ಎಸ್ಎಸ್ಎಲ್‌‌ಸಿ, ಪಿಯುಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸಕಲ ಸಿದ್ಧತೆ

1 year ago

ಎಸ್‌‌ಎಸ್‌‌ಎಲ್‌‌ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯಕ್ಕೆ ಪ್ರಥಮ, ಉತ್ತಮ ರ‌್ಯಾಂಕ್ ಗಳಿಸುವ ಗುರಿ: ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

ಹುಬ್ಬಳ್ಳಿ: ಎಸ್ಎಸ್ಎಲ್‌‌ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫಲಿತಾಂಶ ಸುಧಾರಣೆಗೆ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಎಸ್‌‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯು ರಾಜ್ಯಕ್ಕೆ ಮೊದಲ ರ‌್ಯಾಂಕ್ ಗಳಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 28,666 ವಿದ್ಯಾರ್ಥಿಗಳು ಎಸ್ಎಸ್ಎಲ್‌‌ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.  ಅಲ್ಲದೇ ಹೊಸದಾಗಿ ಬಾಹ್ಯ ಅಭ್ಯರ್ಥಿಯಾಗಿ 511 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 1,437 ವಿದ್ಯಾರ್ಥಿಗಳು ಪುನರಾವರ್ತಿತರಾಗಿದ್ದು, 135 ವಿದ್ಯಾರ್ಥಿಗಳು ಪುನರಾವರ್ತಿತ ಬಾಹ್ಯ ಅಭ್ಯರ್ಥಿಗಳಾಗಿದ್ದಾರೆ. ಒಟ್ಟಾರೆಯಾಗಿ 30,749 ವಿದ್ಯಾರ್ಥಿಗಳು ಎಸ್ಎಸ್ಎಲ್‌‌ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

ಜಿಲ್ಲೆಯಾದ್ಯಂತ ಒಟ್ಟು‌ 447 ಪ್ರೌಢಶಾಲೆಗಳಿವೆ. 106 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 21 ರಿಂದ ಏಪ್ರೀಲ್ 4 ರವರೆಗೆ ಎಸ್ಎಸ್ಎಲ್‌‌ಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಘೋಷಣೆ ಮಾಡಲಾಗುವುದು. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಅಂತರದಲ್ಲಿರುವ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗುವುದು. ಜಿಲ್ಲಾ ಹಂತದಲ್ಲಿ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಿ, ಪರೀಕ್ಷಾ ಕೇಂದ್ರಗಳ ಸುತ್ತಲೂ ಪೊಲೀಸರನ್ನು ನೇಮಕಗೊಳಿಸಲಾಗುತ್ತದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ, ಮಾಹಿತಿಗಳನ್ನು ಯಾರೂ ಕೂಡ ಪ್ರಕಟಿಸಬಾರದು. ಒಂದು ವೇಳೆ ಪ್ರಕಟಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಧಾರವಾಡ ಜಿಲ್ಲೆಯು ಎಸ್ಎಸ್ಎಲ್‌‌ಸಿ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆಯುವಲ್ಲಿ ಪ್ರಯತ್ನಿಸುತ್ತಿದೆ. 2019 ರಲ್ಲಿ 27 ನೇ ಸ್ಥಾನ, 2012 ಮತ್ತು 2022 ರಲ್ಲಿ ಬಿ ಗ್ರೇಡ್, 2023 ರಲ್ಲಿ 24 ನೇ ಸ್ಥಾನ ಹಾಗೂ 2024 ರಲ್ಲಿ 22 ನೇ ಸ್ಥಾನವನ್ನು ಪಡೆದುಕೊಂಡಿತು. ಹೀಗಾಗಿ ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯನ್ನು ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆಯುವ ಗುರಿ ಹೊಂದಲಾಗಿದೆ ಎಂದರು.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವೆಬ್‌‌ ಕಾಸ್ಟಿಂಗ್ ಪಾರದರ್ಶಕವಾಗಿ ಮತ್ತು ಸರಕಾರದ ಸೂಚನೆ, ಆದೇಶಗಳಂತೆ ಎಸ್ಎಸ್ಎಲ್‌‌ಸಿ ಪರೀಕ್ಷೆ ನಡೆಸುವಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಉಪನಿರ್ದೇಶಕರ ಕಚೇರಿಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ನಡೆಸಲಾಗುವುದು. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಸ್ಥಳೀಯ ನಿರೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.

