ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಕಳೆದ ಮೂರು ದಿನಗಳಿಂದ ಉಂಟಾಗಿದ್ದ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಹಲವು ಸುತ್ತಿನ ರಾಜಿ ಸಂಧಾನದ ಬಳಿಕ ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಮ್ಮತಿಸಿದ ಡಿಕೆ ಶಿವಕುಮಾರ್ ಇದಕ್ಕಾಗಿ ಷರತ್ತು ವಿಧಿಸಿದ್ದಾರೆ.
ಎರಡೂವರೆ ವರ್ಷಗಳ ಬಳಿಕ ಅಧಿಕಾರ ಬಿಟ್ಟುಕೊಡುವ ವಾಗ್ದಾನವನ್ನು ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಡಬೇಕು ಎಂಬುದು ಡಿ.ಕೆ ಶಿವಕುಮಾರ್ ಅವರ ಷರತ್ತು ಇದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಯಿತು.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಸರಣಿ ಸಭೆಗಳು ನಡೆದವು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ನಿಲುವುಗಳಿಗೆ ಬಿಗಿಯಾಗಿ ಅಂಟಿಕೊಂಡ ಪರಿಣಾಮ ಬಿಕ್ಕಟ್ಟಿನ ವಾತಾವರಣ ಸೃಷ್ಟಿಯಾಗಿತ್ತು.
ಅಂತಿಮವಾಗಿ ಕಳೆದ ರಾತ್ರಿ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಜತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಾತುಕತೆ ನಡೆಸಿ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಂಡರು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ನಿರ್ಧಾರಕ್ಕೆ ಒಪ್ಪಿಗೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಗೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಅಧಿಕಾರ ನಡೆಸಲಿದ್ದಾರೆ. ನಂತರದ ಅವಧಿಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ.
ಒಬ್ಬರೇ ಡಿಸಿಎಂ: ಪಕ್ಷದ ನಿರ್ಧಾರವನ್ನು ಪ್ರಕಟಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಎಲ್ಲಾ ಹಿರಿಯ ನಾಯಕರ ಜತೆ ಚರ್ಚೆ ಮಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಏಕೈಕ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರು ಎಂದು ತಿಳಿಸಿದರು.
ಉಪಮುಖ್ಯಮಂತ್ರಿಯಾಗಲಿರುವ ಶಿವಕುಮಾರ್ ಮುಂಬರುವ ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಸಲು ಸೂಚಿಸಿದ್ದಾರೆ ಎಂದು ಹೇಳಿದರು.
ಮೇ 13ರಂದು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, 14ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿತ್ತು. ಅಧ್ಯಕ್ಷರು ಮೂವರು ವೀಕ್ಷಕರನ್ನು ಕಳುಹಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದರು.
ನಮ್ಮ ಪ್ರಜಾಪ್ರಭುತ್ವ ಪಕ್ಷವಾಗಿದ್ದು, ನಮ್ಮ ಪಕ್ಷದಲ್ಲಿ ಸರ್ವಾಧಿಕಾರ ನಿರ್ಧಾರಕ್ಕೆ ಅವಕಾಶ ಇಲ್ಲ ಎಂದು ವಿವರಿಸಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ಜೋಡಿ ಅತ್ಯುತ್ತಮ ಜೋಡಿಯಾಗಿದ್ದು, ಇಬ್ಬರೂ ಕಾಂಗ್ರೆಸ್ ಪಕ್ಷದ ಶಕ್ತಿ ಆಗಿದ್ದಾರೆ. ಇವರಿಬ್ಬರೂ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷರು ಈ ವಿಚಾರವಾಗಿ ಇಬ್ಬರೂ ನಾಯಕರ ಜತೆ ಪ್ರತ್ಯೇಕವಾಗಿ ಹಲವು ಸಭೆ ನಡೆಸಿ,ನಂತರ ಸೋನಿಯಾ, ರಾಹುಲ್ ಅವರ ಅಭಿಪ್ರಾಯ ಪಡೆದು ಈ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೇವಾಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿದ್ದು, ರಾಜ್ಯದ ಜನರಿಗೆ ಪಾರದರ್ಶಕ, ದಕ್ಷ ಆಡಳಿತ ನೀಡಲಿದೆ. ಆಮೂಲಕ ಕರ್ನಾಟಕ ಬ್ರ್ಯಾಂಡ್ ಮರುಸ್ಥಾಪಿಸಿ ದೇಶಕ್ಕೆ ಕರ್ನಾಟಕ ಮಾದರಿ ಆಗಲಿದೆ ಎಂದರು.




