ಭಾರಿ ಮಳೆಯಿಂದಾಗಿ 61,700 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ

2 years ago

ಬೆಂಗಳೂರು: ರಾಜ್ಯದ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 61,700 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮಳೆ ಅವಾಂತರ ಕುರಿತಂತೆ ಜಿಲ್ಲಾಧಿಕಾರಿಗಳು ನೀಡಿರುವ ವರದಿ ಆಧರಿಸಿ ಕಂದಾಯ ಇಲಾಖೆ ಆನೆಯ ಪ್ರಾಥಮಿಕ ಅಂದಾಜು ವರದಿಯನ್ನು ಸಿದ್ಧಪಡಿಸಿದೆ.

ಪ್ರಸ್ತುತ ಸಾಲಿನಲ್ಲಿ ಮಳೆಗಾಲ ಆರಂಭಗೊಂಡ ನಂತರ ಪ್ರವಾಹ ಮತ್ತು ಸಿಡಿಲು ಬಡಿದು ಈ ವರ್ಷ ಇಲ್ಲಿಯವರೆಗೂ 58 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು ಹತ್ತು ಸಾವಿರ ಮನೆಗಳು ಪೂರ್ಣ ಪ್ರಮಾಣದಲ್ಲಿ ನಾಶವಾಗಿವೆ ಎಂದು ವರದಿ ನೀಡಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ಜೂನ್‌ ತಿಂಗಳಿನಿಂದ ಜುಲೈ 10ರ ವರೆಗೆ ಮಳೆ ಕೊರತೆಯಾಗಿತ್ತು. ಜುಲೈ 10 ರ ನಂತರ ಎರಡು ತಿಂಗಳಿಗಾಗುವಷ್ಟು ಮಳೆ 20 ದಿನದಲ್ಲಿ ಸುರಿದಿದೆ ಎಂದು ವಿವರಿಸಿದೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಲೆನಾಡು ಪ್ರದೇಶದಲ್ಲಿ ಬೆಳೆ ಹಾನಿ ಜೊತೆಗೆ ಗುಡ್ಡ ಕುಸಿತ ಉಂಟಾಗಿದೆ. ಹಾನಿಗೆ ಸಂಬಂಧಿಸಿದಂತೆ ತಕ್ಷಣ ಪರಿಹಾರ ನೀಡಲು ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನೂ ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದ್ದು, ಹಾನಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ಹವಾಮಾನ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಪರಿಸರದ ವಿಷಯದಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಇಷ್ಟ ಬಂದ ಹಾಗೇ ಗುಡ್ಡ ಕಡಿದು ರಸ್ತೆ ನಿರ್ಮಾಣ ಮಾಡುವುದರಿಂದ ಗುಡ್ಡ ಕುಸಿತದಂತಹ ಅವಘಡಗಳನ್ನು ಕಾಣುತ್ತಿದ್ದೇವೆ ಎಂದರು.

ಗುಡ್ಡ ಕುಸಿತದಂತಹ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರದ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದಿಂದ ರಾಜ್ಯದಲ್ಲಿ ಗುಡ್ಡ ಕುಸಿತ ಸಾಧ್ಯತೆ ಹೆಚ್ಚು ಇರುವ ಕಡೆ ಈಗಾಗಲೇ ವೈಜ್ಞಾನಿಕ ಸರ್ವೆ ಮಾಡಿಸಿದ್ದು, ಅದರ ವರದಿ ಆಧಾರದ ಮೇಲೆ ಮಲೆನಾಡು ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ ಎಂದು ಹೇಳಿದರು.

ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಯಾವ ಜನವಸತಿ ಪ್ರದೇಶಗಳಲ್ಲಿ ಗುಡ್ಡ ಕುಸಿತದಿಂದ ತೊಂದರೆಯಾಗುವುದನ್ನು ಗುರುತಿಸಿ ವರದಿ ಕೊಡಲು ತಿಳಿಸಿದ್ದು, ಇನ್ನು 10-15 ದಿನಗಳಲ್ಲಿ ವರದಿ ತರಿಸಿಕೊಂಡು ಈ ವರ್ಷ 100 ಕೋಟಿ, ಮುಂದಿನ ವರ್ಷ 200 ಕೋಟಿ ಸೇರಿದಂತೆ ಒಟ್ಟು 300 ಕೋಟಿ ಮೊತ್ತದ ಗುಡ್ಡ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿದ್ದು, ಈ ಅನುದಾನದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಹಾಗೂ ಅಕ್ಕಪಕ್ಕದ ಕರಾವಳಿ ಜಿಲ್ಲೆಗಳ ಗುಡ್ಡ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಅತಿವೃಷ್ಟಿಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲು ತಿಳಿಸಲಾಗಿದೆ. ಗುಡ್ಡ ಕುಸಿತದಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಸಾಧ್ಯವಿಲ್ಲ. ಅವುಗಳ ಮರು ನಿರ್ಮಾಣವಾಗಬೇಕಾಗಿದೆ. ಇಂಥ ರಸ್ತೆಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Leave a Reply