ಮಿಷನ್ ವಿದ್ಯಾಕಾಶಿ ಯೋಜನೆಯಡಿ ಹಲವು ಕಾರ್ಯಕ್ರಮಗಳು: ಎಸ್ಎಸ್ಎಲ್‌‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಮಿಷನ್ ವಿದ್ಯಾಕಾಶಿ ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2024 ರ ಆಗಸ್ಟ್ ತಿಂಗಳಲ್ಲಿ ಬೇಸ್ ಲೈನ್ ಪರೀಕ್ಷೆ ಮಾಡಿ ಮಕ್ಕಳ ಕಲಿಕೆಯಲ್ಲಿ ಇರುವ ಕೊರತೆಗಳನ್ನು ಗುರುತಿಸಿ, ಕಲಿಕೆಯನ್ನು ಹೆಚ್ಚಿಸುವ ಚಟುವಟಿಕೆಗಳನ್ನು ನೀಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ 40 ಅಂಕದ ಪಾಸಿಂಗ್ ಪ್ಯಾಕೇಜ್ ನ್ನು ಕನ್ನಡ, ಇಂಗ್ಲೀಷ್ ಮತ್ತು ಉರ್ದು ಮಾಧ್ಯಮದಲ್ಲಿ ಒದಗಿಸಲಾಗಿತ್ತು. 2025 ರ ಜನವರಿಯಲ್ಲಿ ಪ್ರತಿ ದಿನ 10 ಅಂಕಕ್ಕೆ ಅಭ್ಯಾಸ ಹಾಳೆಗಳನ್ನು ನೀಡಿ ಕಲಿಕೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನಕ್ಕಾಗಿ ಜಿಲ್ಲಾ ಹಂತ ಹಾಗೂ ತಾಲೂಕು ಹಂತದಲ್ಲಿ ನುರಿತ ಅನುಭವಿ ಶಿಕ್ಷಕರು ಮತ್ತು ವಿಶೇಷ ಸಂಪನ್ಮೂಲ ಶಿಕ್ಷಕರ ಮೂಲಕ ಕಾರ್ಯಾಗಾರಗಳು ಮತ್ತು ಪರೀಕ್ಷೆಗಳನ್ನು ನಿರ್ವಹಿಸಲಾಗುತ್ತಿದೆ ಎಂದರು.

ಪ್ರತಿ ಭಾನುವಾರ ಪ್ರತಿ ತಾಲೂಕಿನಲ್ಲಿ ಕನಿಷ್ಠ 30 ರಿಂದ 50 ಮಕ್ಕಳಿಗೆ ವಿಶೇಷ ಮಾರ್ಗದರ್ಶನ ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಪ್ರತಿ ತಾಲೂಕಿನಿಂದ ವಿವಿಧ ಪರೀಕ್ಷೆಗಳ ಸಾಧನೆಯ ಮಟ್ಟವನ್ನು ಗುರುತಿಸಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಸಾಮರ್ಥ್ಯವನ್ನು ಹೊಂದಿದ 20 ಮಕ್ಕಳಿಗೆ ಸಂವಾದ ಕಾರ್ಯಾಗಾರವನ್ನು ಆಯೋಜಿಸಿದೆ. ನಿರಂತರ ಗೈರು ಮತ್ತು ಅನಿಯಮಿತ ಹಾಜರಾತಿ ಹೊಂದಿದ ವಿದ್ಯಾರ್ಥಿಗಳು ಮತ್ತು ಪಾಲಕರ ಮನವೊಲಿಸಿ ಮುಖ್ಯವಾಹಿನಿಗೆ ತರಲು ಪೋಷಕರ ಸಭೆಗಳು ಮತ್ತು ಹಾಜರಾತಿ ಆಂದೋಲನ ಮಾಡಲಾಎ. ಶಾಲೆಗೆ ನಿರಂತರ ಗೈರಾಗಿದ್ದ  ಮಕ್ಕಳ ಪೈಕಿ, ವಿಶೇಷ ಹಾಜರಾತಿಯ ಆಂದೋಲನ ಮೂಲಕ 429 ಮಕ್ಕಳು ಮುಖ್ಯವಾಹಿನಿಗೆ ಬಂದಿರುತ್ತಾರೆ. ಪಾಲಕರ ಮತ್ತು ಎಸ್.ಡಿ.ಎಮ್.ಸಿ ಸಭೆಗಳು ಹಾಗೂ  ಕಾರ್ಯಾಗಾರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮಹತ್ವ ಮತ್ತು ಮಕ್ಕಳ ಕಲಿಕೆಗೆ ಅವರು ನೀಡಬೇಕಾದ ಬೆಂಬಲ ಹಾಗೂ ಜಿಲ್ಲಾಡಳಿತ ನೀಡುವ ಬೆಂಬಲ ಬಗ್ಗೆ ಮಾಹಿತಿ ಒದಗಿಸಲಾಗಿದೆ. 10 ನೇ ತರಗತಿ ಬೋಧನೆ ಮಾಡುತ್ತಿರುವ ಜಿಲ್ಲೆಯ ಎಲ್ಲ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಹಾಕಿಕೊಂಡ ಕಾರ್ಯಕ್ರಮಗಳ ಬಗ್ಗೆ ತರಗತಿ ನಿರ್ವಹಣೆ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲಿನ ಕಾಳಜಿಯ ಕುರಿತು 2100 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದರು.

