ಬಿಜೆಪಿ ತನ್ನ ನಾಲ್ಕು ವರ್ಷದ ಅವಧಿಯಲ್ಲಿ ಒಂದೇ ಒಂದು ಮನೆ ನೀಡಿರಲಿಲ್ಲ: ಸಿದ್ದರಾಮಯ್ಯ

11 months ago

ವಿಜಯನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ ಎರಡು ವರ್ಷಗಳಾಗಲಿದೆ. ಇದರ ಸಂಭ್ರಮಾಚರಣೆಯನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ‌ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಾಧನಾ ಸಮಾವೇಶ ಎಂದು ಹೆಸರಿಟ್ಟಿದ್ದು, ಇದರಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಹಲವು ಮಂತ್ರಿಗಳು ಮತ್ತು ಶಾಸಕರೊಂದಿಗೆ ಹೊಸಪೇಟೆಯ ಸಾಧನಾ ಸಮಾವೇಶದ ತಯಾರಿಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೇ 20ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ‌ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳುತ್ತದೆ. ಈ ಸಮಯದಲ್ಲಿ ರಾಜ್ಯದ ಹಲವು ತಾಂಡ ಮತ್ತು ಮಜರಾಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಣೆ ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರನ್ನು ತಲುಪಿದ್ದು ಅತೀವ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿಯವರು ಇವುಗಳ ಬಗ್ಗೆ ಅಪಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದರು.

ಮೂಲಭೂತ ಅರ್ಥಿಕತೆ ಬಗ್ಗೆ ಬಿಜೆಪಿಯವರಿಗೆ ಗೊತ್ತಿಲ್ಲ. ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಅವರು ಆರೋಪ ಮಾಡ್ತಿದ್ದಾರೆ. ಆದರೆ ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಎರಡು ವರ್ಷದಲ್ಲಿ 90 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಮೀಸಲಿಟ್ಟಿದ್ದೇವೆ, ಗ್ಯಾರಂಟಿ ಜೊತೆಗೆ ಅಭಿವೃದ್ಧಿಗೂ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದರು.

ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗಿದ್ದರೆ, ಬೊಕ್ಕಸದಲ್ಲಿ ಹಣ ಇಲ್ಲದೆ ಇದ್ದರೆ ಇಷ್ಟೆಲ್ಲ ಅಭಿವೃದ್ಧಿ ಸಾಧ್ಯವಾಗುತ್ತಿತ್ತೇ? ಈ ಬಾರಿ ಬಜೆಟ್ ಗಾತ್ರ 38 ಸಾವಿರ ಕೋಟಿಯಷ್ಟು ಹೆಚ್ಚಳವಾಗಿದ್ದು ಹೇಗೆ? ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕದ ಪ್ರದೇಶ ಅಭಿವೃದ್ಧಿ ಮಂಡಳಿಗೆ ಐದು ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇವೆ. ಚುನಾವಣೆ ವರ್ಷ ಇದೇ ಕೆಕೆಆರ್‌ಡಿಬಿಗೆ ಬೊಮ್ಮಾಯಿ ಅವರು ಮೂರು ಸಾವಿರ ಕೋಟಿ ನೀಡುವ ಘೋಷಣೆ ಮಾಡಿದರೇ ಹೊರತು ಬಿಡುಗಡೆ ಮಾಡಲಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರವೂ ಬಿಡಿಗಾಸು ನೀಡಿಲ್ಲ ಎಂದರು.

ಬಿಜೆಪಿ ತನ್ನ ನಾಲ್ಕು ವರ್ಷದ ಅವಧಿಯಲ್ಲಿ ಒಂದೇ ಒಂದು ಮನೆ ನೀಡಿರಲಿಲ್ಲ. ಆದರೆ ನಾವು ಈಗಾಗಲೇ ಸಾವಿರಾರು ಮನೆಗಳನ್ನು ನೀಡಿದ್ದೇವೆ. ತಾಂಡಾ, ಹಟ್ಟಿ, ಕ್ಯಾಂಪ್‌ಗಳ ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುತ್ತಿದ್ದೇವೆ. ಸೇಡಂಗೆ ಬಂದ ಪ್ರಧಾನಿ ಮೋದಿ ಅವರು 50 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ಕೊಡುತ್ತೇವೆ ಎಂದರು. ಆದರೆ ಅದನ್ನು ಮಾಡಲಿಲ್ಲ ಎಂದರು.

