ ಎಂದರು.

ಕಾಂಗ್ರೆಸ್ ಕುಟುಂಬದ ಮಕ್ಕಳು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾ ಅಭಿಮಾನಿಗಳಾಗಿ ಕೆಲಸ ಮಾಡುತ್ತಾರೆ ಎನ್ನುವುದು ಅವರಿಗೂ ತಿಳಿದಿದೆ. ಈ ಎಲ್ಲಾ ನಾಟಕಗಳನ್ನು ಬಿಟ್ಟು, ರಾಜ್ಯದ ಅಭಿವೃದ್ದಿ ಕಡೆಗೆ ಗಮನ ಕೊಡಿ ಎಂದರು.

ಸಿದ್ದರಾಮಯ್ಯನವರ ದೂರದೃಷ್ಟಿಯ ಚಿಂತನೆ ಸತ್ಯನಾಶವಾಗಿದೆ. ಇವತ್ತು ಪವಿತ್ರವಾದ ದಿನ, ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಇನ್ನು ಮುಂದೆಯಾದರೂ, ಒಳ್ಳೆಯ ಕೆಲಸಕ್ಕೆ ಕೈಹಾಕಿ. ನಿಮ್ಮ ಅಗಾಧವಾದ ರಾಜಕೀಯ ಅನುಭವವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ ಎಂದರು.

ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ, ನಿಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರವನ್ನು ತಕ್ಷಣದಿಂದಲೇ ಬಿಡಿ. ಈ ರೀತಿಯ ಕೆಲಸವನ್ನು ಮಾಡಿದರೆ, ನಿಮ್ಮ ರಾಜಕೀಯಕ್ಕೆ ಮತ್ತು ರಾಜಕಾರಣಕ್ಕೆ ಗೌರವ ಎನ್ನುವುದು ನನ್ನ ಭಾವನೆ ಎಂದರು.

Leave a Reply