75 ತಾಲೂಕುಗಳಲ್ಲಿ ಬೆಳೆ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಕೃಷ್ಣ ಬೈರೇಗೌಡ

3 years ago

#KrishnaByreGowda #instructed #officials #conduct #crop #survey

ಮುಂಗಾರು ಋತುಮಾನ ಪರಿಸ್ಥಿತಿ ಕುರಿತು ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ ಮಾಹೆಯಲ್ಲಿ ರಾಜ್ಯಾದ್ಯಂತ ಅನೇಕ ಭಾಗಗಳಲ್ಲಿ ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್21 ರವರೆಗೆ 487 ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆ (635 ಮಿ.ಮೀ)ಗೆ ಹೋಲಿಸಿದಾಗ ಶೇ.23 ರಷ್ಟು ಮಳೆ ಕೊರತೆಯಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ತಮ್ಮ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಪರಿಸ್ಥಿತಿ ಪರಾಮರ್ಶಿಸಲು ಸಚಿವ ಸಂಪುಟ ಉಪಸಮಿತಿ ಸಭೆಯ ನಂತರ ಮಾಹಿತಿ ನೀಡಿದ ಅವರು, ಮುಂಗಾರು ಅವಧಿಗೆ ಒಟ್ಟು 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ದಿನಾಂಕ:04-08-2023 ರವರೆಗೆ 51.87 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಇದೇ ಅವಧಿಯ ವಾಡಿಕೆ ಬಿತ್ತನೆಗೆ (60.26 ಲಕ್ಷ ಹೆ) ಹೋಲಿಸಿದಾಗ ಶೇ.89 ರಷ್ಟು ಬಿತ್ತನೆಯಾಗಿದೆ. ಜುಲೈ ತಿಂಗಳಲ್ಲಿ ಬಿತ್ತನೆಯಾದ ಕೆಲವು ಬೆಳೆಗಳು ಆಗಸ್ಟ್ ತಿಂಗಳ ಮಳೆ ಹಾಗೂ ತೇವಾಂಶ ಕೊರತೆ ಅನುಭವಿಸುತ್ತಿವೆ. ಮಳೆ ಕೊರತೆ ಮುಂದುವರೆದ ಪಕ್ಷದಲ್ಲಿ ಬೆಳೆಗಳು ಒಣಗುವ ಸಾಧ್ಯತೆ ಇದೆ ಎಂದು ಹೇಳಿದರು.

1.82 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಬಿತ್ತನೆಯಾಗಿದ್ದು, ಇದೇ ಅವಧಿಯ ವಾಡಿಕೆ ಬಿತ್ತನೆ (2.15 ಲಕ್ಷ ಹೆಕ್ಟೇರ್) ಗೆ ಹೋಲಿಸಿದ್ದಲ್ಲಿ ಶೇ.65 ರಷ್ಟು ಬಿತ್ತನೆಯಾಗಿದೆ. ಕೆಲವೆಡೆ ಮಳೆ ಕೊರತೆಯಿಂದ ಈರಳ್ಳಿ ಬೆಳೆ ತೇವಾಂಶ ಕೊರತೆ ಅನುಭವಿಸುತ್ತಿವೆ ಎಂದು ಹೇಳಿದರು.

