ದುರ್ಬಲ ಗ್ರಾಮ ಪಂಚಾಯತಿಗಳನ್ನು ದತ್ತು ಸ್ವೀಕರಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ: ಪ್ರಿಯಾಂಕ್ ಖರ್ಗೆ

1 year ago

ಬೆಂಗಳೂರು: ತಮ್ಮ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ಗ್ರಾಮ ಪಂಚಾಯತಿಗಳನ್ನು ಆರಿಸಿಕೊಂಡು ದತ್ತು ಸ್ವೀಕರಿಸುವ ಮೂಲಕ ಅವುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದ್ದಾರೆ.

ಗ್ರಾಮೀಣ ಕರ್ನಾಟಕದ ಕುಡಿಯುವ ನೀರು ಸರಬರಾಜು ಸ್ಥಿಗತಿಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜನಿಯ‌ರ್ ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಯಕ ಗ್ರಾಮ ಯೋಜನೆಯಡಿ ಈ ಪಂಚಾಯಿತಿಗಳನ್ನು ದತ್ತು ಸ್ವೀಕಾರ ಮಾಡಬೇಕೆಂದು ಸೂಚಿಸಿದರು.

ಗ್ರಾಮಗಳಲ್ಲಿ ಸುಸ್ಥಿರ ಜಲ ಹಾಗೂ ಸುಸ್ಥಿರ ವಿದ್ಯುತ್ ಸರಬರಾಜು ಮಾಡುವ ಮಹತ್ತರ ಆಶಯವನ್ನು ಈ ಬಾರಿ ಕಾರ್ಯಗತಗೊಳಿಸಲು ಮೊದಲ ಹೆಜ್ಜೆ ಇರಿಸಲಾಗಿದೆ ಎಂದರು.

ಗ್ರಾಮಗಳ ಸುಧಾರಣೆ, ಆರ್ಥಿಕ ಸುಸ್ಥಿರತೆಯ ಬಗ್ಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು. ಪ್ರವಾಸಿ ಸ್ಥಳಗಳಲ್ಲಿನ ಗ್ರಾಮ ಪಂಚಾಯತಿ ಆಸ್ತಿಗಳನ್ನು ವರಮಾನ ಮೂಲ ಆಸ್ತಿಗಳನ್ನಾಗಿಸಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿನ ಪಂಚಾಯತ್ ಸಂಸ್ಥೆಗಳಲ್ಲಿ ಕರ್ನಾಟಕ ಅಳವಡಿಸಿಕೊಂಡಿರುವ ಪದ್ಧತಿಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಥಮ ಸ್ಥಾನ ನೀಡಿದೆ. ಈ ಬಾರಿ ಗ್ರಾಮ ಪಂಚಾಯತಿಗಳಲ್ಲಿ 1271 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಕರಸಂಗ್ರಹಣೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಎರಡೂ ಸಾಧನೆಗಳಿಗೆ ಸಾರಥ್ಯ ವಹಿಸಿದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಶ್ಲಾಘಿಸಿದರು.

ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ರಾಜ್ಯದಲ್ಲಿ ನದಿ ನೀರಿನ ಮೂಲಗಳನ್ನು ಅವಲಂಬಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಮಳೆಗಾಲ ಹೊರತುಪಡಿಸಿ ಇತರೆ ಸಮಯದಲ್ಲಿ ನದಿಗಳಲ್ಲಿ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವ ಕಾರಣ ನಿರಂತರ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಂಭವವಿರುತ್ತದೆ ಎಂದರು.

ನೀರಿನ ಸೋರಿಕೆಯಿಂದಾಗಿ ನೀರು ಕಲುಷಿತವಾಗುವ ಸಂಭವ ಹೆಚ್ಚಿರುತ್ತದೆ. ಇದರಿಂದ ಜನರಲ್ಲಿ ಅನಾರೋಗ್ಯ ಉಂಟಾಗುವ ಕಾರಣ ನಿಯಮಿತವಾಗಿ ನೀರನ್ನು ಪರೀಕ್ಷೆ ಮಾಡಿ ಸರಬರಾಜು ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದರು.

Leave a Reply