ಬೆಳಗಾವಿ: ಅವಧಿ ಪೂರ್ಣಗೊಂಡಿರುವ ಔಷಧಿಗಳ ಸೇವನೆಯಿಂದ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷಗಳು ಒಕ್ಕೊರಲ ಬೇಡಿಕೆ ಮಂಡಿಸಿದವು. ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಆರೋಗ್ಯ ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಪಕ್ಷ ಆಗ್ರಹಿಸಿದವು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಬಾಣಂತಿಯರ ಸಾವಿನ ಬಗ್ಗೆ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಿದೆ. ಇದರ ಜತೆಗೆ ಚಿತ್ರದುರ್ಗ, ರಾಯಚೂರು, ಬೆಳಗಾವಿ, ಪಾವಗಡ ಹಲವೆಡೆ ಬಾಣಂತಿಯರು ಸತ್ತಿದ್ದಾರೆ. ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸುವ ಘಟನೆ ಇದಾಗಿದೆ ಎಂದರು.
ಇದಕ್ಕೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಆರೋಗ್ಯಮಂತ್ರಿಯ ಧೋರಣೆಯಿಂದಾಗಿ ಇಡೀ ಆರೋಗ್ಯ ಇಲಾಖೆ ರೋಗಪೀಡಿತವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಔಷಧಿಗಳಿಲ್ಲ. ಅವಧಿ ಮೀರಿದ ಔಷಧಿಗಳನ್ನು ನೀಡಲಾಗುತ್ತಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಬಾಣಂತಿಯರು ಬಲಿಯಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದರು.
ಬಾಣಂತಿಯರ ಸಾವಿನ ಬಗ್ಗೆ ಆರೋಗ್ಯ ಸಚಿವರು ನಿರ್ಲಕ್ಷ್ಯ ತೋರಿದ್ದಾರೆ. ಸಾವಾದ ಆರು ದಿನದ ನಂತರ ಬಳ್ಳಾರಿಗೆ ಭೇಟಿ ನೀಡಿದ್ದಾರೆ. ನಾನು ಅವರಿಗಿಂತ ಮೊದಲು ಘಟನೆಯಾದ 3 ದಿನದಲ್ಲೇ ಭೇಟಿ ನೀಡಿದ್ದೆ. ಈ ಘಟನೆಯಲ್ಲಿ ವೈದ್ಯರು ನಮ್ಮದೇನು ತಪ್ಪಿಲ್ಲ. ಐವಿಫ್ಲ್ಯೂಯಿಡ್ ಔಷಧಿಯ ತಪ್ಪು ಎಂದರು.
ಈಗ ವರದಿಯಲ್ಲಿ ಬೇರೆಬೇರೆ ರೀತಿ ಇದೆ. ಈ ಹಿಂದೆ ಇಷ್ಟು ಸಾವಾಗಿತ್ತು. ಈಗ ಇಷ್ಟು ಸಾವಾಗಿದೆ ಎಂದೆಲ್ಲಾ ಬಾಣಂತಿಯರ ಸಾವನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಬಾಣಂತಿಯರ ಬದುಕಿಗೆ ಗ್ಯಾರಂಟಿ ಕೊಡಿ. ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆ ನಡೆಸಿ ಎಂದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತರು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಕಳಪೆ ಔಷಧಿ, ಅವಧಿ ಮೀರಿದ ಔಷಧಿಗಳ ವಿಲೇವಾರಿ ಮಾಡದಿರುವುದು, ಎಕ್ಸ್ರೇ ಯಂತ್ರ ಕೆಟ್ಟಿರುವುದು, ಇಸಿಜಿ ಯಂತ್ರ ಕೆಟ್ಟಿರುವುದು ಎಲ್ಲವೂ ಲೋಕಾಯುಕ್ತರು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ಬಯಲಾಗಿದೆ. ಬೆಂಗಳೂರಿನ ಆಸ್ಪತ್ರೆಯ ಸ್ಥಿತಿಯೇ ಹೀಗಾದರೆ ಇನ್ನು ಬೇರೆ ಆಸ್ಪತ್ರೆಗಳ ಗತಿಯೇನು ಎಂದು ಪ್ರಶ್ನಿಸಿದರು.
ಬಾಣಂತಿಯರ ಸಾವಿಗೆ ಕಾರಣವಾದ ಔಷಧಿಯನ್ನು ಇಲಾಖೆ ಬಳಸಬಾರದು ಎಂದು ಕಳೆದ ಮೇ ತಿಂಗಳಲ್ಲೇ ಸುತ್ತೋಲೆ ಹೊರಡಿಸಿದೆ. ಇಷ್ಟಾದರೂ ಔಷಧ ಪೂರೈಸಿದ ಪಶ್ಚಿಮ ಬಂಗಾಳದ ಕಂಪೆನಿ ನ್ಯಾಯಾಲಯದಲ್ಲಿ ತಡೆ ತಂದಿದೆ. ನೀವು ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಿಲ್ಲ ಏಕೆ, ಜನರ ಪ್ರಾಣದ ವಿಚಾರದಲ್ಲಿ ಈ ರೀತಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದರು.
ಈ ವೇಳೆ ಮಾತನಾಡಿದ ಶಾಸಕ ಅಶ್ವತ್ಥನಾರಾಯಣ ಹೇಳಿದ ಮಾತು ಆಡಳಿತ ಮತ್ತು ವಿಪಕ್ಷದ ಸದಸ್ಯರ ನಡುವೆ ವಾಕ್ಸಮರ ಮತ್ತು ಕಾವೇರಿದ ಚರ್ಚೆಗೆ ಗ್ರಾಸವಾಯಿತು. ಬಾಣಂತಿಯರ ಸಾವಿಗೆ ಈ ಸರ್ಕಾರ ಕಾರಣ. ಈ ಸರ್ಕಾರ ಕೊಲೆಗಡುಕ ಸರ್ಕಾರ. ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ಆರೋಗ್ಯ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ಅಶ್ವತ್ಥ್ ನಾರಾಯಣ ಒತ್ತಾಯಿಸಿದರು.
ಬಾಣಂತಿಯರ ಸಾವಿಗೆ ಈ ಸರ್ಕಾರವೇ ಕಾರಣ. ಸರ್ಕಾರ ನೇರವಾಗಿ ಬಾಣಂತಿಯರನ್ನು ಕೊಲೆ ಮಾಡಿದೆ ಎಂದು ಏರಿದ ಧ್ವನಿಯಲ್ಲಿ ಹೇಳಿ, ಆರೋಗ್ಯ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಬಾಣಂತಿಯರ ಸಾವನ್ನು ತಡೆಯುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೊಂದು ಜನವಿರೋಧಿ ಸರ್ಕಾರ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಬಿಜೆಪಿ ಸದಸ್ಯರು, ಬಾಣಂತಿಯರ ಸಾವಿಗೆ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರೆ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, ಕೊರೊನಾ ಸಂದರ್ಭದಲ್ಲಿ ಆದ ಸಾವಿಗೆ ಯಾರು ಕಾರಣ ಎಂದು ಪ್ರಶ್ನಿಸಿ ಪರಸ್ಪರ ಮಾತಿನ ಚಕಮಕಿ ನಡೆಸಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಬಾಣಂತಿಯರ ಸಾವಿನ ಬಗ್ಗೆ ಸಚಿವರು ನಂತರ ಉತ್ತರ ಕೊಡುತ್ತಾರೆ. ಅದಕ್ಕೂ ಮೊದಲು ಉತ್ತರ ಕರ್ನಾಟಕ ಭಾಗದ ಚರ್ಚೆಯನ್ನು ಮುಂದುವರೆಸೋಣ ಎಂದು ಹೇಳಿ ಗದ್ದಲಗಳಿಗೆ ತೆರೆ ಎಳೆದರು.