ಹೊಸಪೇಟೆಯಲ್ಲಿ ಆಯೋಜಿಸಿರುವುದು ಸರ್ಕಾರದ ಸಮರ್ಪಣಾ ಸಾಧನಾ ಸಮಾವೇಶ. ಇದರಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಮೂರು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೊಂದು ಸರ್ಕಾರಿ ಕಾರ್ಯಕ್ರಮ. ಹೀಗಾಗಿ ವಿರೋಧ ಪಕ್ಷದ ನಾಯಕರು ಸಹಿತ ಎಲ್ಲಾ ಶಾಸಕರಿಗೂ ಆಹ್ವಾನ ನೀಡಿದ್ದೇವೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಿತ ಎಐಸಿಸಿಯ ಹಲವು ನಾಯಕರು, ರಾಜ್ಯದ ಎಲ್ಲಾ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದರು. 

ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಂಬಂಧ ಸಾಧನಾ ಸಮಾವೇಶದ ದಿನವೇ ಘೋಷಣೆ ಮಾಡಲಾಗುವುದು ಎಂದರು.

ಆಪರೇಷನ್ ಸಿಂದೂರದಡಿ ಉಗ್ರರ ನೆಲೆ ನಾಶ ಮಾಡಲು ನಮಗೊಂದು ಅವಕಾಶ ಸಿಕ್ಕಿತ್ತು. ಪಹಲ್ಗಾಮ್ ನಲ್ಲಿ ನಮ್ಮ ದೇಶದ 26 ಜನ ಸಾವಾಗಿದೆ. ಪಾಕಿಸ್ತಾನ ಉಗ್ರರ ಪೋಷಣೆ ಮಾಡುತ್ತಿದೆ. ಅವರಿಗೆ ಸಹಕಾರ ಕೊಡುತ್ತದೆ. ಉಗ್ರರ ನಾಶ ಮಾಡಲು ಇದೊಂದು ಅವಕಾಶ ಸಿಕ್ಕಿತ್ತು. ಹಿಂದೆ ಯುದ್ದದ ಅಗತ್ಯವಿಲ್ಲ, ಅನಿವಾರ್ಯ ಆದರೆ ಯುದ್ಧ ಮಾಡಲಿ ಎಂದು ಹೇಳಿದ್ದೆ. ಆದರೆ ಯುದ್ದ ಅಗತ್ಯ ಇಲ್ಲ ಎನ್ನುವುದನ್ನ ಅಷ್ಟೇ ಪ್ರಚಾರ ಮಾಡಿ, ಉಳಿದಿದ್ದನ್ನು ಪ್ರಸಾರ ಮಾಡಿಲ್ಲ ಎಂದರು.

ಕದನ ವಿರಾಮದ ಬಗ್ಗೆ ಮೋದಿ ಹಾಗೂ ವಿದೇಶಾಂಗ ಜೈಶಂಕರ್ ಅವರು ಹೇಳಿದ್ದಾರೆ. ಟ್ರಂಪ್ ಅವರು ಮೊನ್ನೆ ಹೇಳಿದ ಹೇಳಿಕೆ ಹಾಗೂ ನಿನ್ನೆ ಹೇಳಿದ ಹೇಳಿಕೆ ಬೇರೆ ಬೇರೆ ಇದೆ. ಟ್ರಂಪ್ ಅವರು ಮೊದಲು ಹೇಳಿದ ಹೇಳಿಕೆಯೇ ನಿಜವಾಗಿದೆ ಎನಿಸುತ್ತದೆ ಎಂದರು.

Leave a Reply