ಬದಲಾಗದ ಸಾಮಾಜಿಕ ವ್ಯವಸ್ಥೆಯ ಬಿಂಬ

2 years ago

#image #unchanging #social #system #Rangayana #plays #drama #PLankesh #DSChowgule

ಎರಡ್ಮೂರು ದಶಕಗಳಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಅಂಥ ಗುರುತರ ಯಾವುದೇ ಬದಲಾವಣೆ ಆಗಿಲ್ಲ. ಪಿ.ಲಂಕೇಶರ ಕತೆ ‘ಮುಟ್ಟಿಸಿಕೊಂಡವನು’ ರಂಗರೂಪದ ಅಭಿವ್ಯಕ್ತಿ ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ. ಹೊರನೋಟಕ್ಕೆ ದಲಿತರನ್ನು ಒಳಗೊಳ್ಳುವ ಒಂದು ಡಾಂಭಿಕ ಆಚರಣೆ ಸಮಾಜದ ಮಧ್ಯೆ ದಟ್ಟವಿದೆ. ಆದರೆ ಮಾನಸಿಕವಾಗಿ ಅಸ್ಪೃಶ್ಯತೆಯ ನಂಬುಗೆ ಆಳವಾಗಿ ಇನ್ನೂ ಬೇರೂರಿದೆ. ಉಚ್ಚವೆಂದು ಕರೆಸಿಕೊಳ್ಳುವ ನಮ್ಮ ಸಮಾಜ ಮಾನವತಾವಾದಿ ಡಾ.ಅಂಬೇಡಕರರನ್ನೂ ಸಹ ಇಡಿಯಾಗಿ ಒಪ್ಪದೇ ಇರುವುದಕ್ಕೆ ಇಂಡಿಯಾದಲ್ಲಿ ಘಟಿಸುವ ಪೂರಕ ಅನೇಕ ಅಹಿತಕರ ಘಟನೆಗಳೇ ಸಾಕ್ಷಿ. ಹೀಗಾಗಿ ‘ಮುಟ್ಟಿಸಿಕೊಂಡವನು’ ನಾಟಕದ ಶಕ್ತಿ ನಮ್ಮ ಆತ್ಮಸಾಕ್ಷಿಗೆ ಸವಾಲು ಒಡ್ಡುವ ಇಂಥ ಅನೇಕ ಸಮಸ್ಯೆಗಳನ್ನು ಧ್ವನಿಸುತ್ತದೆ.

ಇತ್ತೀಚೆಗೆ ಮೈಸೂರು ರಂಗಾಯಣ ಅಭಿನಯಿಸಿದ ಈ ನಾಟಕವನ್ನು ಬೆಳಗಾವಿಯ ಕನ್ನಡ ಭವನ ರಂಗಮಂದಿರದಲ್ಲಿ ನೋಡಿದೆ. ಕೃಷ್ಣಕುಮಾರ ನಾರ್ಣಕಜೆ, ಮಹಾದೇವ, ಶಶಿಕಲಾ ಬಿ.ಎನ್., ಗೀತಾ ಮೋಂಟಡ್ಕ, ನಂದಿನಿ ಕೆ.ಆರ್- ಇವರ ಮಾಗಿದ ಅಭಿನಯ ಹಾಗೂ ಹೊಸಬರ (ಮಹೇಶ ಕಲ್ಲತ್ತಿ, ಧನಂಜಯ ಆರ್.ಸಿ, ಪಿ.ಶಿವಕುಮಾರ್) ಪಾತ್ರಕ್ಕೆ ಅನುಸಾರವಾದ ನಟನೆಯು ಮೇಳೈಸಿ ಮನದ ಭಿತ್ತಿಯ ಮೇಲೊಂದು ಗಾಢ ವಿಷಾದವನ್ನು ಅಚ್ಚೊತ್ತುತ್ತದೆ.

ಒಂದು ಕತೆಯನ್ನು ರಂಗರೂಪಕ್ಕೆ ಪುನರ್ ಸೃಜನಗೊಳಿಸುವುದು ಅತ್ಯಂತ ಕಠಿಣವಾದ ಪ್ರಕ್ರಿಯೆ. ಎಷ್ಟನ್ನು ಯಾವುದನ್ನು ಸ್ವೀಕರಣಗೊಳಿಸುವುದು ಹಾಗು ಬಿಡುವುದು. ಅಭಿನಯ, ನಾಟ್ಯವು ಘಟಿಸುವ ಪ್ರಸಂಗ ಮತ್ತು ರಚನೆಯ ನಿರ್ವಹಣೆಯಲ್ಲಿ ನಂದಿನಿ ಕೆ.ಆರ್ ಅವರ ಮೂರು ದಶಕಗಳ ರಂಗಾನುಭವ ಕೈಹಿಡಿದಿದೆ. ಅದಲ್ಲದೆ ನಿರ್ದೇಶಕರೂ ಅವರೇ ಆಗಿರುವುದರಿಂದ ರಂಗಪಠ್ಯ ಅವರಿಗೆ ದಕ್ಕಿದೆ. ಕತೆಯನ್ನು ರಂಗಪಠ್ಯವಾಗಿ ರೂಪಿಸುವಾಗ ಹಿರಿಯ ಕಲಾವಿದರೆಲ್ಲ ಸೇರಿ ಇಂಪ್ರುವೈಜ್ ಮಾಡಿದೆವು ಎಂದು ಹೇಳುವ ನಂದಿನಿಯವರು ಅದರ ಕ್ರೆಡಿಟ್‌ಗೆ ಕಾರಣರಾದ ತಮ್ಮ ಸಹ ಕಲಾವಿದರನ್ನು ಮನದುಂಬಿ ನೆನೆಯುತ್ತಾರೆ.