ಮಿಷನ್ ವಿದ್ಯಾ ಕಾಶಿಗೆ ವಿವಿಧ ಸಂಸ್ಥೆಗಳು, ಇಲಾಖೆಗಳು, ಶಿಕ್ಷಣ ತಜ್ಞರು, ಸಂಪನ್ಮೂಲ ಶಿಕ್ಷಕರು ಸಹಕರಿಸಿದ್ದಾರೆ‌. ಮುಂದಿನ ವರ್ಷಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕಾರ್ಯಚಟುವಟಿಕೆಗಳನ್ನು ಮಿಷನ್ ವಿದ್ಯಾಕಾಶಿ-2 ಯೋಜನೆಯನ್ನು ಆರಂಭಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್: ಕಲಿಕೆಯಲ್ಲಿ ಪ್ರಗತಿ ಹೊಂದಿದ ಮತ್ತು‌ ಪ್ರತಿಭಾವಂತ ಮಕ್ಕಳಿಗೆ ಡಿಸೆಂಬರ್ 15 ರಿಂದ ಫೆಬ್ರವರಿ 15 ರವರೆಗೆ ಪ್ರತಿ ದಿನ ಘಟಕಗಳನ್ನು ದೃಢೀಕರಿಸಲು 25 ಅಂಕದ ರೂಢಿ ಪರೀಕ್ಷೆಗಳನ್ನು ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಬೇಸ್ ಲೈನ್ ನಲ್ಲಿ ಗುರುತಿಸಿದಂತೆ 6,259 ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಹಾಗೂ ಅಭ್ಯಾಸ ಹಾಳೆಗಳನ್ನು ಮತ್ತು ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಜುಲೈ,  ಆಗಸ್ಟ್ ದಲ್ಲಿ 10 ನೇ ತರಗತಿಯಲ್ಲಿ ಕಲಿಕೆಯಲ್ಲಿ (ಓದು ಬರಹದಲ್ಲಿ)ಹಿಂದುಳಿದ 7,273 ವಿದ್ಯಾರ್ಥಿಗಳಿದ್ದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಿಶೇಷ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಓದು, ಶುದ್ಧ ಬರಹ, ಸುಲಭ ಲೆಕ್ಕಾಚಾರ ಹಾಗೂ ಅಭ್ಯಾಸ ಹಾಳೆಗಳ ಮೂಲಕ ರೂಢಿ ಮಾಡಿಸಲಾಗಿದೆ. ಜನೇವರಿ ಅಂತ್ಯಕ್ಕೆ  ಸಾಕಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದುವರಿದಿದ್ದಾರೆ ಎಂದರು.

