ಗೋಷ್ಠಿಗಳು, ಉತ್ಸವಗಳು ಅಕಾಡೆಮಿಗಳು ಮತ್ತು ಲಾಬಿ

2 years ago

ದಸರಾ ಕವಿಗೋಷ್ಠಿ ಮತ್ತು ಭಾಗವಹಿಸಿದ ಕವಿಗಳ ಕುರಿತು ಭಾಗವಹಿಸದ ಕವಿಗಳಿಂದ ಬಿಸಿಬಿಸಿ ಚರ್ಚೆ ಸಾಗಿಯೇ ಇದೆ, ಇದು ಮುಂದಿನ ದಸರಾವರೆಗೂ ನಿಲ್ಲುವುದಿಲ್ಲ. ತುಂಬಾ ನೊಂದಂತಿರುವ ಕವಿಗಳಿಗೆ ನನ್ನದೊಂದು ಕಿವಿಮಾತು. ನೊಂದುಕೊಳ್ಳಬೇಡಿ ಹಾಗೂ ಪ್ರತಿಕ್ರಿಯೆ ನೀಡಿ ಕವಿತ್ವ ಕರಗಿಸಿಕೊಳ್ಳಬೇಡಿ. ಪ್ರಶಸ್ತಿ, ಪುರಸ್ಕಾರ, ಅಕಾಡೆಮಿಗಳಲ್ಲಿ ಸ್ಥಾನ ಪಡೆಯಲು, ಗೋಷ್ಠಿಯಲ್ಲಿ ಭಾಗವಹಿಸಲು ಬೇಕಾಗಿರುವ ಅರ್ಹತೆ ಏನು ಎಂಬುದನ್ನು ಅರ್ಥ ಮಾಡಿಕೊಂಡು “ತೆಪ್ಪಗಿರೋಣ”.

ಎಂಬತ್ತರ ದಶಕದಿಂದ ಕವಿತೆ ಬರೆಯುತ್ತ ಅನೇಕ ಪತ್ರಿಕೆಗಳ ಮೂಲಕ ಕವಿ ಎಂದು ಗುರುತಿಕೊಂಡು, ನಂತರ ಸಾಹಿತ್ಯ ಪತ್ರಿಕೆಗಳ ಮೂಲಕ ನಿರಂತರ ವಿಮರ್ಶೆ ಮಾಡುತ್ತ ಬೆಳೆದವನು ನಾನು.‌ ನನಗೆ ಮೊದಲ ಮುಜುಗರ ಎದುರಾದದ್ದು 2004 ರಲ್ಲಿ ‘ನೀವು ಒಂದು ಕವಿತೆಯನ್ನು’ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಓದಬೇಕು ಎಂಬ ಕರೆ ಕೇಳಿ ಕುಣಿದಾಡಿದ್ದೆ. ನಂತರ ನಿಮ್ಮ ಪ್ರಕಟಿತ ಕವನ ಸಂಕಲನದ ಹೆಸರು ಹೇಳಿ ಎಂದಾಗ ‘ಇಲ್ಲ’ ಎಂದೆ. ‘ಅಯ್ಯೋ’ ಸಾರಿ ಸರ್ ನೀವು ಗೋಷ್ಠಿಯಲ್ಲಿ ಕವಿತೆ ಓದುವ ಹಾಗಿಲ್ಲ ಎಂದು disqualify ಮಾಡಿದರು. ಇದು ನಮ್ಮ ಕವಿತೆಗಳನ್ನು ಅಳೆಯುವ ಕೆಲವು ನಿಯಮಗಳು.‌ ಹೀಗಿರುವಾಗ ನಂತರ ನಾನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದ ಮೂಲಕ ಚಾಲ್ತಿಗೆ ಬಂದೆ. ಹತ್ತಾರು ಕೃತಿಗಳು, ಮುದ್ರಣ, ಮರು ಮುದ್ರಣಗೊಂಡು ಓದುಗರ ಪ್ರೀತಿ ಗಳಿಸುತ್ತಿರುವುದು ನನ್ನ ತೃಪ್ತಿ ಮತ್ತು ಖುಷಿ ಆ ಮಾತು ಬೇರೆ.

