ಬೆಳಗಾವಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಅವಧಿ ಮೀರಿದ ಔಷಧಿ ಪೂರೈಕೆ ಮತ್ತು ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಪ್ರಕಟಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣ ಕುರಿತು ನಿಯಮ 69ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಾಣಂತಿಯರ ಸಾವಿಗೆ ಕಾರಣರಾದವರ ಮತ್ತು ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ನಿಯಂತ್ರಣ ತರಲು ನೀತಿಯನ್ನು ಜಾರಿಗೆ ತರುತ್ತೇವೆ ಎಂದರು.
ಭಾರತೀಯ ಫಾರ್ಮಸಿ ಕಂಪನಿಗಳಿಗೆ ಒಳ್ಳೆಯ ಹೆಸರಿದೆ. ವಿಶ್ವದಾದ್ಯಂತ ಸರಬರಾಜು ಮಾಡುತ್ತಿವೆ. ಅದೇ ರೀತಿ ಔಷಧೀಯ ಕಂಪನಿಗಳ ಲಾಬಿಯೂ ದೊಡ್ಡದಿದೆ. ಕೆಲವೊಂದು ತಪ್ಪುಗಳಾದಾಗ ಮುಚ್ಚಿಹಾಕಲಾಗುತ್ತದೆ. ಆದರೆ ನಾವು ಈ ವಿಷಯದಲ್ಲಿ ಮುಕ್ತರಾಗಿದ್ದೇವೆ. ಯಾವುದೇ ರೀತಿಯ ಒತ್ತಡಗಳಿಗೆ ಮಣಿಯುವುದಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ತೀರ್ಮಾನಿಸಲಾಗಿದೆ. ಈ ಸಂಬಂಧ ನ್ಯಾಯಾಂಗ ತನಿಖೆಗೆ ವಹಿಸಲು ಮುಖ್ಯಮಂತ್ರಿಯವರನ್ನು ಒಪ್ಪಿಸಲಾಗುವುದು ಎಂದರು.
ಬಾಣಂತಿಯರ ಸಾವಿನಿಂದ ನಮಗೂ ನೋವಾಗಿದೆ. ಕಳಪೆ ಔಷಧಿ ಪೂರೈಸಿರುವುದು ಘೋರ ಅನ್ಯಾಯ. ಎಲ್ಲರಿಗೂ ಒಂದೇ ಗುಣಮಟ್ಟದ ಔಷಧಿ ಸರಬರಾಜು ಮಾಡಬೇಕು. ಬೇರೆ ಕಡೆ ಒಂದು ರೀತಿಯ ಔಷಧಿ, ನಮಗೇ ಒಂದು ರೀತಿಯ ಔಷಧಿ ಪೂರೈಸಿದರೆ ಹೇಗೆ? ಅವರ ಲಾಬಿ ದೊಡ್ಡದು. ಇದುವರೆಗೂ ಇಂತಹ ಪ್ರಕರಣಗಳಲ್ಲಿ ಯಾವುದೇ ಕಠಿಣ ಕ್ರಮಗಳಾಗಿಲ್ಲ ಎಂದರು.
ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾಗಿದ್ದ ಐವಿ ದ್ರಾವಣವನ್ನು ಐದು ಬಾರಿ ಪರೀಕ್ಷೆಗೆ ಒಳಪಡಿಸಿದಾಗ ಸರಿ ಎಂದು ಬಂದಿದೆ. ಆದರೆ ಆರನೇ ಬಾರಿ ಪರೀಕ್ಷೆಗೊಳಪಡಿಸಿದಾಗ ಕಳಪೆಯಾಗಿದೆ. ಈ ರೀತಿಯಾದರೆ ಎನ್ಎಬಿಎಲ್ ಮೇಲೆ ಅವಲಂಬನೆ ಮಾಡಿದರೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಇಲ್ಲಿ ಗುಣಮಟ್ಟ ಕಳಪೆ ಎಂದು ಕಂಡುಬಂದ ಔಷಧಿಯನ್ನು ಸಿಡಿಎಲ್ ನವರು ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ವರದಿ ನೀಡಿದ್ದಾರೆ. ಆದರೂ ನಾವು ಈ ಔಷಧಿಯನ್ನು ಬಿಡುಗಡೆ ಮಾಡಲಿಲ್ಲ. ಈ ಔಷಧವಲ್ಲದೆ 192 ಬ್ಯಾಚ್ ಕೂಡ ಬಿಡುಗಡೆ ಮಾಡಲಿಲ್ಲ. ಮಾರ್ಚ್ ತಿಂಗಳಲ್ಲೇ ಇದರ ಪರೀಕ್ಷೆ ನಡೆಸಲಾಗಿ ದೋಷ ಕಂಡುಬಂದಿತ್ತು. ಆದರೆ ಜೂನ್ ನಂತರ ಬೇಡಿಕೆ ಹೆಚ್ಚಾಯಿತು. ಗುಣಮಟ್ಟ ಇರುವ ಔಷಧಿಯನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಅಕ್ಟೋಬರ್ ವರೆಗೂ ಯಾವುದೇ ತೊಂದರೆ ಆಗಿರಲಿಲ್ಲ. ಬಳ್ಳಾರಿಯಲ್ಲಿ ಸಮಸ್ಯೆಯಾದಾಗ ಮತ್ತೆ ಪರೀಕ್ಷೆ ಮಾಡಿದಾಗ ಈ ವಿಚಾರ ಕಂಡುಬಂದಿತ್ತು ಎಂದರು.
