ಬೆಂಗಳೂರು: ರಾಜ್ಯದಲ್ಲಿ ರೈಸ್ ಪಾಲಿಟಿಕ್ಸ್ ತೀವ್ರಗೊಂಡಿದೆ. ರಾಜ್ಯದ ಬೇಡಿಕೆ ಎಷ್ಟು ಕೇಂದ್ರ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದರೆ, ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ 10 ಕೆಜಿ ಉಚಿತವಾಗಿ ಅಕ್ಕಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಪರಸ್ಪರ ವಿರುದ್ಧ ಆರೋಪ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹಾಗೂ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ನಾಯಕರು ಬಡವಿರೋಧಿ, ಜನವಿರೋಧಿ ನೀತಿಯ ಕೇಂದ್ರ ಸರ್ಕಾರ ಹೇಳಿದಂತೆ ಅಕ್ಕಿ ಕೊಡದೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರಧಾನಿ ಮನಮೋಹನಸಿಂಗ್ ಅವರು ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿದ್ದರು. ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 5 ಕೆ.ಜಿ. ಅಕ್ಕಿ ಕೊಡುತ್ತಾ ಬಂದಿದ್ದೇವೆ. ಸಿದ್ಧರಾಮಯ್ಯನವರು ಅದನ್ನು 7 ಕೆ.ಜಿ.ಗೆ ಏರಿಸಿದರು. ಪ್ರಸ್ತುತ 5 ಗ್ಯಾರಂಟಿಗಳ ಪೈಕಿ 10 ಕೆ.ಜಿ. ಅಕ್ಕಿ ಕೊಡುವುದು ಒಂದಾಗಿದ್ದು, ಈಗ ಗ್ಯಾರಂಟಿ ಯೋಜನೆ ಅನ್ನಭಾಗ್ಯ ಜಾರಿಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಕೇಂದ್ರ ಈಗ ಆಗುವುದಿಲ್ಲ ಎಂಬ ಕಾರಣ ನೀಡಿದೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಂದು ಗ್ರಾಂ ಕಡಿಮೆಯಾದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ರೈತರ ಆದಾಯ ಡಬ್ಬಲ್ ಮಾಡುತ್ತೇವೆ ಎಂದು ಎಲ್ಲರ ಅಕೌಂಟಿಗೆ 15 ಲಕ್ಷ ಹಾಕ್ತೇವೆ ಎಂದು ಹೇಳಿದ ಪ್ರಧಾನಿ ಮೋದಿ ವಿರುದ್ಧ ಬಿಜೆಪಿಯವರು ಮೊದಲು ಪ್ರತಿಭಟನೆ ಮಾಡಲಿ. ಆಮೇಲೆ ನಮ್ಮ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಹೇಳಿದರು.
ಈಗಾಗಲೇ ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. 3 ಕೋಟಿ 30 ಲಕ್ಷ ಮಹಿಳಾ ಪ್ರಯಾಣಿಕರು ಬಸ್‍ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಹೋಗಿದ್ದಾರೆ. ದೇವರ ದರ್ಶನಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ ಎಂದು ಜನ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಬಡವ ವಿರೋಧಿ ಸರ್ಕಾರ. ಇಲ್ಲಿನ ಬಿಜೆಪಿಯವರು ಕೇಂದ್ರ ಸರ್ಕಾರಕ್ಕೆ ಹೇಳಿಕೊಟ್ಟು ಅಕ್ಕಿ ಕೊಡದಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಶಕ್ತಿ ಯೋಜನೆ ಯಶಸ್ವಿಯಾಗುತ್ತಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ ಆಗಸ್ಟ್ ಒಳಗೆ ಮಾಡುತ್ತೇವೆ ಎಂದರು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವೆ ರಾಣಿ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.
