ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ಚರ್ಚೆ ಆರಂಭ

1 year ago

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ವಿಚಾರ ಇದೀಗ ಏಕಾಏಕಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸಿನ ಹಿನ್ನೆಲೆಯಲ್ಲಿ ಯೋಧರನ್ನು ಗೌರವಿಸುವ ಸಲುವಾಗಿ ಕಾಂಗ್ರೆಸ್ ಸೇರ್ಪಡೆಸಿದ್ದ ಜೈ ಹಿಂದ್ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಕಳೆದ ರಾತ್ರಿ ಭೇಟಿ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರ ಹಸ್ತಾಂತರ ವಿಚಾರವಾಗಿ ನಡೆಸಿರುವ ಮಾತುಕತೆ ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಅಂದು ಹೈಕಮಾಂಡ್ ಮುಂದೆ ಏರ್ಪಟ್ಟ ಒಪ್ಪಂದದಂತೆ ಮೊದಲ ಎರಡು ವರ್ಷ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಲಿದ್ದು, ಉಳಿದ ಅವಧಿಗೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಲಾಗಿತ್ತು.

ಕಾಂಗ್ರೆಸ್ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲಿ ನಡೆದ ಈ ಒಪ್ಪಂದದ ಬಗ್ಗೆ ಇಲ್ಲಿಯವರೆಗೂ ಯಾರೂ ಅಧಿಕೃತವಾಗಿ ಮಾತನಾಡಿಲ್ಲ. ಹಾಗೆಯೇ ಯಾರು ಕೂಡ ಇಂತಹ ಒಪ್ಪಂದ ಏರ್ಪಟ್ಟಿಲ್ಲ ಎಂದು ಸಹ ಹೇಳುತ್ತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಗೆ ರಾಜಿ ಸೂತ್ರ ಏರ್ಪಟ್ಟಿದೆ ಎಂಬ ಮಾತುಗಳು ಮಾತ್ರ ಬಲವಾಗಿ ಕೇಳಿ ಬರುತ್ತಿವೆ. ಇದೀಗ ಈ ರಾಜಿಸೂತ್ರಕ್ಕೆ ಮತ್ತಷ್ಟು‌ ರೆಕ್ಕೆ ಪುಕ್ಕಗಳು ಬಂದಿವೆ.

ರಾಜ್ಯ ಸರ್ಕಾರ ಎರಡು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಏರ್ಪಡಿಸಲಾಗಿತ್ತು. ಈ ವೇಳೆ ಡಿ ಕೆ ಶಿವಕುಮಾರ್ ಅವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ವೇದಿಕೆಯಲ್ಲಿಯೇ ಈ ಕುರಿತು ಚರ್ಚೆ ನಡೆಸುವ ಮೂಲಕ ಗಮನ ಸೆಳೆದಿದ್ದರು. ಆದರೆ ಅಂದು ಈ ಕುರಿತಂತೆ ಯಾವುದೇ ರೀತಿಯ ಹೇಳಿಕೆ ಅವರಿಂದ ಬಿದ್ದಿರಲಿಲ್ಲ. ಆದರೆ ಇದೀಗ ವೇಣುಗೋಪಾಲ್ ಮತ್ತು ಸುರ್ಜೇವಾಲ ಅವರನ್ನು ಭೇಟಿ ಮಾಡಿ ಈ ಕುರಿತಂತೆ ಸುಧೀರ್ಘ ಮಾತುಕತೆ ನಡೆಸಿರುವುದಾಗಿ ಡಿ ಕೆ ಶಿವಕುಮಾರ್ ಅವರ ಆಪ್ತ ಮೂಲಗಳು ತಿಳಿಸಿವೆ.

ಈ ವೇಳೆ ಉಭಯ ನಾಯಕರು ಬರುವ ನವೆಂಬರ್ ವೇಳೆಗೆ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಹೈಕಮಾಂಡ್ ವತಿಯಿಂದ ರಾಜಿ ಸೂತ್ರ ಒಂದನ್ನು ಏರ್ಪಡಿಸುತ್ತೇವೆ. ಮುಖ್ಯಮಂತ್ರಿ ಸ್ಥಾನ ತೊರೆಯಲಿರುವ ಸಿದ್ದರಾಮಯ್ಯ ಅವರಿಗಾಗಿ ಉನ್ನತ ಹುದ್ದೆಯೊಂದನ್ನು ಸೃಷ್ಟಿ ಮಾಡಲಾಗುವುದು. ಹಾಗೆ ಪಕ್ಷದಲ್ಲಿ ಅವರಿಗೆ ಮಹತ್ವದ ಜವಾಬ್ದಾರಿ ನೀಡಿ ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ನಡೆಸುವಂತೆ ವ್ಯವಸ್ಥೆ ಮಾಡಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಇದಕ್ಕೆ ನೀವು ಸಿದ್ದರಾಗಬೇಕು ಎಂದು ಶಿವಕುಮಾರ್ ಅವರಿಗೆ ತಿಳಿಸಿರುವುದಾಗಿ ಗೊತ್ತಾಗಿದೆ.

ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಹುದ್ದೆ ತೊರೆಯಲಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಸಲಾಗುತ್ತದೆ. ಪಕ್ಷದ ಶಾಸಕಾಂಗ ನಾಯಕರಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಲಿದ್ದು, ಅದಕ್ಕೆ ಉಳಿದ ಶಾಸಕರು ಅನುಮೋದನೆ ನೀಡಲಿದ್ದಾರೆ. ಈ ಮೂಲಕ  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ತೊರೆದರೂ ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮದೇ ಆದ ಹಿಡಿತ ಹೊಂದಲು ತಂತ್ರ ಹೆಣೆಯಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿಯ ಪಾಳಯದಲ್ಲಿ ಮತ್ತೊಂದು ರಾಜಕೀಯ ತಂತ್ರಗಾರಿಕೆಯನ್ನು ಹೆಣೆಯಲಾಗುತ್ತಿದೆ. ಯಾವುದೇ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಬಾರದು. ಒಂದುವೇಳೆ ಅಂತಹ ಅನಿವಾರ್ಯತೆ ಉಂಟಾದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿಯೇ ಶಾಸಕರ ಅಭಿಪ್ರಾಯ ಆಲಿಸಿ ತೀರ್ಮಾನ ಕೈಗೊಳ್ಳಬೇಕು ಎಂಬ ಒತ್ತಡವನ್ನು ಹೈಕಮಾಂಡ್ ಮೇಲೆ ಹೇರಲು ಸಿದ್ಧತೆ ನಡೆದಿದೆ.

ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಿದ್ದು ಶಾಸಕಾಂಗ ಪಕ್ಷದ ಸಭೆಯಲ್ಲಿ ಇವರಾರು ಕೂಡ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರನ್ನು ತಮ್ಮ ನಾಯಕ ಎಂದು ಕೋಪಲು ಸಿದ್ಧರಿಲ್ಲ. ಈ ಅವಕಾಶವನ್ನು ಬಳಸಿಕೊಂಡು ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಮುಂದುವರೆಯಲು ತಂತ್ರ ರೂಪಿಸಿದ್ದಾರೆ ಎಂದು ಗೊತ್ತಾಗಿದೆ.

ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಒಪ್ಪದೇ ಸರ್ಕಾರ ರಚನೆಯಾದ ಸಮಯದಲ್ಲಿ ಆಗ ಒಪ್ಪಂದದಂತೆ ಅಧಿಕಾರ ಹಸ್ತಾಂತರವಾಗಬೇಕು ಎಂಬ ವಾದ ಮಂಡಿಸಿದರೆ, ಅದಕ್ಕೆ ದಲಿತ ಮುಖ್ಯಮಂತ್ರಿ ಎಂಬ ವಾದ ಮಂಡಿಸಲು ಸಿದ್ಧತೆ ನಡೆದಿದೆ.

ಈ ಹಿಂದೆ ಇಂತಹ ಪ್ರಯತ್ನ ನಡೆದಿದ್ದು ಗೃಹ ಸಚಿವ ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದವು. ರಾಜ್ಯದಲ್ಲಿ ಇಲ್ಲಿಯವರೆಗೆ ದಲಿತ ಸಮುದಾಯಕ್ಕೆ ಸಿಕ್ಕಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸುದೀರ್ಘ ಒಂಬತ್ತು ವರ್ಷಗಳ ಕಾಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಪರಮೇಶ್ವರ ಅವರಿಗೆ ಈ ಬಾರಿ ಉನ್ನತ ಹುದ್ದೆ ಲಭಿಸಬೇಕು ಎಂದು ವಾದ ಮಂಡಿಸಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಾದವನ್ನು ಬೆಂಬಲಿಸಿದ್ದರು.

ಆದರೆ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇತ್ತೀಚಿನ ಜಾರಿ ನಿರ್ದೇಶನಾಲಯದ ದಾಳಿ ಹಿನ್ನೆಲೆಯಲ್ಲಿ ಪರಮೇಶ್ವರ ಹೆಸರು ತೆರೆಮರೆಗೆ ಸರಿದಿದೆ. ಹೀಗಾಗಿ ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ದಲಿತ ಸಮುದಾಯದ ಹಿರಿಯ ನಾಯಕ ಡಾ. ಎಚ್ ಸಿ ಮಹದೇವಪ್ಪ ಅವರ ಹೆಸರು ಮುನ್ನೆಲೆಗೆ ಬಂದಿದೆ.

ಮಹಾದೇವಪ್ಪ ಅವರು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿದ್ದು, ಈ ವರ್ಗ ಕಾಂಗ್ರೆಸ್ ನ ಪ್ರಬಲ ಮತ ಬ್ಯಾಂಕ್ ಆಗಿದೆ ಜೊತೆಗೆ, ಮಹಾದೇವಪ್ಪ ಅವರು ಸಂವಿಧಾನ ನಡಿಗೆ ಹಾಗೂ ಸರ್ಕಾರದ ಎಲ್ಲ ಕಚೇರಿಗಳಲ್ಲೂ ಸಂವಿಧಾನದ ಪೀಠಿಕೆ ಅಳವಡಿಸುವ ತೀರ್ಮಾನದ ಮೂಲಕ ಹೈಕಮಾಂಡ್ ಗಮನ ಸೆಳೆದಿದ್ದಾರೆ. ಜೊತೆಗೆ ಸಂಘ ಪರಿವಾರ ಮತ್ತು ಬಿಜೆಪಿಯ ಕಟು‌ ಟೀಕಾಕಾರವಾಗಿಯೂ ಕೂಡ ಗಮನ ಸೆಳೆದಿರುವ ಮಹಾದೇವಪ್ಪ ಅವರ ಹೆಸರನ್ನು ಪ್ರಸ್ತಾಪಿಸಿದರೆ ಹೈಕಮಾಂಡ್ ಕೂಡ ಸಮ್ಮತಿಸಬಹುದು ಎನ್ನುವುದು ಈ ಪಾಳೆಯದ ಲೆಕ್ಕಾಚಾರವಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ವಾರದ ನಂತರ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಪಾಳಯದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

Leave a Reply