ಕೃಷಿ ಕ್ಷೇತ್ರದ ಘನತೆ ಮರುಸ್ಥಾಪಿಸಲು ರಾಷ್ಟ್ರ ಮಟ್ಟದ ಬ್ರ್ಯಾಂಡಿಂಗ್ ಮತ್ತು ಜಾಹೀರಾತು ಸ್ಪರ್ಧೆ
ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ‘ಕೃಷಿ ಸ್ವರಾಜ್ 2026’
• ಭಾರತದ ಮೊದಲ ಕೃಷಿ-ಕೇಂದ್ರಿತ ಬ್ರ್ಯಾಂಡಿಂಗ್ ಸ್ಪರ್ಧೆ
• ಕೃಷಿಯನ್ನು ಯುವಜನರು ಹೆಮ್ಮೆಯಿಂದ ಆರಿಸಿಕೊಳ್ಳುವ ವೃತ್ತಿಯನ್ನಾಗಿ ಮಾಡುವ ಗುರಿ
• ಪ್ರಮುಖ ಜಾಹೀರಾತುದಾರರು, ವಿನ್ಯಾಸಕರು ಮತ್ತು ಕಥೆಗಾರರಿಗೆ ಸೃಜನಶೀಲ ಸವಾಲು
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಪುಟ್ಟಣ್ಣಯ್ಯ ಫೌಂಡೇಶನ್, ಭಾರತದಲ್ಲಿ ಕೃಷಿ ಕ್ಷೇತ್ರದ ಮೇಲಿರುವ ಸಾಮಾಜಿಕ ದೃಷ್ಟಿಕೋನವನ್ನು ಬದಲಿಸುವ ಮಹತ್ತರ ಉದ್ದೇಶದೊಂದಿಗೆ “ಕೃಷಿ ಸ್ವರಾಜ್ 2026” (ರೈತನಿಂದ ಕಟ್ಟಿದ ಭಾರತದ ಹೊಸ ಕಥೆ) ಎಂಬ ವಿಶಿಷ್ಟ ರಾಷ್ಟ್ರ ಮಟ್ಟದ ಬ್ರ್ಯಾಂಡಿಂಗ್ ಮತ್ತು ಜಾಹೀರಾತು ಸ್ಪರ್ಧೆಯನ್ನು ಘೋಷಿಸಿದೆ. ಇದು ಕೃಷಿ ವೃತ್ತಿಯನ್ನು ಬದಲಿಸುವುದಲ್ಲ, ಬದಲಾಗಿ ಭಾರತ ಕೃಷಿಯನ್ನು ನೋಡುವ ವಿಧಾನವನ್ನು ಬದಲಿಸುವ ಒಂದು ಅಭಿಯಾನವಾಗಿದೆ.
ಹಿನ್ನೆಲೆ ಮತ್ತು ಅಗತ್ಯ: ಭಾರತದಲ್ಲಿ ಕೃಷಿಯು 1.4 ಶತಕೋಟಿ ಜನರಿಗೆ ಪ್ರತಿದಿನ ಆಹಾರ ಒದಗಿಸುತ್ತದೆ. ಆದಾಗ್ಯೂ, ಜಾಹೀರಾತು ಮತ್ತು ಸಾಂಸ್ಕೃತಿಕ ಕಥೆಗಳು ಸಾಫ್ಟ್‌ವೇರ್ ಎಂಜಿನಿಯರಿಂಗ್, ವೈದ್ಯಕೀಯ ಅಥವಾ ಸ್ಟಾರ್ಟ್‌ಅಪ್‌ಗಳಂತಹ ವೃತ್ತಿಗಳನ್ನು ಆಕರ್ಷಕವಾಗಿ ಬಿಂಬಿಸಿದಂತೆ ಕೃಷಿಯನ್ನು ಬಿಂಬಿಸಿಲ್ಲ. ಇದರ ಪರಿಣಾಮದಿಂದಾಗಿ, ಕೃಷಿ ಕೇವಲ ಸಂಕಷ್ಟದ ವೃತ್ತಿಯಾಗಿ ದಶಕಗಳಿಂದ ಚಿತ್ರಿಸಲ್ಪಟ್ಟಿದೆ. ಕೃಷಿ ಭೂಮಿ ಫಲವತ್ತತೆ ಕಳೆದುಕೊಂಡಿರುವುದಕ್ಕಲ್ಲ, ಬದಲಾಗಿ ಕೃಷಿಯ ಕಥೆಯು ಸ್ಪೂರ್ತಿದಾಯಕವಾಗಿ ಉಳಿಯದ ಕಾರಣ ಭಾರತದಲ್ಲಿ ಪ್ರತಿದಿನ 3,000 ರೈತರು ಕೃಷಿ ವೃತ್ತಿಯನ್ನು ತೊರೆಯುತ್ತಿದ್ದಾರೆ.