ರಾಜ್ಯದ 14 ಪ್ರಮುಖ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ 896 ಟಿಎಂಸಿ ಗಳಾಗಿದ್ದು, ಪ್ರಸ್ತುತ ಅವಧಿಯಲ್ಲಿ 618 ಟಿಎಂಸಿ ನೀರು ಸಂಗ್ರಹವಾಗಿದೆ. ಇದು ಒಟ್ಟು ಸಂಗ್ರಹಣದ ಶೇ.69 ರಷ್ಟಿರುತ್ತದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ 796 ಟಿಎಂಸಿ ನೀರು ಸಂಗ್ರಹವಾಗಿತ್ತು. ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಒಟ್ಟು ಸಂಗ್ರಹಣಾ 114 ಟಿಎಂಸಿ ಯಾಗಿದ್ದು, ಇಲ್ಲಿಯವರೆಗೆ 80 ಟಿಎಂಸಿ ನೀರು ಸಂಗ್ರಹಣವಾಗಿದೆ. ರಾಜ್ಯದ ಕೃಷ್ಣ ಜಲಾನಯನ ಪ್ರದೇಶದಲ್ಲಿ 6 ಜಲಾಶಯಗಳಿದ್ದು, ಅವುಗಳ ಒಟ್ಟು ಸಾಮರ್ಥ್ಯ 422 ಟಿಎಂಸಿಗಳಾಗಿದ್ದು, ಇಲ್ಲಿಯವರೆಗೆ 348 ಟಿಎಂಸಿ ನೀರು ಸಂಗ್ರಹಣವಾಗಿದೆ. ರಾಜ್ಯದ ವಿದ್ಯುತ್ಚ್ಚಕ್ತಿ ಉತ್ಪಾದನಾ ಜಲಾಶಯಗಳಾದ ಲಿಂಗನಮಕ್ಕಿ, ಸೂಫ ಮತ್ತು ವರಾಯಿ ಜಲಾಶಯಗಳ ಒಟ್ಟು ಸಾಮರ್ಥ್ಯ 328 ಟಿಎಂಸಿ ಯಾಗಿದ್ದು, ಇಲ್ಲಿಯವರೆಗೂ ಕೇವಲ 165 ಟಿಎಂಸಿ ನೀರು ಶೇಖರಣೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 115 ಲಕ್ಷ ದನಕರುಗಳು ಹಾಗೂ 155 ಲಕ್ಷ ಕುರಿ, ಮೇಕೆಗಳಿದ್ದು, ಸದ್ಯಕ್ಕೆ 150 ಲಕ್ಷ ಟನ್ ಮೇವು ಲಭ್ಯವಿದ್ದು, 28 ವಾರಗಳ ಬಳಕೆಗೆ ಸಾಕಾಗುತ್ತದೆ. ಆದರೂ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಇಲಾಖೆಯ ಯೋಜನೆಗಳ ಮೂಲಕ ರೈತರಿಗೆ ಮೇವಿನ ಬೀಜ ವಿತರಿಸಿ, ಮೇವು ಬೆಳೆಸಲು, ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಚರ್ಚಿಸುತ್ತಾ, ಜಿಲ್ಲಾಧಿಕಾರಿಗಳ ಮಾಹಿತಿಯಂತೆ ಒಟ್ಟು 18 ಗ್ರಾಮಗಳಿಗೆ 24 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಹಾಗೂ 147 ಗ್ರಾಮಗಳಲ್ಲಿ 161 ಬಾಡಿಗೆ ಆಧಾರದ ಮೇಲೆ ಪಡೆದಿರುವ ಬೋರ್ವೆಲ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ರಾಜ್ಯದ 5 ನಗರ ಪ್ರದೇಶಗಳ 26 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು 11 ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಳೆ ಕೊರತೆ ಹಾಗೂ ಕೃಷಿ ಸಂಬಂಧಿತ ನಿಖರ ಅಂಕಿಅಂಶಗಳ ಸಲುವಾಗಿ 75 ತಾಲೂಕುಗಳಲ್ಲಿ ಬೆಳೆ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಬರ ಘೋಷಣೆ ಕುರಿತು ಚರ್ಚೆ:

  • ಬರಘೋಷಣೆಯನ್ನು ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ನೀಡಿರುವ ಮಾರ್ಗಸೂಚಿಯನ್ವಯ ಘೋಷಿಸಬೇಕಾಗುತ್ತದೆ.
  • ಬರಘೋಷಣೆಯು ಮಳೆ ಕೊರತೆ, ಶುಷ್ಕ ವಾತಾವರಣ (ಒಣ ಹವೆ), ಬಿತ್ತನೆಯಾದ ಪ್ರದೇಶ, ತೇವಾಂಶ ಕೊರತೆ, ಬೆಳೆಗಳ ಆರೋಗ್ಯ, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟವನ್ನು ಅವಲೋಕಿಸಿ ಕೈಗೊಳ್ಳಲಾಗುತ್ತದೆ.
  • ಈ ಎಲ್ಲಾ ಅಂಶಗಳ ಮೇಲೆ ಬರಕ್ಕೆ ತುತ್ತಾದ ತಾಲ್ಲೂಕುಗಳೆಂದು ಗುರುತಿಸಿದ ನಂತರ ಅಂತಿಮವಾಗಿ ಬರ ವರ್ಗೀಕರಣವು ಬೆಳೆ ಹಾನಿಯ ಪ್ರಮಾಣದ ಮೇಲೆ ಅವಲಂಬಿಸಿದೆ.
  • ಪ್ರಸ್ತುತ ಮೇಲೆ ತಿಳಿಸಿರುವ ಅಂಶಗಳನ್ನು ಪರಿಶೀಲಿಸಿ ಬರಕ್ಕೆ ತುತ್ತಾಗಬಹುದಾದ ತಾಲ್ಲೂಕುಗಳನ್ನು ಗುರುತಿಸಿದ್ದು, ಈ ತಾಲ್ಲೂಕುಗಳಲ್ಲಿ ಬೆಳೆ ಹಾನಿ ಸಮೀಕ್ಷೆಯ ನಂತರ ಬೆಳೆಹಾನಿಯು ಶೇ.50ಕ್ಕೂ ಅಧಿಕವಾಗಿದ್ದಲ್ಲಿ ಬರ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗುವುದು.

ಕ್ಯಾಬಿನೆಟ್ ಉಪ ಸಮಿತಿ ಚರ್ಚೆಯ ನಂತರ ಬರ ಘೋಷಣೆ ಮಾಡಲು ನಿಯಮಾವಳಿಗಳ ಪ್ರಕಾರ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಬೇಕಾಗಿರುತ್ತದೆ. ಮಾನದಂಡಗಳ ಪ್ರಕಾರ ಅವಶ್ಯಕ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆಯನ್ನು ಬಂದು ವಾರದಲ್ಲಿ ಮಾಡಿ, ವರದಿ ಸಲ್ಲಿಸಲು ಸೂಚಿಸಲಾಯಿತು. ಈ ಮಾಹಿತಿ ಪಡೆದು ಬರ ಘೋಷಣೆ ಮಾಡಲು ತೀರ್ಮಾನಿಸಲಾಯಿತು.

Leave a Reply