ಸೌಜನ್ಯ ವಿಚಾರಕ್ಕೆ ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಅರ್ಧ ಬಲವನ್ನೇ ಮುರಿಯಲಾಯಿತು

1 year ago

ಸೌಜನ್ಯ ವಿಚಾರಕ್ಕೆ ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಅರ್ಧ ಬಲವನ್ನೇ ಮುರಿಯಲಾಯಿತು. ಆದರೆ…

ಧರ್ಮಸ್ಥಳದ ಸೌಜನ್ಯ ಗೌಡ ಎನ್ನುವ ಹದಿಹರೆಯದ ಯುವತಿಯ ಮೇಲೆ ನಡೆದ ದಾರುಣ ಅತ್ಯಾಚಾರ ಹಾಗೂ ಕೊಲೆಯ ಕುರಿತು ಮರುತನಿಖೆ ಆಗಬೇಕೆಂದು ಆಗ್ರಹಿಸಿ KRS ಪಕ್ಷವು 2023ರ ಆಗಸ್ಟ್ 26ರಿಂದ ಸೆಪ್ಟೆಂಬರ್ 8, 2023ರ ತನಕ, ಬೆಳ್ತಂಗಡಿಯಿಂದ ಆರಂಭಿಸಿ ಧರ್ಮಸ್ಥಳದ ಮೂಲಕ ಬೆಂಗಳೂರಿಗೆ ಮಾಡಿದ 350+ ಕಿಲೋಮೀಟರುಗಳ #ದೌರ್ಜನ್ಯವಿರುದ್ಧಸೌಜನ್ಯ ಪಾದಯಾತ್ರೆ ಬಹಳ ಜನರಿಗೆ ಗೊತ್ತಿದೆ. ಆಗ ನಮ್ಮ ಪಕ್ಷದ @krsparty ಎನ್ನುವ ಅಧಿಕೃತ Facebook ಪುಟದ ಮೂಲಕ ನಾವು ಆ ವಿಚಾರವಾಗಿ ದಾರಿಯುದ್ದಕ್ಕೂ ಮಾತನಾಡುತ್ತಾ, ಜಾಗೃತಿ ಮೂಡಿಸುತ್ತಾ ಬಂದೆವು. ನಾಲ್ಕು ಲಕ್ಷಕ್ಕಿಂತ ಅಧಿಕ followers ಇದ್ದ ಪುಟ ಅದು. ಈಗ ಅದಕ್ಕೇನಾಗಿದೆ?

ಆಗ ಹದಿನಾಲ್ಕು ದಿನಗಳ ಪಾದಯಾತ್ರೆಯ ಸಂದರ್ಭದಲ್ಲಿ ನಾನು ಹಗಲಿನಲ್ಲಿ ಮೌನವ್ರತ ಮಾಡುತ್ತಿದ್ದೆ. ಹಾಗಾಗಿ ನಮ್ಮ ಪಕ್ಷದ ಉಪಾಧ್ಯಕ್ಷರಾಗಿದ್ದ ಲಿಂಗೇಗೌಡ ಎಸ್.ಎಚ್.ರವರು ಸೌಜನ್ಯ ಗೌಡರ ಸಾವು ಮತ್ತು ಹನ್ನೆರಡು ವರ್ಷಗಳಾದರೂ ಇನ್ನೂ ಸಿಗದ ನ್ಯಾಯದ ಕುರಿತು ದಾರಿಯುದ್ದಕ್ಕೂ ಬಹಳ ಪರಿಣಾಮಕಾರಿಯಾಗಿ ಮಾತನಾಡುತ್ತಾ ಬಂದರು. ಅದೆಲ್ಲವೂ ನಮ್ಮ ಫೇಸ್ಬುಕ್ ಪುಟಗಳಲ್ಲಿ–ವಿಶೇಷವಾಗಿ Karnataka Rashtra Samithi ಪುಟದಲ್ಲಿ–ದಾಖಲಾಗುತ್ತಾ ಬಂತು.

ಪಾದಯಾತ್ರೆಯಲ್ಲಿ ಜನಬೆಂಬಲವೂ ಸುಮಾರಾಗಿ ಇತ್ತು. ಕೆಲವು ಕಡೆ ಪತ್ರಿಕೆಗಳೂ ವರದಿ ಮಾಡಿದವು. ಮಿಕ್ಕಂತೆ ರಾಜ್ಯದ ದೊಡ್ಡ ದೃಶ್ಯ ಮಾಧ್ಯಮ ಚಾನಲ್ಗಳು ಎಂದಿನಂತೆ ನಿರ್ಲಕ್ಷಿಸಿದವು. ಆದರೆ ನಮ್ಮ ಫೇಸ್ಬುಕ್ ಪುಟಗಳ ಮೂಲಕ ಆ ಹೋರಾಟ ರಾಜ್ಯದ ಲಕ್ಷಾಂತರ ಜನರನ್ನು ತಲುಪಿತು.

ಅದಾದ ಕೆಲವೇ ವಾರ/ತಿಂಗಳಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಕಡೆಯವರು ಕೋರ್ಟಿಗೆ ಹೋಗಿ ನಮ್ಮ ಫೇಸ್ಬುಕ್ ಪುಟ ಜನರಿಗೆ ಲಭ್ಯವಾಗದ ಹಾಗೆ ಮಾಡಿದರು. ಮುಂದಿನ ನಮ್ಮ ಅನೇಕ ಜನಪರ ಹೋರಾಟಗಳು ರಾಜ್ಯದ ಜನರಿಗೆ ಸರಿಯಾಗಿ ತಲುಪದೇ ಹೋದವು.

ಹಾಗೆಂದು ನಮ್ಮ ಹೋರಾಟಗಳೇನೂ ನಿಂತಿಲ್ಲ. ಎಲ್ಲಾ ಸಮಯದಲ್ಲಿ ನ್ಯಾಯ ಗೆಲ್ಲದೇ ಹೋಗಬಹುದು. ಆದರೆ ನಡೆದದ್ದು ಸುಳ್ಳಾದೀತೆ? ಪಾಪಕೃತ್ಯಗಳು ಪುಣ್ಯವಾಗುವವೇ? ಅಧರ್ಮವು ಧರ್ಮವಾಗುತ್ತದೆಯೇ?

ಆ ಪಾದಯಾತ್ರೆಯಲ್ಲಿ ಹೆಣ್ಣು ನಾಯಿಯೊಂದು ಧರ್ಮಸ್ಥಳದಿಂದ ನಮ್ಮನ್ನು ಹಿಂಬಾಲಿಸಿ ಬಂತು. ಓಡಿಸಿದರೂ ಅದು ಹೋಗುತ್ತಿರಲಿಲ್ಲ. ಹಾಗಾಗಿ #ಪ್ರಕೃತಿ ಎಂದು ಅದಕ್ಕೆ ಹೆಸರಿಟ್ಟು ಬೆಂಗಳೂರಿನ ತನಕ ಕರೆದುಕೊಂಡು ಬಂದೆವು. ಅದೊಂದು ವಿಶೇಷಪ್ರಾಕೃತಿಕ ಅಥವ ದೈವಿಕ ಘಟನೆ, ಅನುಭವ. ಈಗ ಪ್ರಕೃತಿ ತುಮಕೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂತೋಷವಾಗಿದ್ದಾಳೆ; ನ್ಯಾಯವನ್ನು ಎದುರು ನೋಡುತ್ತಿದ್ದಾಳೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

– ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

Leave a Reply