ಜಾತಿ ಗಣತಿ ಚರ್ಚೆಯ ಸಂದರ್ಭದಲ್ಲಿ – ಡಿಬೇಟಬಲ್ ಅಂಶಗಳು

12 months ago

ಜಾತಿ ಗಣತಿ ಚರ್ಚೆಯ ಸಂದರ್ಭದಲ್ಲಿ – ಡಿಬೇಟಬಲ್ ಅಂಶಗಳು

ಕಾಂತರಾಜ್ ವರದಿ ಕಳೆದು ಹೋಗಿದೆಯಂತೆ ! ಆ ಬಗ್ಗೆ ಸರ್ಕಾರಕ್ಕೆ ಆಯೋಗ ದೂರು ಕೊಟ್ಟಿದೆಯಂತೆ, ದೂರಿನನ್ವಯ ಕಾಂತರಾಜ್ ಕಮಿಟಿ ಸಂಗ್ರಹಿಸಿದ್ದ ಡಾಟಾ ಬಳಸಿಕೊಂಡು ಜಯಪ್ರಕಾಶ್ ಹೆಗಡೆ ಸಮಿತಿಗೆ ವರದಿ ತಯಾರಿಸಲು ಬಂದು ಹೋದ ಅಥವಾ ಸಿದ್ದರಾಮಯ್ಯ ಸರ್ಕಾರ ಸೂಚಿಸಿತ್ತಂತೆ. ಆ ವರದಿ ಇದೀಗ ಬಿಡುಗಡೆ ಆಗಿರುವುದಂತೆ. ಸೂಪರ್ ಸರ್.

**
ಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ರಾಂಪುರ ಎಂಬ ಗ್ರಾಮದ ಬಗ್ಗೆ ಅಧ್ಯಯನ ನಡೆಸಿದ್ದು ಇತಿಹಾಸ. ಅಧ್ಯಯನದ ನೋಟ್ಸ್ ಎಲ್ಲಾ ಬೆಂಕಿಗೆ ಆಹುತಿಯಾಗಿ, ಕಡೆಗೆ ಅವರು “ರಿಮೆಂಬರ್ಡ್ ವಿಲೇಜ್” ಎಂದು ಪುಸ್ತಕ ಬರೆದರು. ಆ ಪುಸ್ತಕದಲ್ಲಿ ಒರಿಜಿನಲ್ ನೋಟ್ಸ್ ನ ಅನೇಕ ಅಂಶಗಳು ಬಿಟ್ಟುಹೋಗಿರಬಹುದೆಂಬ ವಿಚಾರ ಅವರೇ ಹೇಳಿಕೊಂಡಿದ್ದ ಅಂಶ ಸಮಾಜಶಾಸ್ಟ್ರದ ವಿದ್ಯಾರ್ಥಿಯಾದ ನನಗೂ ತಿಳಿದಿದೆ. ಇರಲಿ.

**
ಈಗ ಕಾಂತರಾಜ್ ವರದಿ ಕಳುವಾಗಿದೆಯೋ, ಇಲ್ಲವೋ ಯಾರಿಗೂ ಗೊತ್ತಿಲ್ಲ. ಒಟ್ಟಾರೆ ಕಾಂತರಾಜ್ ವರದಿ ಎಂಬುದು ಸರ್ಕಾರದಲ್ಲಿಲ್ಲ. ಆದಾಗ್ಯೂ ಕಾಂತರಾಜ್ ಕಮಿಟಿ ಮಾಡಿದ್ದರೆನ್ನಲಾದ ಡಾಟಾ ಆಧರಿಸಿ ಇದೀಗ ವರದಿಯೊಂದನ್ನು ಹೆಗಡೆ ಕಮಿಟಿ ನೀಡಿದೆ. ಅದೂ ಕೂಡಾ ಸರ್ಕಾರದ ನಿರ್ದೇಶನದ ಅನ್ವಯ. ಅದೂ ಇರಲಿ.

**
ಈ ವರದಿಯ ಬಗ್ಗೆ ಜಾತಿ ಶ್ರೇಣಿಯಲ್ಲಿ ಮೇಲ್ಜಾತಿಯವರು, ಹಿಂದುಳಿದವರು ಮತ್ತು ಬ್ರಾಹ್ಮಣರು ಹೀಗೆ ಎಲ್ಲರೂ ತಕರಾರು ತೆಗೆದಿದ್ದಾರೆ. ಈ ತಕರಾರಿಗೆ ಕಾರಣವನ್ನು ಹುಡುಕುವುದು ಬಹಳ ಮುಖ್ಯ. ಕೇವಲ ಲೆಫ್ಟ್ ಐಡಿಯಾಲಿಜಿಯಿಂದಲೋ, ರೈಟ್ ಥಿಂಕಿಂಗ್ ನಿಂದಲೋ ಇದು ಆಗುವುದಿಲ್ಲ. ಬದಲಿಗೆ ಇಡೀ ವರದಿಯ ಸತ್ಯಾಸತ್ಯತೆಯನ್ನು ಬಯಲು ಮಾಡಬೇಕಿದೆ.

