ಚಿಕ್ಕಬಳ್ಳಾಪುರಕ್ಕೆ ಸಿಂಥೆಟಿಕ್ ಟ್ರ್ಯಾಕ್, ಕ್ರೀಡಾಗ್ರಾಮ ಸಹಿತ ಅಗತ್ಯ ಕ್ರೀಡಾ ಸೌಲಭ್ಯದ ಭರವಸೆ

3 years ago

ಚಿಕ್ಕಬಳ್ಳಾಪುರ: ಸಿಂಥೆಟಿಕ್ ಟ್ರಾಕ್, ಆಧುನಿಕ ಸೌಲಭ್ಯಗಳಿರುವ ವಾಲಿಬಾಲ್ ಕೋಟ್೯, ಕ್ರೀಡಾಗ್ರಾಮ ನಿರ್ಮಾಣ ಸಹಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗತ್ಯವಿರುವ ಎಲ್ಲಾ ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದಾಗಿ ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರಕಟಿಸಿದರು.

ದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಪ್ರತಿ ವರ್ಷ ಕ್ರೀಡೆಗಳಿಗಾಗಿ ಅನುದಾನವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯಪಟ್ಟರು.

ನಗರದ ಎಸ್ ಜೆಸಿಐಟಿ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಸಂಜೆ ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನ ಸಮಿತಿ ಆಯೋಜಿಸಿದ್ದ ಸಲಹೆ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಕ್ರೀಡಾಪಟುಗಳು, ಯುವ ಆಟಗಾರರು, ದೈಹಿಕ ಶಿಕ್ಷಕರು ಮತ್ತು ಕ್ರೀಡಾ ತರಬೇತುದಾರರಿಂದ ಕ್ರೀಡೆಗಳ ಅಭಿವೃದ್ಧಿಗೆ ಅಗತ್ಯವಿರುವ ಸಲಹೆಗಳನ್ನು ಪಡೆದು ಎಲ್ಲವನ್ನೂ ಈಡೇರಿಸಲು ಕ್ರಮ ವಹಿಸುವುದಾಗಿ ಅವರು ಹೇಳಿದರು.

ಯುವಕರು ಅತಿ ಹೆಚ್ಚಿರುವ ದೇಶ ಭಾರತವಾಗಿದ್ದು, ಕ್ರೀಡೆಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ರಾಜ್ಯ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳನ್ನು ಪೂರೈಸಲೂ ಕ್ರಮ ವಹಿಸುವುದಾಗಿ ತಿಳಿಸಿದರು.

ಖೇಲೋ ಇಂಡಿಯಾ ವಿಶ್ವ ವಿದ್ಯಾಲಯ ಮಟ್ಟದ ಕ್ರಡೆಗಳು ಮತ್ತು ಖೇಲೋ ಇಂಡಿಯಾ ಯುವ ಕ್ರೀಡೆಗಳು ಅತ್ಯಂತ ಯಶ್ವಿಯಾಗಿದ್ದು, ಇತ್ತೀಚಿಗೆ ಕರ್ನಾಟಕದಲ್ಲಿ ಆಯೋಜಿಸಿದ್ದ ಖೇಲೋ ಇಂಡಿಯಾ ಕ್ರೀಡೆಗಳೂ ಯಶ ಕಂಡಿರುವುದಾಗಿ ಅವರು ಹೇಳಿದರು.

ನಂತರ ಹಾಜರಿದ್ದ ಕ್ರೀಡಾಪಟುಗಳು, ದೈಹಿಕ ಶಿಕ್ಷಕರು ಮತ್ತು ಕ್ರೀಡಾ ತರಬೇತುದಾರರ ಸಲಹೆ ಕೇಳಿದ ಕೇಂದ್ರ ಸಚಿವರಿಗೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ಅಥ್ಲೆಟಿಕ್ ಟ್ರಾೃಕ್ ಮತ್ತು ವಾಲೀಬಾಲ್ ಕೋರ್ಟ್ ನೀಡುವಂತೆ ಬೇಡಿಕೆ ಇಡಲಾಯಿತು. ಈ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿದರು.

