ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಬಿಜೆಪಿ ಪಾದಯಾತ್ರೆ

2 years ago

ಬಿಜೆಪಿ ಮತ್ತು ಜೆಡಿಎಸ್ ನವರು ಆಗಸ್ಟ್ ಮೂರರಿಂದ ಬೆಂಗಳೂರಿನಿಂದ ಮೈಸೂರಿನ ತನಕ ಪಾದಯಾತ್ರೆ ನಡೆಸಲು ಉದ್ದೇಶಿಸಿರುವುದು 2008ರಿಂದ 2013ರ ತನಕ ಮತ್ತು 2019 ರಿಂದ 2023ರ ತನಕ ಅಧಿಕಾರ ನಡೆಸಿದಂತಹ ಬಿಜೆಪಿ ಸರ್ಕಾರದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಪಾದಯಾತ್ರೆಯಾಗಿದೆ.

ಇವರ ಪಕ್ಷದವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದಂತಹ ಹಗರಣಗಳ ಸಂಖ್ಯೆ ಲೆಕ್ಕವಿಲ್ಲ‌. ಇವುಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆದಂತಹ ನಷ್ಟ ಹೇಳುತ್ತಿರುವುದು. ಇನ್ನು ಇವರುಗಳು ದೋಚಿರುವ ಹಣದ ಲೆಕ್ಕ ಇಲ್ಲಿಯ ತನಕ ಸಿಕ್ಕಿರುವುದಿಲ್ಲ. ಭ್ರಷ್ಟಾಚಾರ ಇವರ ಕಾಲದಲ್ಲಿ ಮುಗಿಲು ಮುಟ್ಟಿತ್ತು. ಗಣಿ ಹಗರಣದಿಂದ ಹಿಡಿದು 40% ಕಮಿಷನ್ ಹಗರಣದ ತನಕ, ಬಿಟ್ ಕಾಯಿನ್ ಹಗರಣ ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೊಡ್ಡ ದೊಡ್ಡ ಪ್ರಕರಣಗಳು ಈ ಕಾಲದಲ್ಲಿ ನಡೆದಿವೆ. ಆದರೂ ಸಹ ಅತ್ಯಂತ ಪ್ರಾಮಾಣಿಕರು ಶುದ್ಧಹಸ್ತರು ಎಂಬ ರೀತಿಯಲ್ಲಿ ತಮ್ಮನ್ನು ತಾವೇ ಘೋಷಿಸಿಕೊಂಡು ಪಾದಯಾತ್ರೆ ಹೊರಟಿರುವುದು ಇವರಿಗೆ ನಾಚಿಕೆಯನ್ನು ತರಿಸಬೇಕಿದೆ.

ಸಿಎಂ ಸಿದ್ದರಾಮಯ್ಯನವರು ಮುಡಾ ಪ್ರಕರಣದಲ್ಲಿ ಪ್ರತಿಯೊಂದು ವಿಚಾರಕ್ಕೂ ಸ್ಪಷ್ಟೀಕರಣವನ್ನು ಕೊಟ್ಟು ಅಗತ್ಯವಾದ ದಾಖಲೆಗಳನ್ನು ಬಿಡುಗಡೆ ಮಾಡಿರುತ್ತಾರೆ. ಯಾವುದೇ ರೀತಿಯಲ್ಲೂ ಅನ್ಯಾಯ ನಡೆದಿಲ್ಲ, ಅಕ್ರಮವೂ ಆಗಿಲ್ಲ. ಹೀಗಿದ್ದ ಮೇಲೆ ಈ ಪ್ರಕರಣವನ್ನು ಹಿಡಿದುಕೊಂಡು ಪಾದಯಾತ್ರೆ ಮಾಡುವುದು ಯಾವ ಪುರುಷಾರ್ಥಕ್ಕಾಗಿ?

ಪಾದಯಾತ್ರೆ ಮಾಡಬೇಕಿರುವುದು ಕೇಂದ್ರ ಸರಕಾರದ ವಿರುದ್ಧ ಮತ್ತು ಅವರ ಧೋರಣೆಗಳ ವಿರುದ್ಧ. ರಾಜ್ಯ ಸರ್ಕಾರಕ್ಕೆ ನ್ಯಾಯಸಮ್ಮತವಾಗಿ ಬರಬೇಕಾದಂತಹ ಪಾಲನ್ನು ಕೊಡದೆ, ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರದ ವಿರುದ್ಧ ನಿಮ್ಮ ಪಾದಯಾತ್ರೆ ನಡೆಯಲಿ.

ಬರಗಾಲದ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಸ್ಪಂದನೆಯನ್ನು ಮಾಡದೆ ಅಂತಿಮವಾಗಿ ನ್ಯಾಯಾಲಯದ ಆದೇಶಕ್ಕೆ ತಲೆವಾಗಿ ಒಂದಷ್ಟು ಪರಿಹಾರವನ್ನು ನೀಡಿದ ಕೇಂದ್ರ ಸರ್ಕಾರದ ವಿರುದ್ಧ ನಿಮ್ಮ ಪಾದಯಾತ್ರೆಯಾಗಲಿ.