ಬಿಜೆಪಿ ಪ್ರತಿಭಟನೆ: ಮತ್ತೊಂದೆಡೆ, ವಿಧಾನಸಭೆ ಚುನಾವಣೆಗೂ ಮುನ್ನ ಜನತೆಗೆ ವಾಗ್ದಾನ ಮಾಡಿದಂತೆ 10 ಕೆ.ಜಿ. ಅಕ್ಕಿ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿ ಬಿಜೆಪಿ ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಿತು.
ರಾಜ್ಯದ ನಾನಾಕಡೆ ಮಳೆ ಸುರಿಯುತ್ತಿರುವ ಕಾರಣ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದ್ದು, ಜುಲೈ 4ರಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇಂದು ಬೆಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಉಡುಪಿ, ಕಲಬುರಗಿ, ಮಂಗಳೂರು, ಚಿಕ್ಕಮಗಳೂರು, ಬಳ್ಳಾರಿ, ವಿಜಯನಗರ ಮತ್ತಿತರ ಕಡೆ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ,ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಆನಂದರಾವ್ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.
ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಶಾಸಕ ಎ.ಕೃಷ್ಣಪ್ಪ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾವು ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ ಎಂದು ಹೇಳಿದ್ದರು. ಇವರು ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಬರುತ್ತಿರುವ ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದೆ. ಕೊವಿಡ್ ಸಂದರ್ಭದಲ್ಲಿ ದೇಶದ ಎಲ್ಲ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಇವರು ಸುಳ್ಳು ಹೇಳಿ ಈಗ ಗ್ಯಾರೆಂಟಿ ಜಾರಿ ಮಾಡುವಾಗಲೂ ಕಂಡಿಷನ್ ಹಾಕಿದ್ದಾರೆ ಎಂದು ಕಿಡಿಕಾರಿದರು.
ಜುಲೈ 1 ರಂದು ಮೈಸೂರಿನಿಂದ ಚಾಲನೆ ನೀಡುವುದಾಗಿ ಹೇಳಿದ್ದಾರೆ. ಅದನ್ನು ಮಾಡುವ ಬದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಿಮಗೆ ಧಮ್ ತಾಕತ್ತು ಇದ್ದರೆ ಜನರಿಗೆ ಪ್ರತಿ ವ್ಯಕ್ತಿಗೆ 15 ಕೆಜಿ ಅಕ್ಕಿ ಕೊಡಬೇಕು ಎಂದು ಸವಾಲು ಹಾಕಿದರು.
ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಚುನಾವಣೆಗೂ ಮುನ್ನ ಜನತೆಗೆ ಕೊಟ್ಟ ವಾಗ್ದಾನದಂತೆ ರಾಜ್ಯಸರ್ಕಾರ 10 ಕೆ.ಜಿ. ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ಜು. 1ರಿಂದಲೇ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸ್ ನಾಯಕರೇ ನಿಮಗೆ ಮಾನ-ಮರ್ಯಾದೆ ಇದೆಯೇ? ಈಗ ಡೋಂಗಿ ರಾಜಕಾರಣ ಮಾಡುತ್ತಿದ್ದೀರ. ನಿಮಗೆ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದು ಗ್ಯಾರಂಟಿ ಕೊಟ್ಟಿತ್ತೇ ಎಂದು ಪ್ರಶ್ನಿಸಿದರು.
ಇನ್ನು ಮಳೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ್ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಅವರ ವಿರುದ್ಧ ಗರಂ ಆದ ಪ್ರಸಂಗವೂ ಜರುಗಿತು.ಕಾಂಗ್ರೆಸ್‍ನವರು ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿದ್ದೀರಿ. ನಾವು ಕೇಳಿದರೆ ಸಬೂಬು ಹೇಳುತ್ತಿದ್ದೀರಿ. ನೀವು ಸಾರ್ವಜನಿಕರ ಸೇವಕರೇ ಹೊರತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಂತೆ ವರ್ತಿಸಬಾರದು. ಇದೇ ರೀತಿ ನಡೆದುಕೊಂಡರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ಕೊಡಬೇಕಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.