ಪ್ರಶಸ್ತಿಗಳು, ವಿವಿಧ ಅಕಾಡೆಮಿಯ ಸ್ಥಾನಮಾನಗಳು ಕೇವಲ ಅರ್ಹತೆ ಇದ್ದವರಿಗೆ ಮಾತ್ರ ಸಿಗುವ ಕಾಲ ಈಗ ದೂರಾಗಿದೆ. ಅದಕ್ಕೆ ಇತರ ಅರ್ಹತೆಗಳೂ ಇವೆ, ಮೊದಲನೆಯದು ಪ್ರಭಾವ ಇರಬೇಕು, ಲಾಬಿ ಮಾಡುವ ಶಕ್ತಿ ಇರಬೇಕು, ಜೋರಾಗಿ ಜಗಳ ಮಾಡಬೇಕು, ನಮ್ಮದೇ ಆದ ಸಾಹಿತ್ಯದ ಗುಂಪೊಂದರ ಸಿಂಡಿಕೇಟ್ ಇರಬೇಕು, ಬೇಕಾ ಬಿಟ್ಟಿ ಪ್ರಶಸ್ತಿಗಳನ್ನು ಬಿಕರಿ ಮಾಡುವ ಖಾಸಗಿ ಪ್ರಶಸ್ತಿಗಳ ಫ್ಯಾಕ್ಟರಿ ಇರಬೇಕು, ಬೆಂಗಳೂರು ಸಾಹಿತ್ಯವಲಯಕ್ಕೆ ತುಂಬಾ ‘ಹತ್ತಿರ’ ಇರಲೇಬೇಕು. ಆಯಾ ಇಲಾಖೆಗಳ ಅಧಿಕಾರ ಏರುವವರ ಸಖ್ಯ ಇರಬೇಕು. ಕೊನೆಯದಾಗಿ ‘ಸಾಧ್ಯವಾದರೆ’, ಅಗತ್ಯ ಎನಿಸಿದರೆ ‘ಯೋಗ್ಯತೆ’ ಇರಬೇಕು. ಯೋಗ್ಯತೆಗೆ ಕೊನೆಯ ಸ್ಥಾನ ತಲುಪಿದ ಕಾಲಘಟ್ಟದಲ್ಲಿ ಇರುವ ನಾವು, ಉತ್ಸವಗಳ ಗೋಷ್ಠಿಯಲ್ಲಿ ನಮ್ಮ ಹೆಸರು ಅಪೇಕ್ಷೆ ಪಡುವುದು ಶುದ್ಧ ಮೂರ್ಖತನ. ಇಂತಹ ಗೋಷ್ಠಿಗಳಲ್ಲಿ ಭಾಗವಹಿಸುವುದು ಪ್ರತಿಷ್ಠೆ ಎನ್ನುವುದಕ್ಕಿಂತ ಮುಖ್ಯ, ಒಳ್ಳೆಯ ವಸತಿ ಜೊತೆಗೆ TADA ಸಿಕ್ಕು, ನಾವು ಟಾಡಾ ಜೀವಿಗಳು ಎಂಬ ಧನ್ಯತೆ ಲಭಿಸುತ್ತದೆ.

ಇದಕ್ಕೆ ಇರಬಹುದಾದ ಕೆಲವು ಉದಾಹರಣೆಗಳನ್ನು ನೋಡೋಣ: ಇಡೀ ಜೀವನದಲ್ಲಿ ಒಂದೇ ಒಂದು ಅಕ್ಷರ ಓದದ ಗೆಳೆಯನೊಬ್ಬ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯನಾಗಿದ್ದ. ಮುಂದೆ ಅವನ ಪಾಡು ದೇವರಿಗೆ ಪ್ರೀತಿ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ಯಾರೂ ಇಲ್ಲ ಎಂಬ ಕಾರಣದಿಂದ ಅವರೇ ಮತ್ತೆ ಮತ್ತೆ ಇರುತ್ತಾರೆ.

ನನ್ನ ಗುರುಗಳಾದ ಪ್ರೊ. ಚಂಪಾ ಅವರು ಕಸಾಪ ಅಧ್ಯಕ್ಷರಾದ ಹೊತ್ತಲ್ಲಿ ಅಭಿನಂದಿಸಲು ಹೋಗಿದ್ದೆ, ‘ಸಿದ್ದು ಇನ್ ಮುಂದ ನಾ ಅದಿನಿ ಅಂತ ಅದರಾಗ ಹಾಕ್ ಇದರಾಗ ಹಾಕ್ರಿ ಸರ್ ಅನಬಾರದು’ ಎಂದು ತಾಕೀತು ಮಾಡಿದ್ದರು, ಅದರಂತೆ ನಾನು ಬೇರೆಯವರನ್ನು ಹಾಕಿಸುವ ಉದ್ಯೋಗ ಆರಂಭ ಮಾಡಿದೆ.‌

ನಂತರ ಬಂದ ಕಸಾಪ ಅಧ್ಯಕ್ಷರುಗಳು ನಾನು ಅವರ ಗುಂಪಿನ ಪರ ಅಲ್ಲ ಎಂಬ ಕಾರಣ ಕೊಟ್ಟು ಎಲ್ಲಿಯೂ ಹಾಕಲಿಲ್ಲ. ಈಗಿನ ಅಧ್ಯಕ್ಷರು, ಅವರ ವಿರುದ್ಧ ಲೇಖನ ಬರೆದೆ ಎಂಬ ಕಾರಣದಿಂದ ದೂರ ಇಟ್ಟಿದ್ದಾರೆ. ಹಾಗಿದ್ದರೆ ನಾನು ‘ಬರಹಗಾರ’ ಅಲ್ಲವೆ?