ಯುವಜನರು ಕೃಷಿಯಿಂದ ದೂರ ಸರಿಯಲು ಪ್ರಮುಖ ಕಾರಣ ಕಡಿಮೆ ಗೌರವ, ಕಡಿಮೆ ಆಕರ್ಷಣೆ ಮತ್ತು ಕಡಿಮೆ ಪ್ರತಿಫಲ ಎಂಬ ತಪ್ಪು ಕಲ್ಪನೆಗಳಾಗಿವೆ. ಪೋಷಕರು ತಮ್ಮ ಮಕ್ಕಳು ರೈತರಾಗುವುದನ್ನು ಬಯಸುವುದಿಲ್ಲ, ಇಂದು ರೈತರಿಗೆ ಮದುವೆಗೆ ಹೆಣ್ಣು ಸಿಗದ ಮಟ್ಟಕ್ಕೆ ದೇಶ ತಲುಪಿದೆ.
ಕೃಷಿ ಸ್ವರಾಜ್ 2026ರ ಉದ್ದೇಶ: ಈ ಸವಾಲು ಕೃಷಿಗೆ ಅದರ ಕಳೆದುಹೋದ ಘನತೆಯನ್ನು ಮರುಸ್ಥಾಪಿಸುವ ಸಾಂಸ್ಕೃತಿಕ ದುರಸ್ತಿಯ ರಾಷ್ಟ್ರೀಯ ಕಾರ್ಯವಾಗಿದೆ. ಭಾರತದ ಅತ್ಯುತ್ತಮ ಜಾಹೀರಾತುದಾರರು, ವಿನ್ಯಾಸಕರು ಮತ್ತು ಕಥೆಗಾರರನ್ನು ಈ ಅಭಿಯಾನದ ಭಾಗವಾಗಲು ಆಹ್ವಾನಿಸಲಾಗಿದೆ. ಕೃಷಿಯನ್ನು ಮಹತ್ವಾಕಾಂಕ್ಷೆಯ, ಗೌರವಾನ್ವಿತ ಮತ್ತು ಮೆಚ್ಚುಗೆಯ ವೃತ್ತಿಯನ್ನಾಗಿ ಬಿಂಬಿಸುವುದು ಇದರ ಮುಖ್ಯ ಗುರಿಯಾಗಿದೆ.

ಸ್ಪರ್ಧೆಯ ಸ್ವರೂಪ: ಈ ಸ್ಪರ್ಧೆಯು ನಾಲ್ಕು ಪ್ರಮುಖ ಹಂತಗಳಲ್ಲಿ (Tracks) ನಡೆಯಲಿದೆ:
1. ನಿರೂಪಣೆಯನ್ನು ಬದಲಿಸಿ: ಇತರ ವೃತ್ತಿಗಳಂತೆ ಕೃಷಿಯ ಬಗ್ಗೆಯೂ ಹೆಮ್ಮೆ ಮೂಡಿಸುವ ಒಂದು ಸಾಕ್ಷ್ಯಚಿತ್ರ ತಯಾರಿಸುವುದು.
2. ಶಾಲೆಗಳಲ್ಲಿ ಕೃಷಿ ಜಾಗೃತಿ: 12 ವರ್ಷದ ಮಗುವಿಗೆ ಕೃಷಿಯನ್ನು ಉತ್ತೇಜಕವಾಗಿ ಮಾಡುವುದು ಮತ್ತು ಕೃಷಿ ಉದ್ಯಮಿಗಳಾಗುವ ಕನಸು ಕಾಣುವಂತೆ ಮಾಡುವುದು.
3. ಸಮಾಜದ ಮನಸ್ಥಿತಿ ಬದಲಿಸಿ: ರೈತನನ್ನು ವೈದ್ಯರು, ಎಂಜಿನಿಯರ್‌ಗಳಷ್ಟೇ ಗೌರವದಿಂದ ಕಾಣುವಂತೆ ಮಾಡುವುದು ಮತ್ತು ಸಾಮಾಜಿಕ ಗ್ರಹಿಕೆಗಳನ್ನು ಬದಲಾವಣೆ ಮಾಡುವುದು.
4. ಗ್ರಾಮಗಳಿಗೆ ಪ್ರತಿಭೆಯನ್ನು ಮರಳಿ ತನ್ನಿ: ಕೃಷಿ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಆಕರ್ಷಕವಾಗಿಸುವ ಮೂಲಕ ನಗರಗಳಿಗೆ ವಲಸೆ ಹೋದ ಯುವಕರನ್ನು ಮರಳಿ ತರುವುದು.
