ವಿಜಯಪುರ: ಜನ ಕೊರೊನಾದಿಂದ ನರಳುತ್ತಿರುವಾಗ ಸರ್ಕಾರ ಆಸ್ಪತ್ರೆ, ಆಕ್ಸಿಜನ್, ಹಾಸಿಗೆಗಳು, ವೆಂಟಿಲೇಟರ್, ಆಂಬುಲೆನ್ಸ್ ವ್ಯವಸ್ಥೆ ಮಾಡದೆ ಬೀದಿ ಬೀದಿಯಲ್ಲಿ ಸಾಯಲು ಬಿಟ್ಟಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿಂಧಗಿ ವಿಧಾನಸಭೆ ಕ್ಷೇತ್ರದ ಮೊರಟಗಿ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ಮತ ನೀಡುವಂತೆ ಮನವಿ ಮಾಡಿ ಮಾತಾಡಿದ ಅವರು, ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿ ಇವತ್ತಿನವರೆಗೆ ನಯಾಪೈಸೆ ಪರಿಹಾರವನ್ನೂ ನೀಡಿಲ್ಲ. ರಾಜ್ಯದಲ್ಲಿ ಕನಿಷ್ಠ 4 ಲಕ್ಷ ಮತ್ತು ದೇಶದಲ್ಲಿ ಸುಮಾರು 50 ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ. ಇಂಥಾ ಕೊಲೆಗಡುಕ ಸರ್ಕಾರಕ್ಕೆ ಮತ ನೀಡೋದು ಸರಿನಾ ಎಂದು ಜನ ಯೋಚನೆ ಮಾಡಬೇಕು ಎಂದರು.
ಸಿಂಧಗಿ ಕ್ಷೇತ್ರದಿಂದ ಎಂ.ಸಿ ಮನಗೂಳಿಯವರು ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದರು, ಆದರೆ ಇಂದು ಅವರು ನಮ್ಮೊಂದಿಗಿಲ್ಲ. ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಇದನ್ನು ನಾವ್ಯಾರು ಬಯಸಿರಲಿಲ್ಲ, ಆದರೆ ಅನಿವಾರ್ಯವಾಗಿ ಚುನಾವಣೆ ಎದುರಿಸಬೇಕಿದೆ. ಎಂ.ಸಿ ಮನಗೂಳಿಯವರು ದೈವಾದೀನರಾಗುವ ಮುನ್ನ ನಮ್ಮ ಮನೆಗೆ ಬಂದಿದ್ದರು, ಆಗ ಅವರು ತಮ್ಮ ಮಗನನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ರಾಜಕೀಯವಾಗಿ ಬೆಳೆಸಿ ಎಂದು ನನ್ನ ಬಳಿ ಕೇಳಿಕೊಂಡಿದ್ದರು. ತಂದೆಯ ಇಚ್ಛೆಯಂತೆ ಅಶೋಕ್ ಮನಗೂಳಿ ಕಾಂಗ್ರೆಸ್ ಸೇರಿದರು. ಈಗಿನ ಉಪಚುನಾವಣೆಯಲ್ಲಿ ನಮ್ಮ ಸರ್ವಸಮ್ಮತ ಅಭ್ಯರ್ಥಿ ಕೂಡ ಆಗಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಯಡಿಯೂರಪ್ಪ ಅವರು ಅಧಿಕಾರ ಇಲ್ಲದೆ ಸುಮ್ಮನಿರೊ ಗಿರಾಕಿಯಲ್ಲ, ಹಾಗಾಗಿ ಎರಡೂ ಪಕ್ಷಗಳ ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿ ಅವರನ್ನು ಖರೀದಿಸಿ, ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದರು. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿಸಿ, ಸರ್ಕಾರ ರಚನೆ ಮಾಡಿಸಿ, ಎರಡು ವರ್ಷ ಆಗ್ತಾ ಇದ್ದ ಹಾಗೆ ಯಡಿಯೂರಪ್ಪ ಅವರನ್ನೇ ಕಿತ್ತು ಬಿಸಾಕಿದರು ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ, ರಾಜ್ಯದ ಜನರಿಗಾಗಿ ಏನೆಲ್ಲಾ ಕೆಲಸ ಮಾಡಿದ್ದಾರೆ ಎಂದು ಅವರೂ ಪಟ್ಟಿಕೊಡಲಿ, ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ. ಸಿಂಧಗಿ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ಮಾಡಿದವರು ಎಂ.ಸಿ.ಮನಗೂಳಿ ಅವರು, ಇವತ್ತು ಅವರ ಹೋರಾಟದ ಲಾಭವನ್ನು ಪಡೆಯಲು ಇನ್ಯಾರೋ ಹೊರಟಿದ್ದಾರೆ. ಕ್ಷೇತ್ರದ ಜನ ಅಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಹೀಗೆ ನಮ್ಮ ಸರ್ಕಾರ ಹಲವು ಯೋಜನೆಗಳು ಇಂದು ಸ್ಥಗಿತಗೊಂಡಿವೆ. ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಐದು ಕೆ.ಜಿ ಗೆ ಕಡಿತ ಮಾಡಿದ್ದಾರೆ. ಕೊರೊನಾ ಮಿತಿಮೀರಿ ಹರಡಿರುವುದರಿಂದ ಲಾಕ್ ಡೌನ್ ಹೇರಿದ್ದೀರ, ಜನರಿಗೆ ದುಡಿಮೆ ಇಲ್ಲ, ಹೊಟ್ಟೆಪಾಡಿಗೂ ಕಷ್ಟ ಆಗಿದೆ, ಬಡವರಿಗೆ ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಸರ್ಕಾರವನ್ನು ಒತ್ತಾಯ ಮಾಡಿದೆ, ಅದಕ್ಕೆ ಯಡಿಯೂರಪ್ಪ ಸರ್ಕಾರದ ಬಳಿ ಹಣವಿಲ್ಲ ಎಂದರು ಎಂದು ಅವರು ಹೇಳಿದರು.
ನಮ್ಮ ಸರ್ಕಾರ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು, ಈಗಿನ ಸರ್ಕಾರ ಒಂದೇ ಒಂದು ಮನೆ ಕಟ್ಟಿ ಕೊಟ್ಟ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ನಾವು ಕೊಟ್ಟಿದ್ದ ಕೆಲವು ಮನೆಗಳಿಗೆ ಹಣ ಬಿಡುಗಡೆ ಮಾಡದೆ ಲಾಕ್ ಮಾಡಿದ್ದಾರೆ. ಪಾಪ ಬಡವರು ಮನೆ ಇಲ್ಲದೆ ಎಲ್ಲಿಗೆ ಹೋಗಬೇಕು? ಎಂದು ಅವರು ಪ್ರಶ್ನಿಸಿದರು.
ಉದ್ಯೋಗ ಖಾತ್ರಿ ಯೋಜನೆ, ಆಹಾರ ಸುರಕ್ಷತಾ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ದೇಶಕ್ಕೆ ನರೇಂದ್ರ ಮೋದಿ ಅವರ ಕೊಡುಗೆ ಏನು? ಅಚ್ಚೇ ದಿನ್ ಬರುತ್ತೆ ಎಂದು ಮೋದಿ ಹೇಳಿದ್ರು, ಅವರು ಅಧಿಕಾರಕ್ಕೆ ಬಂದು ಏಳು ವರ್ಷ ಆಯ್ತಲ್ಲಾ ನಿಮಗೆಲ್ಲಾ ಅಚ್ಚೇ ದಿನ ಬಂತಾ? ಈಗ ಪೆಟ್ರೋಲ್ ಬೆಲೆ 110, ಡೀಸೆಲ್ ಬೆಲೆ 100, ಗ್ಯಾಸ್ ಬೆಲೆ 950 ರೂಪಾಯಿ ಆಗಿದೆ. ಇದೇನಾ ಅಚ್ಚೇ ದಿನ್? ಎಂದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಯುವಕರಿಗೆ ಮೋದಿ ಭರವಸೆ ನೀಡಿದ್ರು, ಪಾಪ ಯುವಕರು ಅದನ್ನು ನಂಬಿ ಓಟು ಹಾಕಿ ಗೆಲ್ಲಿಸಿದ್ರು, ಈಗ ಹನ್ನೆರಡು ಕೋಟಿ ಉದ್ಯೋಗ ಸೃಷ್ಟಿಯಾಗುವ ಬದಲು ಇದ್ದ ಉದ್ಯೋಗವೂ ಕಿತ್ತುಕೊಂಡು ಹೋಗಿದೆ. ಜನ ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಎಂದು ಉಪದೇಶ ಕೊಡ್ತಾರೆ. ಮೊದಲು ಮೋದಿ, ಮೋದಿ ಎಂದು ಕೂಗುತ್ತಿದ್ದವರೇ ಇಂದು ಮೋದಿ ಹೆಸರು ಕೇಳಿದರೆ ಉರಿದು ಬೀಳ್ತಿದ್ದಾರೆ ಎಂದರು.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಿಷನ್ ಹಾನಗಲ್, ಮಿಷನ್ ಸಿಂಧಗಿ ಎಂಬ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದು ಎರಡು ವರ್ಷ ಆಯ್ತಲ್ಲಾ ಇವತ್ತು ಅವರಿಗೆ ಹಾನಗಲ್ ಮತ್ತು ಸಿಂಧಗಿ ನೆನಪಾಗಿದ್ದಾ? ಇಂಥಾ ಬೂಟಾಟಿಕೆಯ ಮಾತುಗಳನ್ನು ನಂಬಿ ಜನ ಮೋಸಹೋಗಬಾರದು, ಬಿಜೆಪಿಯವರು ಸುಳ್ಳಿನ ಕಾರ್ಖಾನೆಯನ್ನೇ ನಡೆಸೋರು ಎಂದರು.
14ನೇ ಹಣಕಾಸು ಶಿಫಾರಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು 38,000 ಕೋಟಿ ರೂಪಾಯಿ ಬರುತ್ತಿತ್ತು. ಈಗದು 20,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿ.ಎಸ್.ಟಿ ಪರಿಹಾರದ ಹಣ ಇವೆಲ್ಲಾ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ. 40,000 ಕೋಟಿ ನಷ್ಟವಾಗ್ತಿದೆ. ಈ ಅನ್ಯಾಯಗಳ ಬಗ್ಗೆ ಒಮ್ಮೆಯಾದರೂ ಬಾಯಿಬಿಟ್ಟು ಮಾತನಾಡಿದ್ದಾರ? ನಮ್ಮ ಸರ್ಕಾರವೇ ಅಧಿಕಾರದಲ್ಲಿ ಇದ್ದಿದ್ದರೆ ನರೇಂದ್ರ ಮೋದಿ ಅವರ ಮುಂದೆ ಧರಣಿ ಮಾಡಿ ನಮ್ಮ ಪಾಲಿನ ಅನುದಾನವನ್ನು ವಸೂಲಿ ಮಾಡಿಕೊಂಡು ಬರ್ತಿದ್ದೆ. ರಾಜ್ಯ ಬಿಜೆಪಿ ನಾಯಕರ ಹೇಡಿತನ ಮತ್ತು ಗುಲಾಮಗಿರಿಯಿಂದಾಗಿ ರಾಜ್ಯದ ಹಿತವನ್ನು ಬಲಿಕೊಡಲು ಹೊರಟಿದ್ದಾರೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕ? ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಬಿಜೆಪಿ ಮಾಡಿರುವ ಅನ್ಯಾಯಗಳಿಗೆ ತಕ್ಕ ಉತ್ತರ ನೀಡಲು ಜನರಿಗೆ ಉಪಚುನಾವಣೆಯಲ್ಲಿ ಒಂದು ಅವಕಾಶ ಸಿಕ್ಕಿದೆ. ಜನವಿರೋಧಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತನೀಡುವ ಮೂಲಕ ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.