ಪಿಯುಸಿ ಪರೀಕ್ಷೆಗೆ 27,830 ವಿದ್ಯಾರ್ಥಿಗಳಿಂದ ನೋಂದಣಿ: ಮಾರ್ಚ್ 1 ರಿಂದ 20 ರವರೆಗೆ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯ 27,830 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 13,100 ಪುರುಷ ವಿದ್ಯಾರ್ಥಿಗಳು ಹಾಗೂ 14,730 ಮಹಿಳಾ ವಿದ್ಯಾರ್ಥಿನಿಯರಿದ್ದಾರೆ. ಕಲಾ ವಿಭಾಗದಲ್ಲಿ 5,413, ವಾಣಿಜ್ಯ ವಿಭಾಗದಿಂದ 8,464 ಮತ್ತು ವಿಜ್ಞಾನ ವಿಭಾಗದಿಂದ 13,958 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 173 ಕಾಲೇಜುಗಳಿದ್ದು, 41 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ‌‌. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಪರೀಕ್ಷೆಯ ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು ಉತ್ತರ ಪತ್ರಿಕೆ ವಾಲಕರು ಹಾಗೂ ಸ್ಥಾನಿಕ ಜಾಗೃತ ದಳ, ತಾಲೂಕ ಜಾಗೃತ ದಳ ಮತ್ತು ಜಿಲ್ಲಾ ಜಾಗೃತ ದಳ ಸದಸ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ‌. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆ.  ಜಿಲ್ಲೆಯಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಯಾವುದು ಇರುವುದಿಲ್ಲ.‌ ಹೆಸ್ಕಾಂ ಅಧಿಕಾರಿಗಳಿಗೆ ಪರೀಕ್ಷಾ ದಿನದಂದು ತಡೆರಹಿತ ವಿದ್ಯುತ್ ಪೂರೈಸಲು ಸೂಚಿಸಲಾಗಿದೆ. ಪರೀಕ್ಷೆಗಳು ಮುಕ್ತಾಯವಾದ ನಂತರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಕೇಂದ್ರಗಳಿಗೆ ಅಂಚೆ ಮುಖಾಂತರ ರವಾನಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಖಜಾನೆ ಅಧಿಕಾರಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಠೇವಣಿ ಇರಿಸಲು ಹಾಗೂ ಪರೀಕ್ಷಾ ದಿನಗಳಂದು ನಿಗದಿತ ಸಮಯದಲ್ಲಿ ಮಾರ್ಗಾಧಿಕಾರಿಗಳಿಗೆ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮಾರ್ಗಾಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಪ್ರಶ್ನೆ ಪ್ರತಿಕೆಗಳನ್ನು ಸ್ವೀಕರಿಸಲು ಹಾಗೂ ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಖಜಾನೆ, ಧಾರವಾಡ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಮಟ್ಟದ ತ್ರಿ ಸದಸ್ಯ ಸಮಿತಿಯನ್ನು ರಚಿಸಲಾಗಿದೆ.  ಜಿಲ್ಲೆಯಲ್ಲಿ ಒಟ್ಟು 15 ಮಾರ್ಗಗಳನ್ನು ಗುರುತಿಸಿ ಪ್ರತಿ ಮಾರ್ಗಕ್ಕೆ 3 ಜನ ಅಧಿಕಾರಿಗಳ ಸದಸ್ಯ ಸಮಿತಿಯ ತಂಡ ರಚಿಸಿ, 45 ಅಧಿಕಾರಿಗಳನ್ನು ಮಾರ್ಗಾಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳ, ತಾಲೂಕ ಜಾಗೃತ ದಳ ಹಾಗೂ ಜಿಲ್ಲಾ ಜಾಗೃತ ದಳಗಳನ್ನು ನೇಮಕ ಮಾಡುತ್ತಾರೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ‌. ಜಿಲ್ಲಾ ಪಂಚಾಯತ ಧಾರವಾಡ ಕಚೇರಿಯಲ್ಲಿ ಪರೀಕ್ಷಾ ಕೇಂದ್ರಗಳ ಘಟನಾವಳಿಗಳನ್ನು ವೀಕ್ಷಿಸಲು ಲೈವ್ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲಾ ಖಜಾನೆಯಲ್ಲಿ ಭದ್ರ ಪಡಿಸಲಾಗುವ ಗೌಪ್ಯ ಸಾಮಗ್ರಿಗಳ ವೀಕ್ಷಣೆಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಿ.ಸಿ.ಟಿ.ವಿ ರೂಂ ಸ್ಥಾಪಿಸಲಾಗಿದೆ. ಇದನ್ನು 24*7 ವೀಕ್ಷಣೆಗಾಗಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪಿಯುಸಿ ಪರಿಕ್ಷೆಗಳ ಕುರಿತಂತೆ ಭಯ, ಆತಂಕ ಮತ್ತು ಅನುಮಾನಗಳ ನಿವಾರಣೆಗಾಗಿ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ನಿಯಮಾನುಸಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಿಶನ್ ವಿದ್ಯಾಕಾಶಿ ಯೋಜನೆಯಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ, ಡಿಸಿಪಿ ಮಹಾನಿಂಗ ನಂದಗಾವಿ‌, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುರೇಶ ಕೆ.ಪಿ., ಡಿಡಿಪಿಐ ಎಸ್.ಎಸ್.ಕೆಳದಿಮಠ ಮೊದಲಾದವರು ಉಪಸ್ಥಿತರಿದ್ದರು.

Leave a Reply