ಹಂತಗಳು: ಅರ್ಜಿ ಸಲ್ಲಿಸಿದವರಲ್ಲಿ ಆಯ್ದ ತಂಡಗಳಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಐಆರ್‌ಎಲ್ (IRL) ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು. ತಂಡಗಳಿಗೆ ತಮ್ಮ ಸೃಜನಶೀಲ ಕೆಲಸಗಳನ್ನು (ಚಲನಚಿತ್ರಗಳು, ಬ್ರ್ಯಾಂಡ್ ಗುರುತುಗಳು, ಅಭಿಯಾನಗಳು ಇತ್ಯಾದಿ) ರೂಪಿಸಲು 25 ದಿನಗಳ ಕಾಲಾವಕಾಶವಿರುತ್ತದೆ. ಮಧ್ಯಂತರದಲ್ಲಿ ಆನ್‌ಲೈನ್ ಈವೆಂಟ್ ಮೂಲಕ ದರ್ಶನ್ ಪುತ್ತಣ್ಣಯ್ಯ ಅವರಿಗೆ ಪ್ರಗತಿಯನ್ನು ಪ್ರಸ್ತುತಪಡಿಸಬೇಕು. ಅಂತಿಮ ಪ್ರಸ್ತುತಿ ಪಾಂಡವಪುರದಲ್ಲಿ ನಡೆಯಲಿದ್ದು, ವಿಜೇತರನ್ನು ವೇದಿಕೆಯಲ್ಲಿ ಘೋಷಿಸಲಾಗುವುದು.
ದೀರ್ಘಕಾಲೀನ ಪರಿಣಾಮ ಮತ್ತು ಭವಿಷ್ಯದ ಉಪಕ್ರಮಗಳು: ಇದು ಕೇವಲ ಒಂದು ಬಾರಿಯ ಆಚರಣೆಯಲ್ಲ, ಇದೊಂದು ಚಳುವಳಿಯಾಗಿದೆ. ಸ್ಪರ್ಧೆಯ ನಂತರ, ಪುಟ್ಟಣ್ಣಯ್ಯ ಫೌಂಡೇಶನ್ ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ:
• ಕರ್ನಾಟಕದ ಕೃಷಿ ಮುಖಗಳು: ಯುವ, ಮಹಿಳಾ ಮತ್ತು ನವೀನ ರೈತ ಕುಟುಂಬಗಳ ಕಥೆಗಳನ್ನು ದಾಖಲಿಸುವುದು.
• ಬೇರುಗಳಿಗೆ ಮರಳಿ: ವಲಸೆ ಹೋದ ಯುವಕರಿಗೆ ಗ್ರಾಮೀಣ ಉದ್ಯಮಶೀಲತೆಯ ಮಾರ್ಗಗಳನ್ನು ಅನ್ವೇಷಿಸುವುದು.
• ಭವಿಷ್ಯದ ರೈತ ಕ್ಲಬ್‌ಗಳು: ಶಾಲೆಗಳಲ್ಲಿ ಕೃಷಿ-ಕೇಂದ್ರಿತ ಕ್ಲಬ್‌ಗಳನ್ನು ಪ್ರಾರಂಭಿಸುವುದು ಮತ್ತು ತೋಟಗಳಿಗೆ ಭೇಟಿಗಳನ್ನು ಆಯೋಜಿಸುವುದು.
• ಕೃಷಿ ಹೆಮ್ಮೆಯ ಅಭಿಯಾನ: ಕೃಷಿಯ ಬಗೆಗಿನ ಸ್ಟೀರಿಯೊಟೈಪ್‌ಗಳನ್ನು ಬಯಲು ಮಾಡುವ ಸಾರ್ವಜನಿಕ ಅಭಿಯಾನಗಳನ್ನು ಅಭಿವೃದ್ಧಿಪಡಿಸುವುದು.
ಕೃಷಿ ಸ್ವರಾಜ್ 2026 ಮೂಲಕ, ವಿದ್ಯಾರ್ಥಿಗಳು ಕೃಷಿಯನ್ನು ವೃತ್ತಿ ಆಯ್ಕೆಯಾಗಿ ಪರಿಗಣಿಸುವಂತೆ, ಪೋಷಕರು ಇದನ್ನು ಗೌರವಾನ್ವಿತ ವೃತ್ತಿಯಾಗಿ ನೋಡುವಂತೆ ಮತ್ತು ಕೃಷಿಯು ಉದ್ಯಮಶೀಲತೆ, ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದ ಭಾಗವಾಗಿ ಗುರುತಿಸಲ್ಪಡುವಂತೆ ಮಾಡುವುದು ಪುಟ್ಟಣ್ಣಯ್ಯ ಫೌಂಡೇಶನ್‌ನ ಆಶಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7349553037
ಇಮೇಯ್ಲ್: ec@puttannaiah.org ವೆಬ್ಸೈಟ್: https://puttannaiah.org/krishi-swaraj/