ಬಳ್ಳಾರಿಯ ಆಸ್ಪತ್ರೆಯಲ್ಲಿ ನವೆಂಬರ್ ನಲ್ಲಿ 34 ಸಿಜೇರಿಯನ್ ನಡೆದಿದ್ದವು. ಅವುಗಳಲ್ಲಿ 7 ಬಾಣಂತಿಯರಿಗೆ ಸಮಸ್ಯೆಯಾಗಿ ಐವರು ಮೃತಪಟ್ಟು, ಇಬ್ಬರು ಬದುಕುಳಿದಿದ್ದಾರೆ. ಈ ವಿಚಾರ ಗೊತ್ತಾದ ನಂತರ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ ತಂಡದಿಂದ ಪರಿಶೀಲನೆ ಮಾಡಿಸಿ ವರದಿ ಪಡೆಯಲಾಗಿದೆ. ವೈದ್ಯರು ಸರಿಯಾಗಿ ಸೇವೆ ಮಾಡಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಔಷಧಿ ದೋಷ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.
ಈ ಪ್ರಕರಣ ಇಲ್ಲಿಗೇ ಮುಕ್ತಾಯವಾಗಬಾರದು ಎಂಬ ಕಾರಣಕ್ಕೆ ಸುದೀರ್ಘ ವಿವರಗಳನ್ನು ಒಳಗೊಂಡ ಪತ್ರವನ್ನು ಡ್ರಗ್ ಕಂಟ್ರೋಲರ್ ಗೆ ಬರೆದಿದ್ದೇವೆ. ಇಂತಹ ಪ್ರಕರಣಗಳಲ್ಲಿ ಔಷಧ ನಿಯಂತ್ರಕರು ಕ್ರಮ ಕೈಗೊಳ್ಳಬೇಕಿದೆ ಎಂದರು.
ಒಂದು ವೇಳೆ ನಮ್ಮಲ್ಲಿ ಮತ್ತು ನನ್ನಿಂದ ವೈಫಲ್ಯವಾಗಿದ್ದರೂ ಕ್ರಮವಾಗಲಿ. ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಪ್ರಾಸಿಕ್ಯೂಷನ್ ಮಾಡುತ್ತಿದ್ದೇವೆ. ರಾಜ್ಯದ ಇತರೆಡೆ ಸಂಭವಿಸಿರುವ ಸಾವಿನ ಬಗ್ಗೆಯೂ ಮೆಡಿಕಲ್ ಆಡಿಟ್ ಮಾಡಿಸಲಾಗುತ್ತದೆ. ಈ ಪ್ರಕರಣವನ್ನು ಇಲ್ಲಿಗೇ ಕೈಬಿಡದೇ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದರು.
ಹಿಮಾಚಲ ಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಹೆಚ್ಚು ಔಷಧೀಯ ತಯಾರಿಕಾ ಕಂಪನಿಗಳಿವೆ. ಕಳಪೆ ಔಷಧದಿಂದ ಔಷಧ ಪಡೆದ ವ್ಯಕ್ತಿ ಮೃತಪಟ್ಟರೆ ಅಂತಹ ಕಂಪನಿಗೆ ಒಂದು ದಿನದ ಶಿಕ್ಷೆ ಮಾತ್ರ ನೀಡಲಾಗುತ್ತದೆ. ಇನ್ನೂ ಹೆಚ್ಚಿನ ಶಿಕ್ಷೆ ನೀಡಬೇಕು. ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಅವರಿಗೆ ಕಳಪೆ ಔಷಧಿ ಪೂರೈಸಿದವರನ್ನು ಸುಮ್ಮನೆ ಬಿಡಲಾಗದು ಹೀಗಾಗಿ ನ್ಯಾಯಾಂಗ ತನಿಖೆಗೆ ನಡೆಸುತ್ತೇವೆ ಎಂದರು.