ಸಾಹಿತ್ಯ ಅಕಾಡೆಮಿ ಆಯ್ಕೆ ಸಂದರ್ಭದಲ್ಲಿ ನಮ್ಮೂರು ಕಾರಟಗಿಯನ್ನು ಪ್ರತಿನಿಧಿಸುವ ಶಾಸಕರು, ಅದೇ ಖಾತೆಯ ಸಚಿವರೂ ಆದರು. ನನಗೆ ಅತ್ಯಂತ ಚಿರಪರಿಚಿತರು ಕೂಡ, ಗ್ರಾಮದ ಪರವಾಗಿ ಸನ್ಮಾನಿಸಿದಾಗ ಅಭಿನಂದನಾ ಭಾಷಣ ಮಾಡಿ, ಸಂಸ್ಕೃತಿ ಇಲಾಖೆಯ ಮಹತ್ವ ವಿವರಿಸಿದ್ದೆ. ಆದರೆ ನಾನು ಅವರಿಗೆ ಒಂದು ಮಾತು ಹೇಳಲಿಲ್ಲ ಅಥವಾ ಕೇಳಲಿಲ್ಲ ಎಂಬ ಕಾರಣದಿಂದ ಏನೂ ಆಗಲಿಲ್ಲ ಎನ್ನುತ್ತಾರೆ ಗೆಳೆಯರು. ಇದೇ ಮಾತು ಅಕ್ಕ ಸಮ್ಮೇಳನದ ಸಂದರ್ಭದಲ್ಲಿ ರಿಪೀಟ್ ಆಯಿತು.

ನಾನು ಏನೂ ಆಗದಿದ್ದರೂ ಚಿಂತೆಯಿಲ್ಲ,  ನನ್ನ ಬರಹ, ಮಾತು, ವಿಡಿಯೋ ಕೆಲಸಗಳು ನಿಂತಿಲ್ಲ, ನಿಲ್ಲುವುದೂ ಇಲ್ಲ. ಜನ ಈಗಲೂ ಸಾಹಿತಿ, ಕವಿ ಎಂದು ಕರೆಯುತ್ತಾರೆ.

ಪ್ರತಿಯೊಬ್ಬ ಸಾಹಿತಿಗೆ ತನ್ನದೇ ಆದ ಓದುಗರು ಇರಬೇಕು.  ಓದುಗರು, ಅರ್ಥಪೂರ್ಣ ವಿಮರ್ಶಕರು ಸಾಕು. ನಿಜಕವಿ ಸಂತನಂತೆ ನಿರ್ಲಿಪ್ತನಾಗುವ ಅನಿವಾರ್ಯತೆ ಇದೆ.

ಈಗ ಇರುವ ಅಕಾಡೆಮಿಗಳು, ಪ್ರಾಧಿಕಾರಿಗಳ ಅಧ್ಯಕ್ಷರುಗಳು ನನಗೆ ಆತ್ಮೀಯರು ಎಂದು ಹೇಳಿಕೊಳ್ಳುವುದು ಕೂಡ ಪರೋಕ್ಷ ಲಾಬಿಯೆನಿಸುತ್ತದೆ.

ಕಡೆ ಮಾತು – ಅಂದ ಹಾಗೆ ನಾನು ಒಂದು ಸಣ್ಣ ಲಾಬಿ ಮಾಡಿ 1999ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯನಾಗಿ ನೇಮಕವಾಗಿದ್ದೆ.‌ ಈಗ ಸಾಹಿತ್ಯದ ಜೊತೆಗೆ, ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ಅರ್ಥವಾಗಿದ್ದರಿಂದ ಲಾಬಿಯಿಂದ ದೂರ ಇದ್ದು ನಿರ್ಲಿಪ್ತನಾಗಿದ್ದೇನೆ.

– ಪ್ರೊ. ಸಿದ್ದು ಯಾಪಲಪರವಿ, ಕಾರಟಗಿ

Leave a Reply