ಶೂದ್ರ ಬಸಲಿಂಗ (ನಾರ್ಣಕಜೆ) ಮತ್ತು ದಲಿತ ವೈದ್ಯ ಡಾ.ತಿಮ್ಮಪ್ಪ(ಮಹದೇವ) ಇವರ ಮಾನಸಿಕತೆಯನ್ನು ಲಂಕೇಶರು ಮೌಢ್ಯ ಮತ್ತು ಪ್ರಜ್ಞೆಯ ನೆಲೆಯಲ್ಲಿ ವಿಸ್ತರಣಗೊಳಿಸಿರುವರು. ಕಣ್ಣು ಊನಗೊಂಡ ರೈತ ಬಸಲಿಂಗ ಸೋಜ್ವಳ. ಕರುಣೆ, ಪ್ರೀತಿ, ಸೇವೆಯ ವೈದ್ಯ ತಿಮ್ಮಪ್ಪ ಶುಶ್ರೂಷೆಗೆ ಅಕ್ಕರೆಯ ಹೊಳಪು ತಂದವರು. ಹಾಗೆ ಇವರಿಬ್ಬರಲ್ಲಿ ವಿಶ್ವಾಸವು ಅಗಾಧ. ಆದರೆ ಹಿತ್ತಾಳೆ ಕಿವಿಯ ಬಸಲಿಂಗ ದಿಕ್ಕು ತಪ್ಪಿಸುವವರ ಮಾತುಗಳಿಗೆ ತನ್ನ ಕಣ್ಣಿನ ಊನಕ್ಕೆ ತಾನು ಕಾರಣವೆಂಬುದನ್ನು ಮರೆತು ವರ್ತಿಸುವುದು ಒಂದು ಬಗೆಯ ಉಚ್ಚಭ್ರು ಮೌಢ್ಯ. ಸಮಾಜದ ಮತ್ತು ಬಸಲಿಂಗರ ಆರೋಪಗಳನ್ನು, ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುವ ತಿಮ್ಮಪ್ಪರ ವರ್ತನೆಯೂ ಒಂದು ಪ್ರಜ್ಞೆ. ಇದು ಗಾಂಧೀಜಿಯವರ ಸಮಚಿತ್ತಭಾವವನ್ನು ಜ್ಞಾಪಿಸುತ್ತದೆ. ಇಲ್ಲಿ ಇವರಿಬ್ಬರ ಮೌಢ್ಯ ಮತ್ತು ಪ್ರಜ್ಞೆಗಳು ಒಂದು ರೂಪಕದಂತೆ ಕಾಣುತ್ತವೆ.

ಅಭಿನಯದಲ್ಲಿ ನಾರ್ಣಕಜೆ ಮತ್ತು ಮಹದೇವರು ನಟಿಸಿಲ್ಲ, ಬದುಕಿದ್ದಾರೆ. ಮಹದೇವರ ಗಳಗಳನೆ ಮೌನ ರೋದನದ ಅಭಿನಯವು ಇಡೀ ನಾಟಕದ ಅಗ್ಗಳಿಕೆ. ಮನುಷ್ಯತ್ವದ ಧಾರೆಯಾಗಿ ರಂಗಾಸಕ್ತರ ಎದೆಯಲ್ಲಿಳಿವ ಈ ಬೀಜ, ಸಸಿ, ಮರವಾಗಿ ಮಾನವತೆಯ ಫಲಕೊಡುತ್ತದೆ.

ಹೀಗೊಂದು ಭರವಸೆ. ಉಳಿದಂತೆ ಎಲ್ಲ ಕಲಾವಿದರು ಒಂದು ಕಲಾಕೃತಿಯ ಸಂಯೋಜನೆಯಲ್ಲಿ ತಮ್ಮದೆ ಡಿಸ್ಟೊರ್ಡೆಡ್ ಇಮೇಜಸ್ ಗಳಾಗಿ ಮನದೊಳಗೆ ಇಂಗುವರು. ಒಟ್ಟು ರಂಗಾನುಭವವು ಮತ್ತೆ ಮತ್ತೆ ಮನುಷ್ಯರಾಗೋಣವೆಂಬ ಆಶಯವನ್ನು ಧ್ವನಿಸುತ್ತಲೇ ಇರುತ್ತದೆ. ಅದು ಸಾಕಾರಗೊಳ್ಳುವ ಆಶಾವಾದವಿರಲಿ.

  • ಡಿ.ಎಸ್.ಚೌಗಲೆ, ಹಿರಿಯ, ಚಿತ್ರಕಲಾವಿದರು ಮತ್ತು ನಾಟಕಕಾರರು

Leave a Reply