ರಾಜ್ಯ ಸರ್ಕಾರ ಡ್ರಗ್ಸ್ ಮಾಫಿಯಾಗೆ ಬಲಿಯಾಗಿದೆ: ಆರ್ ಅಶೋಕ್

1 year ago

ಬೆಳಗಾವಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿ ಚಿಕಿತ್ಸೆಗೆ ದಾಖಲಾಗುವ ಬಾಣಂತಿಯರು ಸೇರಿದಂತೆ ಎಲ್ಲ ರೋಗಿಗಳಿಗೆ ಬದುಕುವ ಗ್ಯಾರಂಟಿ ಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ವಿಷಯದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಡ್ರಗ್ಸ್ ಮಾಫಿಯಾಗೆ ಬಲಿಯಾಗಿದೆ ಎಂದು ಆಪಾದಿಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುತ್ತಿರುವ ಔಷಧಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಔಷಧಿ ಗುಣಮಟ್ಟ ಪರೀಕ್ಷಿಸುವ ವೈದ್ಯಕೀಯ ಸರಬರಾಜು ನಿಗಮದಲ್ಲಿನ ಕಾರ್ಯ ವಿಧಾನದ ಬಗ್ಗೆ ಪ್ರಶ್ನೆ ಮೂಡಿದೆ. ಬಡವರು, ಸಾರ್ವಜನಿಕರು ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಅವಲಂಬಿಸುವ ಅನಿವಾರ್ಯತೆ ಇದೆ. 6 ತಿಂಗಳ ಹಿಂದೆಯೇ ಬಳಸಲಾಗದ ಔಷಧಿಗಳನ್ನು ಬಳಸಲಾಗುತ್ತಿದೆ ಎಂದರು.

ಡ್ರಗ್ ಮಾಫಿಯಾ ಹಿಡಿತದಲ್ಲಿ ಸರ್ಕಾರವಿದೆ. ಅವಧಿ ಮುಗಿದ ಔಷಧಿ ಸೇವಿಸುವ ಪರಿಸ್ಥಿತಿ ಇದೆ. ನೂರಾರು ಜನ ಸಾಯುತ್ತಿದ್ದಾರೆ. ಬಳ್ಳಾರಿ, ಬೆಳಗಾವಿಯಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ. ಬಾಣಂತಿಯರ ಸಾವು ತಪ್ಪಿಸಿ ಬದುಕುವಂಥ ಗ್ಯಾರಂಟಿ ನೀಡಿ. ಬಹಳಷ್ಟು ಮಕ್ಕಳು ಕೂಡ ಮೃತಪಟ್ಟಿದ್ದಾರೆ. ಬಾಣಂತಿಯರ ಸಾವಿಗೆ ನ್ಯಾಯ ಬೇಕಲ್ಲವೆ ಎಂದರು.

ಬೆಂಗಳೂರಿನ ಜಯನಗರ ಕ್ಷೇತ್ರದ ಕ್ಯಾನ್ಸರ್ ಪೀಡಿತ ರೋಗಿಗಳು ತಾವೇ ಔಷಧಿ ತೆಗೆದುಕೊಳ್ಳುವ, ಚುಚ್ಚುಮದ್ದು ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಇವರ ವಾದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ಆರೋಗ್ಯ ಸೇವೆಯನ್ನು ಸರ್ಕಾರ ಕಡೆಗಣಿಸಿದೆ. ಜನರಿಗೆ ಆರೋಗ್ಯ ಗ್ಯಾರಂಟಿಯೂ ಬೇಕು ಎಂದು ಒತ್ತಾಯಿಸಿದರು. ಇತರ ಬಿಜೆಪಿ ಶಾಸಕರು ದನಿಗೂಡಿಸಿ ಮಾತನಾಡಿದರು.

Leave a Reply