ಬಿಪಿಎಡ್ ಮತ್ತು ಎಂಪಿಎಡ್ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ ನಂತರ ಹೆಚ್ಚಿನ ಅವಕಾಶಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವಂತೆ ಕೋರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಗಮನ ಹರಿಸಿ, ಉದ್ಯೋಗವಕಾಶಗಳನ್ನು ಕಲ್ಪಿಸುವ ಭರವಸೆ ನೀಡಿದರು. ಅಲ್ಲದೆ ಜಿಲ್ಲೆಯಲ್ಲಿ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಇದನ್ನೂ ಪೂರೈಸುವ ಭರವಸೆಯನ್ನು ಅವರು ನೀಡಿದರು.

ಜೊತೆಗೆ ಇತ್ತೀಚಿಗೆ ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರದ ಅನುದಾನದಲ್ಲಿ ಈಗಾಗಲೇ ಮಂಜೂರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗತ್ಯವಿರುವ ಅನುದಾನ ಮತ್ತು ಸೌಲಭ್ಯಗಳನ್ನು ನೀಡುವುದಾಗಿ ಅವರು ಭರವಸೆ ನೀಡಿದರು.

ಅಲ್ಲದೆ ಕ್ರೀಡಾಪಟುಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕುರಿತು ಎಲ್ಲರಿಂದಲೂ ಸಲಹೆಗಳನ್ನು ಪಡೆದು ಅವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಮತ್ತು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಪ್ರಣಾಳಿಕೆಯಲ್ಲಿನ ಎಲ್ಲವನ್ನೂ ಅನುಷ್ಠಾನ ಮಾಡಲು ಕ್ರಮ ವಹಿಸುವುದಾಗಿ ಅವರು ತಿಳಿಸಿದರು.

ಜನರಿಂದ ಜನರಿಗಾಗಿಯೇ ಪ್ರಣಾಳಿಕೆ ಸಿದ್ಧಪಡಿಸಬೇಕು ಮತ್ತು ಆ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ಉದ್ಧೇಶದಿಂದ ಬಿಜೆಪಿ ಪ್ರಣಾಳಿಕೆಗಾಗಿ ಸಲಹೆಗಳನ್ನು ಪಡೆಯಲು ಕೇಂದ್ರ ಕ್ರೀಡಾ ಸಚಿವರೇ ಇಲ್ಲಿಗೆ ಆಗಮಿಸಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.

ಆರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸಿದ್ಧಪಡಿಸುವ ಪ್ರಣಾಳಿಕೆ ನೈಜತೆಯಿಂದ ಕೂಡಿರಬೇಕು ಎಂಬ ಗುರಿಯೊಂದಿಗೆ ಸಾರ್ವಜನಿಕರಿಂದ ಸಲಹೆ ಪಡೆಯಲಾಗುತ್ತಿದ್ದು, ನಂತರ ನೂರಕ್ಕೆ ನೂರು ಪ್ರಣಾಳಿಕೆ ಅನುಷ್ಠಾನ ಮಾಡಲು ಸರ್ಕಾರ ಶ್ರಮಿಸಲಿದೆ ಎಂದು ಅವರು ಹೇಳಿದರು.

ಕೇಂದ್ರದ ಕ್ರೀಡಾ ಸಚಿವರು ಚಿಕ್ಕಬಳ್ಳಾಪುರಕ್ಕೆ ಬಂದು, ಸ್ಥಳೀಯ ಕ್ರೀಡಾಪಟುಗಳು, ಯುವ ಆಟಗಾರರು, ತರಬೇತಿದಾರರ ಸಲಹೆ ಪಡೆದು, ಮುಂದೆ ರಾಜ್ಯದಲ್ಲಿ ಯಾವರೀತಿ ಕ್ರೀಡೆ. ಯುವಕರ ಸಬಲೀಕರಣಕ್ಕೆ ಅಗತ್ಯವಿರುವ ಪ್ರಣಾಳಿಕೆ ಅನುಷ್ಠಾನಕ್ಕೆ ತರಬೇಕು ಎಂಬ ಬಗ್ಗೆ ಸಲಹೆ ಪಡೆಯುತ್ತಿದ್ದಾರೆ ಎಂದರು.

Leave a Reply