ರಾಜ್ಯ ಸರ್ಕಾರದ ಅನೇಕ ನೀರಾವರಿ ಯೋಜನೆಗಳಿಗೆ ನಯಾ ಪೈಸೆಯನ್ನು ಬಿಡುಗಡೆ ಮಾಡದ ಮತ್ತು ರಾಜ್ಯಕ್ಕೆ ಮುಂಗಡಪತ್ರದಲ್ಲಿ ಯಾವುದೇ ರೀತಿಯ ಯೋಜನೆಗಳನ್ನು ಘೋಷಣೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ನಡೆಯಲಿ ನಿಮ್ಮ ಪಾದಯಾತ್ರೆ.

ಎಷ್ಟೇ ಪಾದಯಾತ್ರೆ ಮಾಡಿದರು, ಎಷ್ಟೇ ಅಬ್ಬರಿಸಿದರು ಬಿಜೆಪಿ ನಾಯಕರ ಭ್ರಷ್ಟಾಚಾರದ ವಿಚಾರಗಳು ರಾಜ್ಯದ ಜನರಿಗೆ ಚೆನ್ನಾಗಿ ತಿಳಿದಿದೆ. ಯಾವ ಯಾವ ನಾಯಕರು ಯಾವ ಯಾವ ದೇಶದಲ್ಲಿ ಎಷ್ಟು ಹಣವನ್ನು ಇಟ್ಟಿದ್ದಾರೆ? ಯಾವ ಯಾವ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶಗಳನ್ನು ಎಷ್ಟೆಷ್ಟು ಪಡೆದಿದ್ದಾರೆ ಎಂಬ ಲೆಕ್ಕವೂ ಮುಂದಿನ ದಿನಗಳಲ್ಲಿ ಜನರಿಗೆ ದೊರೆಯಲಿದೆ.

ಸಿದ್ದರಾಮಯ್ಯನವರ ಜನಪ್ರಿಯತೆ ಮತ್ತು ದಕ್ಷವಾದಂತ ಆಡಳಿತ ವೈಖರಿಯಿಂದ ಹತಾಶಗೊಂಡಿರುವ ಬಿಜೆಪಿ ಮತ್ತು ಅದರ ದೋಸ್ತಿ ಪಕ್ಷಗಳು ಹೊಟ್ಟೆಕಿಚ್ಚಿನಿಂದ ಸಿದ್ದರಾಮಯ್ಯನವರ ವಿರುದ್ಧ ಪಾದಯಾತ್ರೆಯನ್ನು ಮಾಡಿ ಅವರ ವರ್ಚಸ್ಸಿಗೆ ಮಸಿ ಬಳಿಯುವಂತಹ ಹುನ್ನಾರವನ್ನ ನಡೆಸುತ್ತಿವೆ. ರಾಜ್ಯದ ಜನರಿಗೆ ಸಿದ್ದರಾಮಯ್ಯನವರ  ವ್ಯಕ್ತಿತ್ವ ಮತ್ತು ವಿಚಾರ ತಿಳಿದಿದೆ.

ಎಷ್ಟೇ ಸುಳ್ಳು ಹೇಳಿದರು ಏನೇ ಅಪಪ್ರಚಾರ ಮಾಡಿದರು, ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ನಿಮ್ಮಿಂದ ಸಣ್ಣ ಪ್ರಮಾಣದಲ್ಲೂ ಸಹ ಮಸಿ ಬಳಿಯಲು ಸಾಧ್ಯವಿಲ್ಲ. ನೀವು ಪಾದಯಾತ್ರೆ ಹೋಗುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿರುವಂತೆ ದಿನಕ್ಕೊಂದು ಹಗರಣದ ವಿಚಾರವನ್ನು ಬಯಲು ಮಾಡಿ ಸಾರ್ವಜನಿಕರೇ ನಿಮ್ಮನ್ನು ತಿರಸ್ಕರಿಸುವಂತೆ ಮಾಡಿ ನಿಮ್ಮ ಉದ್ದೇಶವನ್ನು ವಿಫಲಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೋರಾಟಗಳು ಮತ್ತು ಪಾದಯಾತ್ರೆಗಳು ನಡೆಯುವ ಸಂದರ್ಭದಲ್ಲಿ ಸಂಘಟಕರು ಮತ್ತು ನಾಯಕರು ಎನಿಸಿಕೊಂಡವರು ಆ ವಿಚಾರಗಳ ಮಹತ್ವವನ್ನ ಅರಿತಿರಬೇಕು. ಇಲ್ಲದಿದ್ದರೆ ಬೆಟ್ಟವನ್ನು ಕಡಿದು ಇಲಿಯನ್ನು ಹಿಡಿದ ಸ್ಥಿತಿ ಬಿಜೆಪಿಯವರದಾಗುತ್ತದೆ.

ಕೋವಿಡ್ ಸಂದರ್ಭದಲ್ಲಿನ ಭ್ರಷ್ಟಾಚಾರ ಒಂದೇ ಒಂದು ಸಾಕು ಬಿಜೆಪಿಯವರ ಮನಸ್ಥಿತಿಯನ್ನ ಮತ್ತು ಹಣದ ದಾಹವನ್ನ ತಿಳಿದುಕೊಳ್ಳಲು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply