ರಾಂಚಿ: ಶಾಸಕ ಸ್ಥಾನದಿಂದ ಅನರ್ಹತೆ ಭೀತಿ ಎದುರಿಸುತ್ತಿರುವ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್ ಹಾದಿ ಹಿಡಿದಿದ್ದು, ಸ್ವಯಂ ಇಚ್ಛೆಯಿಂದ ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆಗೆ ಸಿದ್ಧತೆ ನಡೆಸಿದ್ದಾರೆ. ಕಳೆದ ವಾರ ದೆಹಲಿ ವಿಧಾನಸಭೆಯಲ್ಲಿ ಆಪ್ ಇದೇ ಮಾದರಿಯನ್ನು ಅನುಸರಿಸಿತ್ತು.
ಶಾಸಕ ಸ್ಥಾನದಿಂದ ಅನರ್ಹತೆ ಕುರಿತ ವರದಿ ಸೋರಿಕೆ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜ್ಯಪಾಲರನ್ನು ಯುಪಿಎ ನಿಯೋಗ ಭೇಟಿ ಮಾಡಿ ಮನವಿಯನ್ನ ಸಲ್ಲಿಸಿ ಆಘಾತ ವ್ಯಕ್ತಪಡಿಸಿತ್ತು. ಈ ನಡುವೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಮೈತ್ರಿಕೂಟವನ್ನು ಎದುರಿಸಲು ಕಾರ್ಯತಂತ್ರ ರೂಪಿಸಲು ವಿಪಕ್ಷ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಜಾರ್ಖಂಡ್ನಲ್ಲಿ ಗೊಂದಲದ ಸ್ಥಿತಿ ಇದೆ. ನಮ್ಮ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ರಾಜ್ಯಪಾಲರು ಒಂದೆರೆಡು ದಿನಗಳಲ್ಲಿ ಗೊಂದಲ ನಿವಾರಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ. ಆದ್ದರಿಂದ ನಾವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅಲಂಗೀರ್ ಆಲಂ ಹೇಳಿದ್ದಾರೆ.
ಲಾಭದಾಯ ಹುದ್ದೆ ಹೊಂದಿರುವ ಪ್ರಕರಣದಲ್ಲಿ ಹೇಮಂತ್ ಸೋರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮನವಿ ಸಲ್ಲಿಸಿತ್ತು. ಚುನಾವಣಾ ಆಯೋಗ ಆಗಸ್ಟ್ 25 ರಂದು ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ತನ್ನ ನಿರ್ಧಾರವನ್ನು ತಿಳಿಸಿತ್ತು. ಆದರೆ ಆ ನಿರ್ಧಾರ ಏನು ಎಂಬುದು ಇದುವರೆಗೂ ಹೊರಬಂದಿಲ್ಲ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.




