ಶಿವಮೊಗ್ಗ: ಕನ್ನಡ ಭಾಷೆ ಇಂದು ಶ್ರೀಮಂತವಾಗಿದೆ ಎಂದರೆ ಅದಕ್ಕೆ 12ನೇ ಶತಮಾನದ ಶಿವಶರಣರ ವಚನಗಳ ಕೊಡುಗೆ ಅಪಾರ ಎಂದು ಶಿಕ್ಷಕಿ ಲಕ್ಷ್ಮಿ ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಮತ್ತು ಜಿಲ್ಲಾ – ತಾಲೂಕು ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಹಾಗೂ ಶಿವಮೊಗ್ಗ ಸಹ್ಯಾದಿ ವಿಜ್ಞಾನ ಕಾಲೇಜು, ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ 51ನೇ ವಚನ ಮಂಟಪ-ದತ್ತಿ ಕಾರ್ಯಕ್ರಮ-ವಿಶೇಷವಾಗಿ ಪದವಿ ಪಠ್ಯಾಧಾರಿತ ವಚನಗಳ ಪರಿಚಯ, ಗಾಯನ, ವಿಶ್ಲೇಷಣೆ, ನೃತ್ಯ ಹಾಗೂ ರೂಪಕ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

ಕೇವಲ ಕೆಲವೇ ಜನರಿಗೆ ಅರ್ಥವಾಗುತ್ತಿದ್ದ ಕಾಲಘಟ್ಟದಲ್ಲಿ ಸರಳವಾಗಿ ಅರ್ಥವಾಗುವಂತೆ ಎಲ್ಲ ಜನಸಮಾನ್ಯರಿಗೂ ಮುಟ್ಟಿದ್ದು ವಚನಗಳು. ಯುದ್ಧ ದಾಹದಲ್ಲಿ ತೇಲಾಡುತ್ತಿರುವ ಈ ಜಗತ್ತಿಗೆ ಶರಣರ ವಚನಗಳು ಇಂದು ಪರಿಹಾರವಾಗಬಲ್ಲವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಮಾತನಾಡಿ, ವಚನಗಳ ಸಾರ ಇಂದಿನ ಯುವ ಪೀಳಿಗೆಗೆ ಅದರಲ್ಲೂ ಪದವಿ ಕಾಲೇಜಿನ ಮಕ್ಕಳಿಗೆ ಮುಟ್ಟಿಸುವುದು ಅಗತ್ಯವಾಗಿದೆ. ದ್ವೇಷ, ಅಸೂಯೆ, ಸ್ವಜಾತಿ ಪ್ರೇಮವೇ ಮೇಳೈಸುತ್ತಿರುವ ಈ ಹೊತ್ತಿಗೆ ಸಮಭಾವ ಮೂಡಲು ವಚನಗಳೇ ಮದ್ದಾಗಬಲ್ಲದು ಎಂದರು.
ಕಾರ್ಯಕ್ರಮವನ್ನು ಬಸವಣ್ಣನ ಕಳಬೇಡ ಕೊಲಬೇಡ ಎಂಬ ವಚನವನ್ನು ವಾಚಿಸುವುದರ ಮೂಲಕ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಶ್ವರಿ ಎನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪದವಿ ಪಠ್ಯವಾಗಿರುವ ಬಸವಣ್ಣನ ವಚನಗಳ ಗಾಯನ-ವಿಶ್ಲೇಷಣೆ, ನೃತ್ಯ ಹಾಗೂ ರೂಪಕ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ನಡೆಯಿತು.

ವೇದಿಕೆಯಲ್ಲಿ ಬಸವನಗೌಡ ಮಾಳಿಗಿ, ಎನ್ ಜಿ ಬಸವಲಿಂಗಪ್ಪ, ಆರ್ ಎಸ್ ಸ್ವಾಮಿ ಇದ್ದರು. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಜಿಲ್ಲೆಯ ಅದ್ಯಕ್ಷ ಹೆಚ್ ಎನ್ ಮಹಾರುದ್ರ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಎಂ. ಮುತ್ಯಯ್ಯ ಸ್ವಾಗತಿಸಿದರೆ, ಬಾರಂದೂರು ಪ್ರಕಾಶ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಚಾಲನೆ ಮತ್ತು ನಿರೂಪಣೆ ಗಣೇಶ್ ಕೆಂಚನಾಲ್ ಮಾಡಿದರೆ, ಡಾ ಪ್ರೇಮ ವಂದದನಾರ್ಪಣೆ ಸಲ್ಲಿಸಿದರು.




