ವಿಧಾನಪರಿಷತ್ ಚುನಾವಣೆ: ಮೂರೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಲಾಬಿ

2 years ago

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಭರ್ಜರಿ ರಂಗು ಬಂದಿದೆ. ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ 7 ಬಿಜೆಪಿ ಮೂರು ಮತ್ತು ಜೆಡಿಎಸ್ ನಿಂದ ಒಬ್ಬರು ವಿಧಾನಪರಿಷತ್ ಪ್ರವೇಶಿಸಬಹುದು.

 

11 ಸ್ಥಾನಗಳಿಗೆ ಆಯ್ಕೆ ಬಯಸಿ ಮೂರೂ ಪಕ್ಷಗಳಲ್ಲಿ ಭರ್ಜರಿ ಲಾಭಿ ಆರಂಭವಾಗಿದೆ. ಕಾಂಗ್ರೆಸ್ ನಲ್ಲಿ ಮಾಜಿ ಮಂತ್ರಿಗಳು ಸೇರಿದಂತೆ ಸುಮಾರು 70ರಷ್ಟು ಆಕಾಂಕ್ಷಿಗಳು ಪೈಪೋಟಿ ನಡೆಸಿದರೆ, ಬಿಜೆಪಿಯಲ್ಲಿ 20ಕ್ಕೂ ಹೆಚ್ಚು ಜನ ಲಾಭಿ ಮಾಡುತ್ತಿದ್ದಾರೆ ಜೆಡಿಎಸ್ ನಲ್ಲಿ ಮೂವರ ಹೆಸರು ಚರ್ಚೆಯಲ್ಲಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರ ಹೊರ ಬೀಳಲಿದೆ.

ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಎಲ್ಲರೂ ಹೈಕಮಾಂಡ್ ಮತ್ತು ತಮಗೆ ಆಪ್ತರಾಗಿರುವ ಪ್ರಭಾವಿ ನಾಯಕರ ಮೂಲಕ ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹೇರತೊಡಗಿದ್ದಾರೆ. ಆಕಾಂಕ್ಷಿಗಳ ಒತ್ತಡ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಿದ್ದಾರೆ.

ಮೈಸೂರಿನಲ್ಲಿ ಯಾವುದೇ ಪೂರ್ವ ನಿಗದಿತ ಕಾರ್ಯಕ್ರಮ ಇಲ್ಲದಿದ್ದರೂ ಅಲ್ಲಿಯೇ ತಂಗಿರುವ ಅವರು ಪರಿಷತ್ ಸ್ಥಾನಾಕಾಂಕ್ಷಿಗಳ ಭೇಟಿ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

ಮತ್ತೊಂದಡೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಏಳು ಸ್ಥಾನಗಳಿಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಕುರಿತು ಮಾತುಕತೆ ಮತ್ತು ಅಭಿಪ್ರಾಯ ಆಲಿಸಲು ಮುಂದಾಗಿದ್ದಾರೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಸತಿ ಸಚಿವ ಜಮೀರ್ ಅಹಮದ್ ಖಾನ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಡಿ.ಕೆ.ಶಿವಕುಮಾರ್ ರಹಸ್ಯ ಸಭೆ ನಡೆಸಿದರು.

ಕಾಂಗ್ರೆಸ್ ಗೆ ದೊರೆಯುವ ಏಳು ಸ್ಥಾನಗಳ ಪೈಕಿ ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು. ಅದರಲ್ಲೂ ಎಸ್ಸಿಯಲ್ಲಿ ಲಂಬಾಣಿ ಸಮುದಾಯಕ್ಕೆ ಅವಕಾಶ ನೀಡಬೇಕಿದೆ. ಈ ಬಾರಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು. ಈ ಮೂಲಕ ಸಾಮಾಜಿಕ ನ್ಯಾಯ ಪಾಲಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಯತೀಂದ್ರ ,ಬೋಸರಾಜು ಆಯ್ಕೆ ಸಾಧ್ಯತೆ: ಉನ್ನತ ಮೂಲಗಳ ಪ್ರಕಾರ ವಿಧಾನ ಪರಿಷತ್ ನಲ್ಲಿ ಸಭಾ ನಾಯಕರಾಗಿರುವ ಸಣ್ಣ ನೀರಾವರಿ ಸಚಿವ ಬೋಸರಾಜು ಅವರನ್ನು ಮತ್ತೊಂದು ಅವರಿಗೆ ನೇಮಕ ಮಾಡಲು ಹೈಕಮಾಂಡ್ ಉತ್ಸುಕವಾಗಿದೆ. ಅದೇ ರೀತಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಪರಿಷತ್ತಿಗೆ ಕಳುಹಿಸಲು ಒಲವು ಹೊಂದಿದೆ ಎಂದು ವರದಿಯಾಗಿದೆ.

ಜೊತೆಗೆ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಂಸದ ಕರಡಿ ಸಂಗಣ್ಣ ಅವರನ್ನು ಲಿಂಗಾಯತ ಪಂಚಮಸಾಲಿ ಕೋಟಾದಿಂದ ನೇಮಕ ಮಾಡಲು ಚಿಂತನೆ ನಡೆಸಿದ್ದು, ಇವರ ಜೊತೆಯಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ಐವಾನ್ ಡಿಸೋಜ ಅಥವಾ ಜಿ.ಎ. ಬಾವಾ ಅವರನ್ನು ಪರಿಗಣಿಸಲು ಚರ್ಚೆ ನಡೆದಿದೆ. ವಿಶ್ವಕರ್ಮ ಸಮುದಾಯದ ಕೆ.ಪಿ. ನಂಜುಂಡಿ, ಮಹಿಳಾ ಕೋಟಾದಿಂದ ಐಶ್ವರ್ಯ ಮಹದೇವ್, ಪುಷ್ಪಾ ಅಮರ್ ನಾಥ್ ಅವರ ಹೆಸರುಗಳು ಚರ್ಚೆಯಲ್ಲಿವೆ.

ಜೆಡಿಎಸ್- ಬಿಜೆಪಿ ಸಭೆ: ಇನ್ನು ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಿಂದ 6 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಕಾರ್ಯತಂತ್ರ ರೂಪಿಸಲು ನಾಳೆ ಜೆಡಿಎಸ್ ಮತ್ತು ಬಿಜೆಪಿ ಸಮನ್ವಯ ಸಮಿತಿ ಸಭೆ ಆಯೋಜಿಸಲಾಗಿದೆ.

ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಉಭಯ ಪಕ್ಷಗಳ ಪ್ರಮುಖರು ಭಾಗವಹಿಸಲಿದ್ದಾರೆ.

Leave a Reply