ಮಿಶನ್ ವಿದ್ಯಾಕಾಶಿ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ನಮ್ಮ ಗುರಿ ನೂರರತ್ತ’ ಪ್ರೇರಣಾ ಕಾರ್ಯಾಗಾರ
ಧಾರವಾಡ: ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಓದುಬರಹ ಸುಧಾರಣೆ, ಎಸ್‍ಎಸ್‍ಎಲ್‍ಸಿ ಅನುತ್ತೀರ್ಣ ಪ್ರಮಾಣ ಕಡಿಮೆ ಮಾಡುವುದು ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ರ್ಯಾಂಕ್ ಗಳಿಸುವ ಉದ್ದೇಶವನ್ನು ಮಿಶನ್ ವಿದ್ಯಾಕಾಶಿ ಹೊಂದಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನಗರದ ಕೆ.ಇ.ಬೋರ್ಡ್ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ವಿವಿಧ ತಾಲೂಕುಗಳ ಪ್ರತಿಭಾವಂತ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನಮ್ಮ ಗುರಿ ನೂರರತ್ತ-ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ಧಾರವಾಡ ಜಿಲ್ಲೆಯಿಂದ ಸುಮಾರು 29 ಸಾವಿರ ಮಕ್ಕಳು ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣ ಆಗುವಂತೆ ಅವರ ಕಲಿಕಾಗುಣಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರಿಂದ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಓದು ಬರಹ ಕಲಿಸಲಾಗುತ್ತಿದೆ ಎಂದರು.
ಜಿಲ್ಲೆಗೆ ಈ ಬಾರಿ ಹೆಚ್ಚು ರ್ಯಾಂಕ್ ತರಬೇಕು ಎಂಬ ಹಿನ್ನಲೆಯಲ್ಲಿ ಚಾಣಾಕ್ಷ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆ ಮೂಲಕ ಪ್ರತಿ ತಾಲೂಕಿನಲ್ಲಿ ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದರಂತೆ ಪ್ರತಿ ತಾಲೂಕಿನಿಂದ ವಿಶೇಷವಾಗಿ 20 ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆ, ಪರೀಕ್ಷಾ ಗುಣಮಟ್ಟ ಗಮನಿಸಿ, ನಮ್ಮ ಗುರಿ ನೂರರತ್ತ ಪ್ರೇರಣಾ ಕಾರ್ಯಾಗಾರದಲ್ಲಿ ತರಬೇತಿಗೆ ಆಯ್ಕೆ ಮಾಡಲಾಗಿದೆ ಎಂದರು.
ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಶ್ರಮ ಪಟ್ಟು ಓದುವ, ನಿರಂತರ ಅಧ್ಯಯನ ಮೂಲಕ ಸಾಮಾನ್ಯರ ಗುಂಪಿನಿಂದ ಸಾಧಕರ ಗುಂಪಿಗೆ ಸೇರಬೇಕು. ಜೀವನದಲ್ಲಿನ ಎಲ್ಲ ಸಾಧನೆಗಳಿಗೆ ಶ್ರದ್ಧೆ ಮತ್ತು ಶಿಸ್ತುಬದ್ಧತೆ ಮುಖ್ಯವಾಗಿದೆ. ಗೆಲವು, ಸಾಧನೆಗಳಿಗೆ ಶಿಸ್ತು ಮೂಲ ಕಾರಣ. ವಿದ್ಯಾರ್ಥಿಗಳು ಓದಿನಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಸತತ ಅಧ್ಯಯನದಿಂದ ಸಾಧನೆ ಸಾಧ್ಯವಾಗುತ್ತದೆ ಎಂದರು.
ನಮ್ಮ ಸ್ಪರ್ಧೆ ಇತರರೊಂದಿಗೆ ಮಾಡದೇ ನಮ್ಮೊಳಗೆ ನಾವೇ ಸ್ಪರ್ಧೆ ಮಾಡಿಕೊಳ್ಳಬೇಕು. ಅಂದಾಗ ಆರೋಗ್ಯಕರ ಸ್ಪರ್ಧೆ ಮೂಡುತ್ತದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪರೀಕ್ಷೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ, ಏಕಾಗ್ರತೆ ಮತ್ತು ಯೋಜನಾಬದ್ಧವಾಗಿ ತಯ್ಯಾರಿ ಮಾಡಿಕೊಳ್ಳಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗೆ ಇದು ಮುಖ್ಯ ಕಾಲವಾಗಿದ್ದು, ಪ್ರತಿದಿನ ವಿಷಯವಾರು ಪುನರ್ ಮನನ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಮುಖ್ಯವಾಗಿದೆ. ಸರಿಯಾದ ಆಹಾರ ಪದ್ದತಿ ರೂಢಿಸಿಕೊಳ್ಳಬೇಕು. ಓದುವ ಹಾಗೂ ಬರೆಯುವ ವಿಷಯಗಳ ಬದಲಾವಣೆಯೂ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ ಎಂದು ಹೇಳಿದರು.
ಕೆ.ಇ.ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.ರಾಜಪೂರೋಹಿತ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್‍ಎಸ್‍ಎಲ್‍ಸಿ ಎಂಬುದು ಶೈಕ್ಷಣಿಕ ಬದುಕಿನ ಮೊದಲ ಮೆಟ್ಟಿಲು. ಭಕ್ತಿ, ಶ್ರದ್ಧೆ ಮತ್ತು ಹೃದಯದಿಂದ ಓದಬೇಕು. ಅಂದಾಗ ಮಾತ್ರ ಶಿಕ್ಷಣ ಒಲಿಯುತ್ತದೆ. ಓದುಬರಹವನ್ನು ಪ್ರೀತಿಸಿ, ಮೆಚ್ಚಿ ಮುನ್ನಡೆಯಿರಿ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಉಪಯೋಜನಾಧಿಕಾರಿ ಎಸ್.ಎಮ್.ಹುಡೆದಮನಿ, ಡೈಟ್ ಹಿರಿಯ ಉಪನ್ಯಾಸಕ ಎ.ಎ.ಖಾಜಿ, ಶಿಕ್ಷಣ ಅಧಿಕಾರಿ ನಾಫೀಸಾಬಾನು ದಾವಲಸಾಬನವರ ಸೇರಿದಂತೆ ಇತರರು ಇದ್ದರು.
ಕೆ.ಇ.ಬೋರ್ಡ ಸಂಸ್ಥೆಯ ಪಿಯು ಕಾಲೇಜ್ ಪ್ರಾಚಾರ್ಯ ಎನ್.ಎಸ್.ಗೋವಿಂದರಡ್ಡಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಸಹಾಯಕ ಸಮನ್ವಯ ಅಧಿಕಾರಿ ರೇಣುಕಾ ಅಮಲಜೇರಿ ವಂದಿಸಿದರು.
ಒಂದು ದಿನದ ಈ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಪ್ರತಿಭಾವಂತ 140 ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು ಭಾಗವಹಿಸಿದ್ದರು.