**
ಈ ವರದಿ ರಾಜಕೀಯ ಪ್ರೇರಿತವಾಗಿದೆ ಎನ್ನುವ ಅನುಮಾನವಿದ್ದಲ್ಲಿ, ಸುಮಾರು ೧೬೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ತಯಾರಿಸಿದ (ಆಗಿನ ಸಿದ್ದರಾಮಯ್ಯ ಸರ್ಕಾರ ನೀಡಿದ ಮೊತ್ತ) ವರದಿ ಕಳುವಾಗುತ್ತದೆ ಎಂದರೆ ಏನರ್ಥ ? ಯಾವುದೇ ಸರ್ಕಾರ ಇದ್ದಾಗ !.  ಇದಕ್ಕೆ ಹೊಣೆ ಯಾರು ? ವರದಿ ತಯಾರಿಸಿದ ಸಮಿತಿಯಾ? ಆಗ ಇದ್ದ ಸರ್ಕಾರವಾ? ನಂತರ ಬಂದ ಸರ್ಕಾರಗಳಾ? ನಂತರ ಆದ ಮುಖ್ಯಮಂತ್ರಿಗಳಾ? ಮತ್ಯಾರು?

**
ಈ ಹಿನ್ನೆಲೆಯಲ್ಲಿ ಇಡೀ ಕಾಂತರಾಜ ವರದಿಯ ಪ್ರಕ್ರಿಯೆ, ವರದಿ ತಯಾರಿ, ವರದಿ ಕಳವು. ಇವೆಲ್ಲವನ್ನೂ ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ಅನುಮಾನಗಳಿದ್ದಲ್ಲಿ ತನಿಖೆಯನ್ನೂ ಮಾಡಬೇಕು.

ಇಷ್ಟಾದ ಮೇಲೆ ಅದೇ ಹಳೇ ಡಾಟಾ ಅಂದರೆ ಕಾಂತರಾಜ್  ಸಮಿತಿ ಮಾಡಿದ್ದ ಸಮೀಕ್ಷೆಯ ಡಾಟಾ ಲಭ್ಯವಿದೆಯಾದರೆ, ಯಾವುದೋ ಕಂಪ್ಯೂಟರ್ ನಲ್ಲಿ ವರದಿಯೂ ಲಭ್ಯವಿರಬಹುದು. ಇಲ್ಲವೆಂದರೆ ಅದು ಎನ್ ಐ ಸಿ ಯ ಅಥವಾ ಸರ್ಕಾರದ ಡಾಟಾ ಮ್ಯಾನೇಜ್ಮೆಂಟ್ ನ ಲೋಪ.

ಇವೆಲ್ಲವನ್ನೂ ಒಳಗೊಂಡಂತೆ ಒಂದು ಸಮಗ್ರ ತನಿಖೆ ನಡೆಸುವುದು ಮಾನವಂತರ ಲಕ್ಷಣ ಎಂದು ಭಾವಿಸಿದ್ದೇನೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಲ್ಲಿ ವರದಿ ಕಳವಿನ ಬಗ್ಗೆ ತನಿಖೆ ಮಾಡಿಸಲಿ..( ಯಡಿಯೂರಪ್ಪ ಸರ್ಕಾರ ಕಳವು ಮಾಡಿದೆ ಎಂಬ ಬಾಲಿಷ ಆರೋಪಗಳನ್ನು ಮಾಡುವವರು ಕೂಡಾ ಸಮಗ್ರ ತನಿಖೆ ಮಾಡಿಸಲು ಆಗ್ರಹಿಸಿ).

**
ಇಷ್ಟಾದರೆ ಎಲ್ಲ ಸಮುದಾಯಗಳಿಗೂ ನ್ಯಾಯ ನೀಡಬಹುದು. ಅಷ್ಟೇ ಅಲ್ಲದೆ “ನಾನೆಷ್ಟು-ನೀನೆಷ್ಟು” ಎಂಬ ದುರಹಾಂಕಾರದ ಮಾತುಗಳನ್ನು ಜಾತಿ ಶ್ರೇಣಿಯಲ್ಲಿ ಮೇಲ್ಜಾತಿಯವರು ಮತ್ತು ಕೆಳಗಿನವರೂ ನಿಲ್ಲಿಸಲು ನೆರವಾಗಬಹುದು.

**
ಅಲ್ಲಿಂದಾಚೆಗೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು. ಇಷ್ಟವಿದ್ದಲ್ಲಿ ! ಇಲ್ಲವೇ ಇಂಥವೇ ಕಾರಣಗಳನ್ನು ಹುಡುಕಿ ಜಾತಿ ವೈಷಮ್ಯಗಳನ್ನು ಮುಂದುವರಿಸಬಹುದು…

ಓವರ್ ಟು ಎಕ್ಸ್ ಪರ್ಟ್ಸ್

– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು

Debatable points during the caste census debate

Leave a Reply