ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ

2 years ago

ದಿನಾಂಕ ಪ್ರಕಟಿಸಲಿರುವ ಚುನಾವಣಾ ಆಯೋಗ 

ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು, ಜಾರ್ಖಂಡ್ ವಿಧಾನಸಭೆಯ ಅವಧಿ ಜನವರಿ 5, 2025 ರಂದು ಕೊನೆಗೊಳ್ಳಲಿದೆ.

ದೆಹಲಿ: ಬಹು ನಿರೀಕ್ಷಿತ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಅಕ್ಟೋಬರ್ 15 ರ ಮಂಗಳವಾರ ಮಧ್ಯಾಹ್ನ 3.30 ಕ್ಕೆ ಪ್ರಕಟಿಸಲಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯ ಅವಧಿ 2025ರ ಜನವರಿ 5ರಂದು ಮುಕ್ತಾಯವಾಗಲಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಕೂಡಿದ ಆಡಳಿತಾರೂಢ ಮಹಾಯುತಿ ಒಕ್ಕೂಟ ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು (ಯುಬಿಟಿ) ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ವಿರುದ್ಧ ಸ್ಪರ್ಧಿಸಲಿದೆ.

ಜಾರ್ಖಂಡ್‌ನಲ್ಲಿ, ಇಂಡಿಯಾ ಒಕ್ಕೂಟದ ಭಾಗವಾಗಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್‌ಯು), ಜನತಾ ದಳ (ಯುನೈಟೆಡ್) ಮತ್ತು ಬಿಜೆಪಿಯನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ವಿರುದ್ಧ ಸ್ಪರ್ಧಿಸಲಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಕೇಂದ್ರ ಚುನಾವಣಾ ಸಮಿತಿಯಿಂದ (CEC) ಅನುಮತಿ ಪಡೆದ ನಂತರ ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರದ 60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ದೆಹಲಿಯಲ್ಲಿ ಪಕ್ಷದ ಮಹಾರಾಷ್ಟ್ರ ಘಟಕದ ಪ್ರಮುಖ ನಾಯಕರು ಮತ್ತು ಎರಡು ರಾಜ್ಯ ಚುನಾವಣಾ ಉಸ್ತುವಾರಿಗಳಾದ ಭೂಪೇಂದರ್ ಯಾದವ್ ಮತ್ತು ಅಶ್ವಿನಿ ವೈಷ್ಣವ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿದರು. ಪಕ್ಷದ ಮಹಾರಾಷ್ಟ್ರ ಘಟಕ ಸಿಇಸಿಗೆ ಆಯ್ಕೆ ಮಾಡಲು ಹಾಲಿ ಶಾಸಕರು ಸೇರಿದಂತೆ ಸುಮಾರು 100 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಇನ್ನು ಕಾಂಗ್ರೆಸ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸಭೆ ಕರೆದಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ವಿಜಯ ವಾಡೆತ್ತಿವಾರ್ ಮತ್ತು ಹಿರಿಯ ನಾಯಕ ಬಾಳಾಸಾಹೇಬ್ ಥೋರಟ್ ಹಾಜರಿದ್ದರು.

Leave a Reply